ಬಹುಶಃ ನೀವು ನಂಬಲಿಕ್ಕಿಲ್ಲ ಅಥವಾ ನೀವೂ ಅದೇ ವರ್ಗಕ್ಕೆ ಸೇರಿದವರಾಗಿರಬಹುದು.
ನನ್ನ ಗೆಳೆಯರೊಬ್ಬರಿದ್ದಾರೆ. ಜವಾಬ್ದಾರಿಯುತ ಹುದ್ದೆ. ಅವರ ಸಮಸ್ಯೆ ಎಂದರೆ ತಲೆನೋವು. 'ನೀನೊಬ್ಬ ತಲೆನೋವಿನ ಗಿರಾಕಿ ಮಾರಾಯ' ಎಂದು ಛೇಡಿಸಿದರೆ ಆತ ಅನ್ಯಥಾ ಭಾವಿಸುತ್ತಿರಲಿಲ್ಲ. ಏಕೆಂದರೆ ಆತನಿಗೆ ತಲೆನೋವು ಇಲ್ಲದ ದಿನಗಳೇ ಇರಲಿಲ್ಲ. ನೋವು ಕಾಣಿಸಿಕೊಂಡಾಗ ತಕ್ಷಣದ ಪರಿಹಾರಕ್ಕಾಗಿ ಆತ ಕಂಡುಕೊಂಡಿದ್ದು ನೋವು ನಿವಾರಕ ಮಾತ್ರೆಗಳನ್ನು. ಆರಂಭದಲ್ಲಿ ಕೆಲವು ಮಾತ್ರೆಗಳು 5-10 ನಿಮಿಷಗಳಲ್ಲಿ ನೋವನ್ನು ಶಮನ ಮಾಡುತ್ತಿದ್ದವು. ಆಮೇಲಾಮೇಲೆ ಅರ್ಧ ಗಂಟೆ, ಒಂದು ಗಂಟೆ ಬೇಕಾಗುತ್ತಿತ್ತು. ನೋವು ಕಡಿಮೆಯಾದಂತೆ ಅನ್ನಿಸಿದರೂ ಅದರ ಪ್ರಭಾವ ಎರಡ್ಮೂರು ತಾಸು ಅಷ್ಟೆ. ಬಳಿಕ ಹಿಂದಿಗಿಂತ ತೀವ್ರ ನೋವಿನೊಂದಿಗೆ ಮರುಕಳಿಸುತ್ತಿತ್ತು. ಆಗ ಮತ್ತೆ ಮಾತ್ರೆ ಮೊರೆ. ಹೀಗೆ ಅಭ್ಯಾಸವಾಗಿ ಕೊನೆಗೆ 4-5 ಮಾತ್ರೆಗಳನ್ನು ಸೇವಿಸುವ ಮಟ್ಟಕ್ಕೆ ಹೋಯಿತು. ವೈದ್ಯರೂ ಎಚ್ಚರಿಸಿದ್ದರು, 'ಈ ಪ್ರಮಾಣದಲ್ಲಿ ನೋವು ನಿವಾರಕಗಳನ್ನು ಸೇವಿಸುವುದು ಅಪಾಯಕಾರಿ' ಎಂದು. ಆದರೆ ಹಾಳಾದ ನೋವು ಬಿಡಬೇಕಲ್ಲ. ಮಾತ್ರೆ ನುಂಗುವಂತೆ ಪ್ರೇರೇಪಿಸುತ್ತಿತ್ತು.
ಆತ ಈ ಪ್ರಮಾಣದಲ್ಲಿ ಮಾತ್ರೆಗಳ ದಾಸನಾಗಿದ್ದಾನೆ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಗೊತ್ತಾದಾಗ ಹೇಳಿದೆ, 'ಸ್ವಲ್ಪ ಕಾಲ ನೋವು ಸಹಿಸಿಕೊಳ್ಳುತ್ತೀ ಅಂತಾದರೆ ನಿನಗೆ ಮಾತ್ರೆಗಳಿಂದ ಶಾಶ್ವತವಾಗಿ ಬಿಡುಗಡೆ ಮಾಡಿಸುತ್ತೇನೆ.' ಇದೂ ಒಂದು ಆಗಿಬಿಡಲಿ ಎನ್ನುವ ಧೋರಣೆಯಿಂದ ಒಪ್ಪಿಕೊಂಡ. ಈಗ ಅವನಿಗೆ ತಲೆನೋವಿನ ಬಾಧೆ ಅಷ್ಟಾಗಿ ಇಲ್ಲ. ನಾನು ಮಾಡಿದ್ದಿಷ್ಟೆ, ಪ್ರತಿದಿನ ಆತನ ಆಹಾರ ಕ್ರಮವನ್ನು ಟೈಮ್ ಆರ್ಡರ್‌ನಲ್ಲಿ ದಾಖಲಿಸುವಂತೆಯೂ, ತಲೆನೋವು ಕಾಣಿಸಿಕೊಂಡಾಗ ಯಾವ ಸಮಯದಲ್ಲಿ ಶುರುವಾಯಿತು, ಅದರ ತೀವ್ರತೆ ಹೇಗಿತ್ತು? ಎನ್ನುವುದನ್ನೂ ಬರೆದಿಡುವಂತೆಯೂ ಸೂಚಿಸಿದ್ದೆ. 15 ದಿನಗಳ ಬಳಿಕ ಆ ದಾಖಲೆಗಳನ್ನು ಪರಿಶೀಲಿಸಿದಾಗ ನಿರ್ದಿಷ್ಟ ಆಹಾರ ಸೇವಿಸಿದಾಗಲೇ ತಲೆನೋವು ಕಾಣಿಸಿಕೊಂಡಿದ್ದು ಗಮನಕ್ಕೆ ಬಂತು. ಮುಂದಿನ 15 ದಿನಗಳಲ್ಲಿ ಆ ಆಹಾರಗಳನ್ನು ನಿಧಾನಕ್ಕೆ ಕಡಿಮೆ ಮಾಡುತ್ತ ಬರಲು ಸಲಹೆ ಮಾಡಿದೆ. ಅದನ್ನೂ ಪಾಲಿಸಿದ ಮತ್ತು ಈ ಅವಧಿಯಲ್ಲಿ ತಲೆನೋವು ಗಣನೀಯವಾಗಿ ಕಡಿಮೆಯಾಗಿತ್ತು. ನಾನು ನೀಡಿದ್ದ ಭರವಸೆಯಂತೆ ಒಂದು ತಿಂಗಳ ಅವಧಿಯಲ್ಲಿ ಆತನನ್ನು ಮಾತ್ರೆಗಳ ಸಂಕೋಲೆಯಿಂದ ಬಿಡುಗಡೆ ಮಾಡಿದೆ. 'ನನಗೇ ನಂಬಿಕೆ ಇರಲಿಲ್ಲ ಮಾರಾಯಾ. ಮ್ಯಾಜಿಕ್ ಮಾಡಿಬಿಟ್ಟೆ' ಎಂದು ಖುಷಿಯಿಂದ ಕುಣಿದಾಡಿಬಿಟ್ಟ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)