ಸಾಪ್ತಾಹಿಕಪ್ರಭ

ತುಳು ಸಂಸ್ಕೃತಿಯೆಡೆ ನಾವಡರ ದೃಷ್ಟಿ

ತುಳು ಭಾಷೆ, ತುಳು ಸಾಹಿತ್ಯ ಮತ್ತು ತುಳು ಜಾನಪದದಲ್ಲಿ ಹೆಚ್ಚಿನ ಪರಿಶ್ರಮ ಹೊಂದಿರುವ ಡಾ.ಎ.ವಿ.ನಾವಡ ಅವರು 'ತುಳು ಪೊಲಿ' ಎಂಬು ಅಧ್ಯಯನಪೂರ್ಣವಾದ ಕೃತಿಯನ್ನು ಹೊರತಂದಿದ್ದಾರೆ. ತುಳು ಭಾಷೆ ಮತ್ತು ತುಳು ಜಾನಪದದ ಬಗ್ಗೆ ಈಗಾಗಲೆ ಹಲವಾರು ಕೃತಿಗಳು ಬಂದಿವೆ. ಅವುಗಳಿಗೆ ಪೂರಕವಾಗಿ ಈ ಕೃತಿ ಇದೆ. ಬಹಳಷ್ಟು ಕ್ಷೇತ್ರಕಾರ್ಯ ಮಾಡಿ ಜಾನಪದರ ನಾಲಗೆಯಲ್ಲಿದ್ದ ಭಾಷಿಕ-ಸಾಂಸ್ಕೃತಿಕ ಸಂಪತ್ತನ್ನು ಅವರು ಸಂಗ್ರಹಿಸಿದ್ದಾರೆ.
ತುಳು ಜಾನಪದವನ್ನು ಅದರ ಪ್ರಾದೇಶಿಕ ಅನನ್ಯತೆಯ ಜೊತೆಗೆ ವಿಶ್ವಾತ್ಮಕ ನೆಲೆಯಲ್ಲೂ ಪರಿಶೀಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜಾನಪದವನ್ನು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಷ್ಟೇ ನೋಡದೆ ಸಮಾಜಶಾಸ್ತ್ರ ಮಾನವಶಾಸ್ತ್ರ ಭಾಷಾವಿಜ್ಞಾನದ ನೆಲೆಯಲ್ಲೂ ಬಹುಶಿಸ್ತೀಯ ಅಧ್ಯಯನವಾಗಿ ಪರಿಗಣಿಸಬೇಕು ಎಂಬ ಅರಿವಿನೊಂದಿಗೆ ಅವರು ಈ ಕೃತಿಯ ರಚನೆಗೆ ಕೈಹಾಕಿದ್ದಾರೆ. ಐದು ಕಟ್ಟುಗಳು ಮತ್ತು ಒಂದು ಅನುಬಂಧದಲ್ಲಿ ಕೃತಿ ಮೈತಳೆದಿದೆ. ತುಳುನಾಡಿನ ಭೌಗೋಳಿಕ, ಐತಿಹಾಸಿಕ ಹಿನ್ನೆಲೆ, ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನ, ತುಳು ಪಾಡ್ದನಗಳು, ತುಳು ಭಾಷೆಯ ಸುತ್ತಮುತ್ತ, ತುಳು ನಿಘಂಟುಗಳು, ತುಳುಸಾಹಿತ್ಯದ ಸುತ್ತಮುತ್ತ, ತುಳು ಜನ... ಹೀಗೆ ಅವರ ಅಧ್ಯಯನದ ಹರಹು ಇದೆ.

ತಮ್ಮ ಪೂರ್ವಸೂರಿಗಳ ಕೃತಿಗಳನ್ನು ಓದಿ ಅಲ್ಲಿಯ ವಿಷಯಗಳನ್ನು ಗ್ರಹಿಸಿ ಅವನ್ನು ಒರೆಗೆ ಹಚ್ಚುವುದು, ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು, ಹೀಗಿದ್ದಿರಬಹುದೆ ಎಂದು ಊಹಿಸುವುದು, ಈ ದಿಶೆಯಲ್ಲಿ ಸಂಶೋಧನೆಗೆ ಅವಕಾಶವಿದೆ ಎಂದು ದಿಕ್ಕನ್ನು ಗುರುತಿಸುವುದು ಇವು ನಾವಡರ ಸಂಶೋಧನೆಯ ರೀತಿ. ತುಳು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಈಗಾಗಲೇ ಗಮನಾರ್ಹ ಶೋಧ ನಡೆಸಿದ ಗೋವಿಂದ ಪೈಗಳು, ಪ್ರೊ.ಕು.ಶಿ. ಹರಿದಾಸ ಭಟ್ಟರು, ಡಾ. ಅಮೃತ ಸೋಮೇಶ್ವರರು, ಡಾ.ಬಿ.ಎ. ವಿವೇಕ ರೈಯವರ ಅಭಿಪ್ರಾಯಗಳನ್ನೆಲ್ಲ ಅವರು ವಿವೇಚನೆಗೆ ಒಡ್ಡಿದ್ದಾರೆ.

ದ್ರಾವಿಡ ಭಾಷಾ ಪರಿವಾರದಲ್ಲಿ ತುಳುವನ್ನು ಸೇರಿ ಸುವ ನಾವಡರು ತುಳು ಭಾಷೆಯ ಹಲವು ವಿಶೇಷಗಳನ್ನು ಗುರುತಿಸಿದ್ದಾರೆ. ಹಾಗೆಯೇ ಪಾಡ್ದನಗಳಲ್ಲಿ ಸಮಾಸ ರಚನೆಯ ಬಗೆಗೂ ಹೇಳಿದ್ದಾರೆ. ಆದರೆ ಗಮನಿಸದೆ ಬಿಟ್ಟ ನನ್ನ ಅರಿವಿಗೆ ಬಂದ ಒಂದು ಅಂಶ ಇಲ್ಲಿದೆ. ತುಳುವಿನಲ್ಲಿ ಸಂಖ್ಯೆಯ ಎಣಿಕೆಯಲ್ಲಿ ಸಂಸ್ಕೃತವನ್ನು ಅಥವಾ ಹಿಂದಿಯನ್ನು ಇಲ್ಲವೆ ಕೊಂಕಣಿಯನ್ನು ಅನುಸರಿಸಿದಂತೆ ತೋರುವುದು. ಈ ಕೃತಿಯ 'ಪಾಡ್ದನಗಳಲ್ಲಿ ಸಮಾಸ ರಚನೆ' ಅಧ್ಯಾಯದ ಬಹುವಿಶೇಷಣ ಆಶ್ರಿತ ಸಮಾಸಗಳ ಬಗ್ಗೆ ಹೇಳುವಾಗ (ಪುಟ 71) ನೀಡಿರುವ ಉದಾಹರಣೆಯಲ್ಲಿ ನಲ್ವತ್ತಕ್ಕೆ ಒಂಜಿ ಕುಂದ ನಲ್ಪಒಂಜಿಕುಂದನಲ್ಪ' ಎಂದು ಹೇಳಿದ್ದಾರೆ. ಇದು ಏಕೋನಚತ್ವಾರಿಂಶತ್ ಎಂಬ ಸಂಸ್ಕೃತ ಸಂಖ್ಯಾವಾಚಿಯ ಅನುಕರಣೆ. ಹಿಂದಿಯಲ್ಲಿ ಉನ್ಚಾಲೀಸ್ ಎಂದು ಹೇಳುತ್ತಾರೆ. ಹತ್ತೊಂಬತ್ತನ್ನು ಏಕೂನ್‌ವೀಸ್ (ಒಂದು ಕಡಿಮೆ ಇಪ್ಪತ್ತು) ಎನ್ನುತ್ತಾರೆ. ತುಳುವಿನ ಈ ವಿಶೇಷತೆಯನ್ನು ನಾವಡರು ಗಮನಿಸಿದಂತೆ ತೋರುವುದಿಲ್ಲ. ಕನ್ನಡದಲ್ಲಿ ಮೂವತ್ತು ಒಂಬತ್ತು ಮೂವತ್ತೊಂಬತ್ತು ಎಂದಾಗುತ್ತದೆ. ಇದನ್ನು ಒಂದು ಕಡಿಮೆ ನಲವತ್ತು ಎಂದು ಹೇಳುವುದಿಲ್ಲ. 

ಊಳಿಗಮಾನ್ಯ ವ್ಯವಸ್ಥೆಯಲ್ಲಿ ಕೃಷಿಕರು ಏಳು, ಹದಿನೇಳು ಇತ್ಯಾದಿ ಅಂಕಿಗಳನ್ನು ಹೇಳುವುದಿಲ್ಲ. ಏಳಕ್ಕೆ ಆರು ಮತ್ತೊಂದು, ಹದಿನೇಳಕ್ಕೆ ಹದಿನಾರು ಮತ್ತೊಂದು ಹೀಗೆ ಹೇಳುತ್ತಾರೆ. ಹೊಲಿಯನ್ನು ಅಳೆಯುವಾಗ ಎದುರಿಗೆ ದಣಿ ಕುಳಿತಿರುತ್ತಾನೆ. ಏಳು ಎಂದರೆ ಆತನಿಗೆ ಏಳು ಎಂದಂತಾಗುತ್ತದೆ ಎಂಬ ಭಯ-ಭಕ್ತಿ ಮೂಲದ ಪದ್ಧತಿ ಇದು.
ತುಳು ಪೊಲಿ ಎಂದರೆ ತುಳು ಸಮೃದ್ಧಿ ಎಂಬ ಅರ್ಥವನ್ನು ನಾವಡರು ಹೇಳಿದ್ದಾರೆ. ಪೊಲಿ ಇದರ ಕನ್ನಡ ಸಮಾನಾರ್ಥಕ ಪದ ಹೊಲಿ. ಕರಾವಳಿ ಭಾಗದಲ್ಲಿ ಬತ್ತದ ಕೆಯ್ ಬಡಿದು ಬತ್ತವನ್ನು ಬೇರೆ ಮಾಡಿ ರಾಶಿ ಮಾಡುತ್ತಾರಲ್ಲ, ಆ ಬತ್ತದ ರಾಶಿಗೆ ಹೊಲಿ ರಾಶಿ ಎನ್ನುತ್ತಾರೆ. ಹೊಲಿ ಇದು ಒಲಿ ಎಂಬ ಶಬ್ದದಿಂದ ಬಂದದ್ದು. ಒಲಿಯುವುದು ಎಂದರೆ ಒದಗಿಬರುವುದು, ಹೆಚ್ಚಾಗುವುದು. ಅಂದರೆ ಅಂತಿಮವಾಗಿ ಸಮೃದ್ಧಿ ಎಂಬ ಅರ್ಥವನ್ನೇ ನೀಡುತ್ತದೆ.
ಪಾಡ್ದನಗಳ ಕುರಿತು ಹಲವು ಹೊಸ ವಿಚಾರಗಳು ಈ ಕೃತಿಯಲ್ಲಿವೆ. ಒಂದೇ ಪಾಡ್ದನವನ್ನು ಒಬ್ಬನೇ ವ್ಯಕ್ತಿ ಬೇರೆಬೇರೆ ಸನ್ನಿವೇಶಗಳಲ್ಲಿ ಹಾಡಿದಾಗ ಅವುಗಳಲ್ಲಿಯ ಆಶಯ ಹೇಗೆ ಭಿನ್ನವಾಗುತ್ತದೆ ಎಂಬುದನ್ನು ಹಾಗೂ ಒಂದೇ ಆಶಯ ಬೇರೆಬೇರೆ ಪಾಡ್ದನಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಬರೆದಿದ್ದಾರೆ. ಮೌಖಿಕ ಕಾವ್ಯವೊಂದರ ಸಂಯೋಜನೆ ಮತ್ತು ಪಠ್ಯೀಕರಣ ಲಿಖಿತ ಕಾವ್ಯಕ್ಕಿಂತ ಬೇರೆಯಾದದ್ದು ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಮೌಖಿಕ ಕವಿಯೊಬ್ಬನಿಗೆ ಕಾವ್ಯಸಂರಚನೆಯ ಮುಹೂರ್ತವೆಂದರೆ ಪ್ರದರ್ಶನ ಕಾಲಾವಧಿ ಎಂದಿದ್ದಾರೆ.

ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಪ್ರತಿನಿಧೀಕರಣ ಹೇಗಾಗಿದೆ ಎಂಬ ಬಗ್ಗೆ ಒಂದು ಅಧ್ಯಾಯ ಮೀಸಲಾಗಿದೆ. ಪಾಡ್ದನಗಳೆಂದರೆ ತುಳುವ ಸಮಾಜದ ಸಾಂಸ್ಕೃತಿಕ ಕೋಶ ಎನ್ನುವ ನಾವಡರು ಅವುಗಳನ್ನು ತುಳುವರ ಪುರಾಣಗಳೆಂದೂ, ಸಾಮಾಜಿಕ ನಡಾವಳಿಗಳ ಸನ್ನದೆಂದೂ ಸಮಾಜದ ಭೂತ- ವರ್ತಮಾನಗಳ ಚಲನಶೀಲ ಸಂಬಂಧಗಳನ್ನು ಪ್ರತಿನಿಧಿಸುವ ದಾಖಲೆ ಎಂದೂ ಪರಿಗಣಿಸಬಹುದು ಎಂದಿದ್ದಾರೆ. ಮಹಿಳಾ ಪಾಡ್ದನಗಳ ಒಳಸೂತ್ರದಲ್ಲಿ ಒಂದು ಬಗೆಯ ದುರಂತದ ಸೆಳವು ಕಂಡುಬರುತ್ತದೆ ಎಂಬುದನ್ನು ಅವರು ಗುರುತಿಸಿದ್ದಾರೆ. ಭೂತಾರಾಧನೆ ತುಳುನಾಡಿನ ಧರ್ಮನೇಮ ಹೇಗಾಗಿದೆ ಎಂಬ ಬಗ್ಗೆ ಚರ್ಚಿಸುತ್ತಾರೆ. ತುಳು ಸಾಹಿತ್ಯದ ಬಗೆಗೂ ಒಂದು ಅಧ್ಯಾಯ ಇದರಲ್ಲಿದೆ. ಇದು ಒಂದರ್ಥದಲ್ಲಿ ತುಳುಸಾಹಿತ್ಯ ಚರಿತ್ರೆ. ತುಳುನಾಡಿನ ಸಂತ ಸುಧಾರಕ ಕವಿ ವಾದಿರಾಜರ ಬಗ್ಗೆ ವಿವರವಾದ ಬರೆಹ ಇದರಲ್ಲಿದೆ.

ತುಳುಜನರ ಬಗೆಗಿನ ವಿವರಗಳಲ್ಲಿ ಕೊರಗರು, ಕುಡುಬಿಯರು ಕುರಿತು ವಿವರಗಳಿವೆ. ಕೃಷ್ಣದೇವರಾಯ ತುಳುವರವನೆ ಎಂಬ ಚರ್ಚೆ ಇಲ್ಲಿದೆ. ಹೀಗೆ ಹಲವು ರೀತಿಯಿಂದ ತುಳುಪೊಲಿ ತುಳುಸಂಸ್ಕೃತಿಯ ವಿವರಗಳಿಂದ ಸಮೃದ್ಧವಾಗಿದೆ. ತುಳುವಿನ ಬಗೆಗಿನ ಅಧ್ಯಯನ ಮಾಡುವವರಿಗೆ ಇದೊಂದು ಉತ್ತಮ ಆಕರ ಗ್ರಂಥವಾಗಿದೆ.
ಕೃತಿ: ತುಳುಪೊಲಿ,  ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ತುಳು ಸಂಸ್ಕೃತಿ ಅರಿಯಲು
ಪ್ರ: ಶೋಧನ ಪ್ರಕಾಶನ, ಮಂಗಳೂರು,, ಪುಟಗಳು 372, ಬೆಲೆ ರು. 350
ತಂತ್ರಕ್ಕೊಂದು ದಾರಿ
ತಾಂತ್ರಿಕರು, ತಂತ್ರ ಸಾಹಿತ್ಯ ಎಂದರೆ ಅನುಮಾನದಿಂದ ನೋಡುವ ಒಂದು ವರ್ಗವಿದೆ. ತಂತ್ರವು ಒಂದು ಶಾಸ್ತ್ರ. ನಮ್ಮಲ್ಲಿ ಅಥರ್ವಣ ವೇದವು ಈ ತಂತ್ರದ ಬಗೆಗೆ ಹೇಳುತ್ತದೆ. ಈ ತಂತ್ರಶಾಸ್ತ್ರದ ಬಗ್ಗೆ ಬ್ರಿಟಿಷ್ ಪ್ರಜೆಯಾಗಿದ್ದು ಬ್ರಿಟಿಷ್ ಇಂಡಿಯಾದಲ್ಲಿ ನ್ಯಾಯಾಧೀಶರಾಗಿದ್ದ ಸರ್ ಜಾನ್ ಜಾರ್ಜ್ ವುಡ್ರೋಫ್ ಎಂಬವರು ವಿಶೇಷವಾಗಿ ಅಧ್ಯಯನ ಮಾಡಿದವರು. ಕೋಲ್ಕತ್ತಾದಲ್ಲಿ ಅವರು ವೃತ್ತಿಯಲ್ಲಿದ್ದದ್ದು ಮತ್ತು ಆ ಭಾಗದಲ್ಲಿ ಕಾಳಿಯ ಆರಾಧನೆ ವಿಶೇಷವಾಗಿ ಇದ್ದದ್ದು ಆ ಬಗ್ಗೆ ಅವರು ಅಧ್ಯಯನ ಮಾಡುವುದಕ್ಕೆ ಪ್ರೇರಣೆ ಒದಗಿಸಿರಬಹುದು. ತಂತ್ರಶಾಸ್ತ್ರಕ್ಕೆ ಸಂಬಂಧಿಸಿ ಅವರು ಹತ್ತು ಕೃತಿಗಳನ್ನು ರಚಿಸಿದ್ದಾರೆ. ಅವರ 'ಇಂಟ್ರಡಕ್ಷನ್ ಟು ತಂತ್ರಶಾಸ್ತ್ರ' ಕೃತಿಯನ್ನು 'ತಂತ್ರಶಾಸ್ತ್ರ ಪ್ರವೇಶ' ಹೆಸರಿನಲ್ಲಿ ಜಿ.ಬಿ. ಹರೀಶ ಅವರು ಕನ್ನಡಕ್ಕೆ ತಂದಿದ್ದಾರೆ. ಇದು ಒಂದು ಜ್ಞಾನ ಪ್ರಕಾರ, ಇದರ ಬಗ್ಗೆ ಮೈಲಿಗೆಯ ಧೋರಣೆ ಸಲ್ಲ ಎಂಬುದು ಇದನ್ನು ಓದಿದಾಗ ತಿಳಿಯುತ್ತದೆ. ಜಿ.ಬಿ. ಹರೀಶ ಅವರೇ 'ತಂತ್ರ ದರ್ಶನ' ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ತಂತ್ರದ ಬಗ್ಗೆ ಕನ್ನಡದ ಹಿರಿಯರು ಬರೆದ ಲೇಖನಗಳನ್ನು ಅವರು ಒಂದೆಡೆ ತಂದಿದ್ದಾರೆ. ಇದರಲ್ಲಿ ಪ್ರೊ.ಕೆ.ಜಿ. ನಾಗರಾಜಪ್ಪ, ಪ್ರೊ. ಶ್ರೀಪತಿ ತಂತ್ರಿ, ಡಾ.ಎಂ. ಚಿದಾನಂದಮೂರ್ತಿ, ಡಾ.ಎಂ.ಎಂ. ಕಲಬುರ್ಗಿ, ಪಾದೆಕಲ್ಲು ನರಸಿಂಹಭಟ್ಟ, ಚಿದಾನಂದ ಅವಧೂತ, ಸತ್ಯಕಾಮ, ಓಶೋ, ಬನ್ನಂಜೆ ಗೋವಿದಾಚಾರ್ಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ.ಬಸವರಾಜ ಕಲ್ಗುಡಿ ಮೊದಲಾದವರ ಲೇಖನಗಳು ಸೇರಿವೆ. ಹರೀಶರ ಒಂದು ದಶಕದ ಅಧ್ಯಯನದ ಫಲವಾಗಿ ಇವೆರಡು ಕೃತಿಗಳು ಬಂದಿವೆ. ಇವನ್ನು ಓದಿದವರಿಗೆ ತಂತ್ರ ದರ್ಶನ ಆಗದೇ ಇರದು.
ಕೃತಿ: ತಂತ್ರಶಾಸ್ತ್ರ ಪ್ರವೇಶ; ತಂತ್ರ ದರ್ಶನ  
ಪ್ರಕಾರ: ಅನುವಾದ/ ಸಂಪಾದನೆ
ಏಕೆ ಓದಬೇಕು?: ತಂತ್ರಶಾಸ್ತ್ರಅರಿಯಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು,, ಪುಟಗಳು 144/328, ಬೆಲೆ ರು. 120/275

ಅಪ್ಪಗೆರೆಯ ಅವ್ವನ ಹಾಡುಗಳು
ಜನಪದ ಹಾಡುಗಳನ್ನು ಹಾಡುವ ಮೂಲಕ ಪ್ರಸಿದ್ಧರಾಗಿರುವ ಅಪ್ಪಗೆರೆ ತಿಮ್ಮರಾಜು ಅವರು 'ಅವ್ವನ ಹಾಡುಗಳು' ಹೆಸರಿನಲ್ಲಿ ಜನಪ್ರಿಯವಾಗಿರುವ ಜನಪದ ಹಾಡುಗಳನ್ನು ಸಂಪಾದಿಸಿದ್ದಾರೆ. ಇಲ್ಲಿರುವ ಹಾಡುಗಳೆಲ್ಲ ಈಗಾಗಲೇ ತಿಮ್ಮರಾಜು ಸೇರಿದಂತೆ ಹಲವರು ಹಾಡಿ ಜನಸಾಮಾನ್ಯರ ನಾಲಗೆಯ ಮೇಲೆ ಹರಿದಾಡುತ್ತಿವೆ. ಈ ಹಾಡುಗಳನ್ನು ಕೇಳಿದ ಮೇಲೆ ಜನಪದ ಸಾಹಿತ್ಯದ ಬಗ್ಗೆ ಕೆಲವರಲ್ಲಾದರೂ ಆಸಕ್ತಿ ಮೊಳೆತರೆ ಅದೇ ಸಾರ್ಥಕ. ನಮ್ಮ ಗ್ರಾಮೀಣ ತಾಯಂದಿರ ಬಾಯಿಯಿಂದ ಹರಿದುಬಂದ ಹಾಡುಗಳು ಇವು ಆಗಿರುವುದರಿಂದ ಇದಕ್ಕೆ 'ಅವ್ವನ ಹಾಡುಗಳು' ಎಂಬ ಹೆಸರನ್ನು ಇಟ್ಟಿದ್ದಾರೆ. 'ಗುಡಿಯ ನೋಡಿರಣ್ಣ, ಹಾದರ ಮಾಡಿದೆನೇ, ಮೋಹದ ಹೆಂಡತಿ ತೀರಿದ ಬಳಿಕ...' ಇವೇ ಮೊದಲಾದ ಶಿಶುನಾಳ ಷರೀಫರ ಹಾಡುಗಳೂ ಇದರಲ್ಲಿ ಸೇರಿವೆ. ಹಾಡಬಹುದಾದ ಒಳ್ಳೆಯ ಗೀತೆಗಳೆಲ್ಲ ಒಂದೇ ಕಡೆ ಸಿಗುವಂತೆ ತಿಮ್ಮರಾಜು ನೋಡಿಕೊಂಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.
ಕೃತಿ: ಅವ್ವನ ಹಾಡುಗಳು,  ಪ್ರಕಾರ: ಸಂಪಾದನೆ, ಏಕೆ ಓದಬೇಕು?: ಹಾಡುವ ಖುಷಿಗೆ

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ಸಕ್ರಿಯ ರಾಜಕೀಯಕ್ಕೆ ಬರುವ ಬಯಕೆ ಬಿಚ್ಚಿಟ್ಟ ಸೈನಾ ನೆಹ್ವಾಲ್; BJPಯಿಂದ ಚುನಾವಣಾ ಅಖಾಡಕ್ಕೆ ಎಂಟ್ರಿ?