ಸಾಪ್ತಾಹಿಕಪ್ರಭ

ನಗೆಬುಗ್ಗೆ 'ಸುಶೀಲ ಕುಮಾರ ಶಿಂಧೆ '

1971ರಲ್ಲಿ ಇಂದಿರಾಗಾಂಧಿ ಇಡೀ ದೇಶದಲ್ಲಿ 'ಗರೀಬಿ ಹಟಾವೋ' ಘೋಷವಾಕ್ಯವನ್ನು ಪ್ರಚಾರ ಮಾಡುತ್ತಿದ್ದ ಕಾಲದಲ್ಲಿ ಸುಶೀಲ ಕುಮಾರ ಶಿಂಧೆ, ಸೊಲ್ಲಾಪುರದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್- ಸಿಐಡಿ! ಆ ವೇಳೆಗಾಗಲೇ ಅವರು ವಕೀಲಿ ಪರೀಕ್ಷೆ ಪಾಸು ಮಾಡಿದ್ದರು. ಆದರೂ ಅದೇಕೆ ಪೊಲೀಸ್ ಕೆಲಸಕ್ಕೆ ಸೇರಿದರೋ ಗೊತ್ತಿಲ್ಲ.
ಈಗ ಅದೇ ಸುಶೀಲ ಕುಮಾರ ಶಿಂಧೆ, ಭಾರತ ಸರ್ಕಾರದ ಗೃಹಮಂತ್ರಿ. ಭಾರತೀಯ ಜನ ಸಮುದಾಯಗಳ ಸಾರ್ವಭೌಮಾಧಿಕಾರವನ್ನು ಪ್ರತಿನಿಧಿಸುವ ಲೋಕಸಭೆಯಲ್ಲಿ ಸದನದ ನಾಯಕ. ಅದು ಪ್ರಧಾನಿಗೇ ಮೀಸಲಾದ ಸ್ಥಾನ. ಆದರೆ ಮನಮೋಹನ ಸಿಂಗ್ ರಾಜ್ಯಸಭೆಯ ಸದಸ್ಯರಾಗಿರುವುದರಿಂದ ್ಣಆ ಹೊಣೆ ಶಿಂಧೆಯ ಮೇಲೆ ಬಿದ್ದಿದೆ. ಅದಕ್ಕೆ ಮುಂಚೆ ಶಿಂಧೆ ಐದು ಬಾರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದಸ್ಯರಾಗಿ, ಮೂರು ಬಾರಿ ಮಂತ್ರಿಯಾಗಿ, ಒಮ್ಮೆ ಮುಖ್ಯಮಂತ್ರಿಯೂ ಆಗಿದ್ದರು. ಹೆಚ್ಚೂಕಡಿಮೆ 1971ರಿಂದಲೂ ಅಧಿಕಾರದ ಸ್ಥಾನಗಳಲ್ಲೇ ಇದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾಪುಲೆರಂಥ ನಾಯಕರ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸ್ವಲ್ಪ ಉಗ್ರ ಸ್ವರೂಪದ್ದೇ ಎನ್ನಬಹುದಾದ ದಲಿತ ಪ್ಯಾಂಥರ್ ಆಂದೋಲನ ನಡೆದಿದ್ದರೂ, ದಲಿತರೆಂದೇ ಹೆಸರು ಮಾಡಿರುವ ಶಿಂಧೆ ಅಂಥ ಹೋರಾಟಕ್ಕೆ ಇಳಿಯಲಿಲ್ಲ. ಕಾಂಗ್ರೆಸ್ ಸೇರಿ, ಚುನಾವಣೆಯಲ್ಲಿ ಗೆಲ್ಲುತ್ತ, ಅಧಿಕಾರದ ಮೆಟ್ಟಿಲುಗಳನ್ನೇರಿದರು.
ಶಿಂಧೆ ಏನೇ ಆಗಿರಲಿ ಅವರನ್ನು ಜನ ಗುರ್ತಿಸುವುದು, ನಿರಂತರ ನಗೆಯ ಮೂಲಕ. ಯಾವ ಕಾಲದಲ್ಲೂ ಅವರ ಮುಖದಿಂದ ನಗೆ ಮಾಯವಾಗಿಲ್ಲ. ಅದೇ ಅವರ ಹೆಗ್ಗಳಿಕೆ. ಇದುವರೆಗೂ ಶಿಂಧೆ, ಯಾವ ಕಾರಣಕ್ಕೂ ಯಾರ ಜತೆಯಲ್ಲೂ ಜಗಳವಾಡಿಲ್ಲ. ಅವರಿಗೆ ಅಂಥ ಅವಕಾಶವೇ ಸಿಕ್ಕಿಲ್ಲ. ನಿರಂತರವಾಗಿ ಅಧಿಕಾರದ ಸ್ಥಾನಗಳನ್ನೇ ಪಡೆದಿದ್ದಾರೆ. ಒಮ್ಮೆ ಆಂಧ್ರಪ್ರದೇಶದ ರಾಜ್ಯಪಾಲರೂ ಆಗಿದ್ದರು.
ಕೇಂದ್ರದಲ್ಲಿ ಅವರು ವಿದ್ಯುತ್ ಮಂತ್ರಿಯಾಗಿದ್ದಾಗ, ಒಮ್ಮೆ ಇಡೀ ಉತ್ತರ ಭಾರತ ಕತ್ತಲಲ್ಲಿ ಮುಳುಗಿತ್ತು. ಆಗ ಅವರ ಪ್ರತಿಕ್ರಿಯೆ; ಅಮೆರಿಕ- ಬ್ರೆಜಿಲ್‌ನಲ್ಲೂ ಹೀಗೆಯೇ ಆಗಿದೆಯಂತೆ. ಇನ್ನೇನು ಮಾಡುವುದು ಅನುಭವಿಸಬೇಕು. ಆ ದಿನಗಳಲ್ಲಿ ಅವರು ಸುರಕ್ಷಿತ ದೆಹಲಿಯನ್ನು ಬಿಟ್ಟು ಹೊರಗೇ ಹೋಗಲಿಲ್ಲ.
ಕಲ್ಲಿದ್ದಲ ಗಣಿಗಳ ಹಂಚಿಕೆಯ ವ್ಯವಹಾರದಲ್ಲಿ ಒಬ್ಬ ಏಜೆಂಟರಿಗೆ ನೆರವು ನೀಡಲು ಶಿಂಧೆ ಅವರೂ ಒಂದು ಶಿಫಾರಸ್ಸು ಪತ್ರವನ್ನು ಕೊಟ್ಟಿದ್ದರು. ಅದು ರಾದ್ಧಾಂತಕ್ಕೀಡಾದಾಗ ಅವರೇನು ಹೇಳಿದರು ಗೊತ್ತೇ? 'ಅಯ್ಯೋ, ಅಂಥ ಬೋಫೋರ್ಸ್ ಹಗರಣವನ್ನೇ ಜನ ಮರೆತರಂತೆ. ಇನ್ನು ಈ ಕಲ್ಲಿದ್ದಲ ವ್ಯವಹಾರವನ್ನು ಎಷ್ಟು ದಿನ ನೆನಪಿನಲ್ಲಿಡುವುದು ಸಾಧ್ಯ?'
ಇಂಥ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಎಂಥ ಪರಿಣಾಮವಾಗಬಹುದೆನ್ನುವ ಚಿಂತೆ ಅವರಿಗೆ ಇದ್ದಂತಿಲ್ಲ. ಈಚೆಗೆ ದೆಹಲಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಅಲ್ಲಿನ ಪ್ರತಿಷ್ಠಿತ ಸಮುದಾಯಗಳ ಜನ ಕ್ಯಾಂಡಲ್ ಹಿಡಿದು ಶಾಂತಿಯುತ ಮೆರವಣಿಗೆ ನಡೆಸಿದಾಗ, ಶಿಂಧೆ ಅವರನ್ನು ಭೇಟಿಯಾಗಲೇ ಇಲ್ಲ.
ಯಾಕೆ? ಅಯ್ಯೋ, ದಿಲ್ಲಿಯಲ್ಲಿ ಮೆರವಣಿಗೆ- ಪ್ರದರ್ಶನಗಳಿಗೇನು ಬರ? ಬಿಜೆಪಿ, ಮಾವೋವಾದಿಗಳು, ರೈತರು, ಆದಿವಾಸಿಗಳು ಪ್ರದರ್ಶನ ಮಾಡುತ್ತಲೇ ಇರ್ತಾರೆ. ಎಲ್ಲ ಕಡೆ ಹೋಗೋದಿಕ್ಕೆ ಆಗುತ್ತಾ?
ದೆಹಲಿಯ ಪೊಲೀಸ್ ಪಡೆ ಗೃಹ ಮಂತ್ರಾಲಯದ ಅಧೀನದಲ್ಲೇ ಇರುವುದು. ಅದರ ಅಧಿಪತಿ ಸುಶೀಲ ಕುಮಾರ ಶಿಂಧೆ. ಕಾಯಿದೆ ಪಾಲನೆ ವ್ಯವಸ್ಥೆ ಅಲ್ಲಿ ಕುಸಿದು ಬಿದ್ದಿದೆ (ಪ್ರತಿಷ್ಠಿತರ ರಕ್ಷಣೆಯ ವಿಚಾರ ಬಿಟ್ಟು) ಎಂದು ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬಹಿರಂಗವಾಗಿ ಹೇಳಿದರೂ ಶಿಂಧೆ ತಳೆದ ನಿಲವು; 'ಅಯ್ಯೋ ಅದಕ್ಕೇನು ಮಾಡಲಿಕ್ಕಾಗುತ್ತೆ. ದೆಹಲಿ ದೊಡ್ಡ ಷಹರು'.
ಈಗ ಛತ್ತೀಸ್‌ಗಡದ ರಕ್ಷಣೆ ಬಸ್ತಾರ್- ಜಗದಾಲಪುರದ ಸೀಮೆಯಲ್ಲಿ ನಕ್ಸಲೀಯ ಮಾವೋವಾದಿಗಳು ಕಾಂಗ್ರೆಸ್ ನಾಯಕರ ಶಿಬಿರದ ಮೇಲೆ ಗುಂಡು ಹಾರಿಸಿ 29 ಮಂದಿಯನ್ನು ಕೊಂದಾಗ, ಯಾವುದೋ  ಸಮ್ಮೇಳನಕ್ಕೆ ಶಿಂಧೆ ಅಮೆರಿಕಕ್ಕೆ ಹೇಗಿದ್ದರು. ಆ ಸಮ್ಮೇಳನ ಮುಗಿದ ಅನಂತರ ಅವರಿಗಾಗಿಯೇ ಒಂದು ಖಾಸಗಿ ಪ್ರವಾಸ ಕಾರ್ಯಕ್ರಮವೂ ಏರ್ಪಾಟಾಗಿತ್ತು. ಅದನ್ನು ಮುಗಿಸಿಕೊಂಡು ಸಾವಧಾನವಾಗಿ ಹಿಂದಿರುಗಿದ್ದಾರೆ. ಜಗರಾಲಪುರದ ನಕ್ಸಲ್ ಮಾರಣ ಹೋಮದ ಸಂತ್ರಸ್ತರಿಗೆ ಭಾರತದ ಗೃಹಮಂತ್ರಿಯಿಂದ ಒಂದು ಸಾಂತ್ವನದ ಸಂದೇಶವೂ ಬಂದಿಲ್ಲ.
ಅದನ್ನು ಸಂತ್ರಸ್ತರ ಕುಟುಂಬಗಳೂ ಮನಸ್ಸಿಗೆ ಹಚ್ಚಿಕೊಂಡಿಲ್ಲ. ಗೃಹಮಂತ್ರಾಲಯವೂ ಏನನ್ನೂ ಮಾಡಿಲ್ಲ. ಛತ್ತೀಸಗಡಕ್ಕೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ ಸಿಂಗ್, ರಾಹುಲ್ ಗಾಂಧಿ ಅವರೇ ಹೋಗಿದ್ದರಿಂದ ಉಳಿದವರಲ್ಲಿ ಯಾರು ಹೋದರೆಷ್ಟು, ಯಾರು ಬಿಟ್ಟರೆಷ್ಟು?

ಭಾರತದ ಗೃಹ ಮಂತ್ರಾಲಯದ ಅಧಿಪತ್ಯಕ್ಕೆ ಭವ್ಯ ಇತಿಹಾಸವಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ಡಾ. ಕೈಲಾಸನಾಥ ಕಾಟ್ಜು, ಗೋವಿಂದ ವಲ್ಲಭ ಪಂತ್, ಪಿ.ವಿ. ನರಸಿಂಹ ರಾವ್, ಮೊರಾರ್ಜಿ ದೇಸಾಯಿ, ಚೌಧರಿ ಚರಣ ಸಿಂಗ್, ಇಂದ್ರಜಿತ್ ಗುಪ್ತಾ, ಲಾಲ್‌ಕೃಷ್ಣ ಆಡ್ವಾಣಿಯಂಥವರೆಲ್ಲ ಆಳಿದ ಅಧಿಪತ್ಯ ಅದು. ಆ ಸಾಲಿನಲ್ಲಿ ಪಿ. ಚಿದಂಬರಂ ಅವರ ನಂತರ ಬಂದವರು ಶಿಂಧೆ.
ದೇಶದಲ್ಲಿ ಏನೇ ಆಗಲಿ ಅವರ ಮುಖದ ಮೇಲಿನ ನಗೆ ಬುಗ್ಗೆಯೂ ಹಾಗೇ ಉಳಿಯಬೇಕು.

- ಸತ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

ಆಜ್ ತಕ್ ನಿರೂಪಕನ ವಿರುದ್ಧ ದ್ವೇಷ ಭಾಷಣ ಆರೋಪ: ಎಫ್‌ಐಆರ್ ದಾಖಲಿಸಲು UP ನ್ಯಾಯಾಲಯ ಆದೇಶ

Amruta Fadnavis: 'ನೀತಿ ಪಾಠ ಹೇಳುವವರೆ ಈ ರೀತಿಯ ಬಟ್ಟೆ ಧರಿಸಿದರೆ ಹೇಗೆ? ಮಹಾ ಸಿಎಂ 'ಫಡ್ನವೀಸ್ ಪತ್ನಿ' ವಿರುದ್ಧ ನೆಟ್ಟಿಗರ ಆಕ್ರೋಶ, Video ವೈರಲ್

ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

SCROLL FOR NEXT