ಸಾಪ್ತಾಹಿಕಪ್ರಭ

ಮಾಣಿಕ್ ಸರ್ಕಾರ್ ಪ್ರಚಾರದ ಪ್ರಖರ ಬೆಳಕು

ಅರವತ್ನಾಲ್ಕು ವರ್ಷದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕ ಮಾಣಿಕ್ ಸರ್ಕಾರ್ ಮೂರು ಬಾರಿ ತಮ್ಮ ಪಕ್ಷ ತ್ರಿಪುರ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದ ಅನಂತರ ನಾಲ್ಕನೆಯ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶದಲ್ಲಿ ಎಲ್ಲೂ ದೊಡ್ಡ ರೀತಿಯ ಉತ್ಸವಗಳು ನಡೆಯಲಿಲ್ಲ.
ಮಾಣಿಕ್ ಸರ್ಕಾರ್ ಅವರ ಹ್ಯಾಟ್ರಿಕ್ ವಿಜಯವನ್ನು ಹೊಗಳಿದ್ದು ಪತ್ರಿಕಾ ಪ್ರಪಂಚದ ಹಲವು ಪತ್ರಿಕೆಗಳು ಮಾತ್ರ. ಸಹಜವಾಗಿಯೇ ಈ ಪರಿಸ್ಥಿತಿಯನ್ನು ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಹ್ಯಾಟ್ರಿಕ್ ಗಳಿಸಿದಾಗ ದೇಶದ ಎಲ್ಲ ಕಡೆ ಕಂಡುಬಂದ ಸಂಭ್ರಮದ ಜತೆ ಹೋಲಿಸುವ ಜನರೂ ಇದ್ದಾರೆ.
ನಿಜ. ಗುಜರಾತ್ ದೊಡ್ಡ ರಾಜ್ಯ. ಶ್ರೀಮಂತರ ರಾಜ್ಯ. ತ್ರಿಪುರಾ ಸಣ್ಣ ರಾಜ್ಯ. ಅಲ್ಲಿ ಬಡತನ ಬಿಟ್ಟು ಇನ್ನೇನೂ ಇಲ್ಲ, ನರೇಂದ್ರ ಮೋದಿ ದೇಶದ ಅತಿದೊಡ್ಡ ಪಕ್ಷಗಳಲ್ಲಿ ಒಂದಾದ ಭಾರತೀಯ ಜನತಾ ಪಾರ್ಟಿಯ ನಾಯಕ. ಮಾಣಿಕ್ ಸರ್ಕಾರ್, ಈಗ ಇತರ ಎಲ್ಲ ಕಡೆಗಳಲ್ಲೂ ಸೋತು ಸುಣ್ಣವಾಗಿರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದಲ್ಲೂ ದೊಡ್ಡ ಹೆಸರಿನ ನಾಯಕ ಅಲ್ಲ.
ಆದರೆ ಮಾಣಿಕ್ ಸರ್ಕಾರ್ ಅವರ ವ್ಯಕ್ತಿತ್ವ ಮುಖ್ಯವಾಗುವುದು ಇದೇ ದೇಶದಲ್ಲಿ ವಾಮಪಂಥೀಯ ಸರ್ಕಾರವನ್ನು ನಡೆಸುವ ಏಕೈಕ ಕಮ್ಯುನಿಸ್ಟ್ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ.
ಈಗಾಗಲೇ ತ್ರಿಪುರಾದ ನಾಯಕ ಸರ್ಕಾರ್ ಅವರ ವೈಯಕ್ತಿಕ ಜೀವನ ಕುರಿತು ಸಾಕಷ್ಟು ಪ್ರಚಾರವಾಗಿದೆ. ತ್ರಿಪುರಾ ಬಂಗ್ಲಾದೇಶ, ಮ್ಯಾನ್‌ಮಾರ್‌ಗಳಿಗೆ ಸಂಪರ್ಕ ಸೇತುವಾಗಬಹುದಾದ ರಾಜ್ಯ. ಆ ಕಾರಣದಿಂದಲೇ ಅಲ್ಲಿನ ಜನಪ್ರಿಯ ಮುಖ್ಯಮಂತ್ರಿ ದೇಶಕ್ಕೆ ಪ್ರಸ್ತುತವಾಗುತ್ತಾರೆ.
ನಿಜ. ಇದುವರೆಗೂ ವಾಮಪಂಥೀಯ ನಾಯಕರೂ ಪಕ್ಷದ ಅತ್ಯುನ್ನತ ಸಮಿತಿಯಾದ ಪೋಲಿಟ್ ಬ್ಯೂರೋದ ಸದಸ್ಯರಾದ ಮಾಣಿಕ್ ಸರ್ಕಾರ್ ಅವರನ್ನು ಇತರ ರಾಜ್ಯಗಳ ಜನರಿಗೆ ಪರಿಚಯ ಮಾಡಿಸಿಕೊಡುವ ಪ್ರಯತ್ನವನ್ನು ಮಾಡಿರಲಿಲ್ಲ, ಈಗಲೂ ಮಾಡುತ್ತಿಲ್ಲ.
ಅದಕ್ಕೆ ಕಾರಣ ಎಂದರೆ ಭಾರತೀಯ ಕಮ್ಯುನಿಸ್ಟ್ ಪ್ರಪಂಚದಲ್ಲಿ ಈಗಲೂ ಬಂಗಾಳ- ಕೇರಳದ ನಾಯಕರದ್ದೇ ಪಾರುಪತ್ಯ ನಡೆದಿರುವುದು. ಈ ಎರಡೂ ರಾಜ್ಯಗಳ ಹಿರಿಯ ಕಮ್ಯುನಿಸ್ಟ್ ನಾಯಕರಿಂದ ಪಕ್ಷದ ಬಾವುಟವನ್ನು ಚುನಾವಣೆಯ ಸಮಯದಲ್ಲಿ ಎತ್ತಿ ಹಿಡಿಯುವುದು ಅಸಾಧ್ಯವಾದಾಗ, ಅದನ್ನು ಸಾಧಿಸಿದ ಮಾಣಿಕ್ ಸರ್ಕಾರ್ ಅವರನ್ನು ದೊಡ್ಡ ರೀತಿಯಲ್ಲಿ ಪ್ರದರ್ಶಿಸುವ ಉದ್ದೇಶ ಪಕ್ಷಕ್ಕೆ ಇರಲಿಲ್ಲ.
ಆದರೆ ಈಗಿನ ಪರಿಸ್ಥಿತಿಯಲ್ಲಿ, ಪಶ್ಚಿಮ ಬಂಗಾಳದ ಹಿರಿಯ ಕಮ್ಯುನಿಸ್ಟ್ ನಾಯಕರಲ್ಲಿ ಬಹುಮಂದಿ ಸೋಲಿನಿಂದ ಜರ್ಝರಿತವಾಗಿ, ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರಂತೆ ಮನೆಗಳಲ್ಲೇ ಕೂತಿರುವಾಗಲೇ ಪಂಚಾಯಿತಿ ರಾಜ್ ಸಂಸ್ಥೆಗಳ ಚುನಾವಣೆ ನಡೆಯಲಿದೆ.
ಬಂಗಾಳದಲ್ಲಿ ಪಂಚಾಯಿತಿ ರಾಜ್ಯ ಚುನಾವಣೆ ಅಲ್ಲಿನ ಕಮ್ಯುನಿಸ್ಟರಿಗೆ ವಿಪರೀತ ಆಕರ್ಷಣೆ ಇರುವ ವಿಚಾರ. ಇಡೀ ದೇಶಕ್ಕೇ ಮಾದರಿ ಎನ್ನುವ ರೀತಿಯಲ್ಲಿ ಆ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಗತಿಪರ ಸುಧಾರಣೆಗಳನ್ನು ಜಾರಿಗೆ ತಂದಿದ್ದು ಕಮ್ಯುನಿಸ್ಟ್ ಪಕ್ಷದ ನಾಯಕರೇ.
ಆದರೆ ಈಗ ಆ ಜನರ ಮುಂದೆ ಹೋಗಿ ಕಮ್ಯುನಿಸ್ಟ್ ಪಕ್ಷದ ಪರವಾಗಿ ಓಟು ಕೇಳಲು ಒಂದು ವಿಶ್ವಾಸಾರ್ಹವಾದ ಗೆಲವಿನ ಹೊಸ ಮುಖ ಬೇಕಾಗಿದೆ. ಬಂಗಾಳದಲ್ಲಿ ಅಂತಹ ಮುಖ ಸಿಗುವುದು ಕಷ್ಟ. ಆದ್ದರಿಂದ ಬಂಗಾಳಿ ಕಮ್ಯುನಿಸ್ಟರು ಪಂಚಾಯಿತಿ ಚುನಾವಣೆಯ ಪ್ರಚಾರ ಸಮರದಲ್ಲಿ ತಮ್ಮ ಸೇನಾನಿಯಾಗಿ ಮಾಣಿಕ್ ಸರ್ಕಾರ್ ಅವರನ್ನೇ ಮುಂದಕ್ಕೆ ತಳ್ಳುವ ಚಿಂತನೆ ನಡೆಸಿದ್ದಾರೆ.
ಅದು ಮಾಣಿಕ್ ಸರ್ಕಾರ್‌ಗೆ, ಅವರ ಸರಳ ಜೀವನದ ಸಾರ್ಥಕತೆಗೆ ಸಿಕ್ಕಿ ಮಾನ್ಯತೆ ಹಾಗೂ ಗೌರವ. ಬಂಗಾಳಿ ಕಮ್ಯುನಿಸ್ಟರು ತಮ್ಮ ಕಷ್ಟಕಾಲದಲ್ಲಿ ತ್ರಿಪುರಾದ ಮಾಣಿಕ್ ಸರ್ಕಾರ್ ಅವರ ನೆರವನ್ನು ಕೇಳಿ ಪಡೆಯುತ್ತಿರುವುದು ಆ ವಲಯಗಳಲ್ಲಿ ಒಂದು ದೊಡ್ಡ ವಿಚಾರವೇ.
ಬಂಗಾಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ತನ್ನ ಮೂರು ದಶಕಕ್ಕೂ ಹೆಚ್ಚಿನ ಅವಧಿಯ ಸರ್ಕಾರ ಇದ್ದಾಗ ಪ್ರಕಟಿಸಿದ ಘೋಷಣೆಗಳು, ಜನರನ್ನು ನಡೆಸಿಕೊಂಡ ರೀತಿಯ ಹಿನ್ನೆಲೆಯಲ್ಲಿ ಈಗ ಚುನಾವಣೆಯಲ್ಲಿ ದೊಡ್ಡ ರೀತಿಯ ಜಯ ಗಳಿಸಿಕೊಡುವಂಥ ಮಾಯಾ ದಂಡವೇನೂ ಮಾಣಿಕ್ ಸರ್ಕಾರ್ ಅವರಲ್ಲಿಲ್ಲ, ಆದರೆ ಅವರು ಬಂಗಾಳಿಗಳಿಗೆ ತಮ್ಮ ಮುಖವನ್ನು ತೋರಿಸಿಲು ಹಿಂತೆಗೆಯಬೇಕಾದಂಥ ಸ್ಥಿತಿಯಲ್ಲೂ ಇಲ್ಲ.
ಮಾಣಿಕ್ ಸರ್ಕಾರ್ ತ್ರಿಪುರಾದ ಒಂದು ಸಣ್ಣ ಊರಿನ ದರ್ಜಿಯ ಮಗ. ಕಷ್ಟಪಟ್ಟು ಓದಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಪದವಿಯನ್ನು ಗಳಿಸಿದರೂ, ಅವರು ತಮ್ಮ ಜೀವನೋಪಾಯಕ್ಕೆ ಬೇರೆ ದಾರಿಯನ್ನು ಹುಡುಕದೇ, ತಾವು ನಂಬಿದ ಸಮುದಾಯದ ನೆರವಿಗೆ ನಿಲ್ಲಲು ರಾಜ್ಯದ ತಮ್ಮ ರಾಜಧಾನಿ ಅಗರ್ತಲಾಗೆ ಬಂದರು.  ಕಮ್ಯುನಿಸ್ಟರಾದರು. ಪ್ರಖ್ಯಾತ ಕಮ್ಯುನಿಸ್ಟ್ ನಾಯಕ ನೃಪೇನ್ ಚಕ್ರವರ್ತಿ, ಅವರ ಗುರು. 1981ರಲ್ಲೇ, ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲೇ ಒಂದು ಉಪಚುನಾವಣೆಯಲ್ಲಿ ವಿಧಾನಸಭೆಯನ್ನು ಪ್ರವೇಶಿಸಿ, ಅಂದಿನಿಂದಲೂ ಆ ಸದನದ ಸದಸ್ಯರಾಗಿಯೇ ಉಳಿದಿದ್ದಾರೆ. ಅವರ ಪತ್ನಿ ಪಾಂಚಾಲಿ, ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ನಿವೃತ್ತರಾಗಿದ್ದಾರೆ, ಸರ್ಕಾರ್ ದಂಪತಿಗೆ ಮಕ್ಕಳಿಲ್ಲ.
ಆರಂಭದಿಂದಲೂ ಮಾಣಿಕ್ ಸರ್ಕಾರ್ ಕಮ್ಯುನಿಸ್ಟ್ ಪಾರ್ಟಿ ಕೊಡುವ ಗೌರವಧನದಲ್ಲೇ ತಮ್ಮ ಖರ್ಚನ್ನು ನಿಭಾಯಿಸಿದ್ದಾರೆ. ಪಕ್ಷದ ನಿಯಮದಂತೆ, ಮುಖ್ಯಮಂತ್ರಿಯಾಗಿದ್ದಾಗಲೂ ಅವರು ತಮ್ಮ ಸಂಬಳ- ಭತ್ಯವನ್ನೆಲ್ಲ ಪಕ್ಷಕ್ಕೇ ಕೊಟ್ಟು, ಪಕ್ಷ ಕೊಡುವ ಹಣದಲ್ಲೇ ತೃಪ್ತರಾಗಿದ್ದವರು. (ಬಂಗಾಳದ ಬುದ್ಧದೇವ ಭಟ್ಟಾಚಾರ್ಯ ಅವರಂತೆ).
ತಮ್ಮ ಅಧಿಕಾರಾವಧಿಯಲ್ಲಿ ಅವರು ಶಾಂತಿ- ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ತ್ರಿಪುರಾ, ಈಶಾನ್ಯ ಭಾರತದಲ್ಲಿ ಒಂದು ಆಯಕಟ್ಟಿನ ರಾಜ್ಯ ಬಂಗ್ಲಾದೇಶ- ಮ್ಯಾನ್‌ಮಾರ್‌ಗಳ ಸಂಪರ್ಕ ಸಾಧ್ಯ. ಆ ರಾಜ್ಯದ ಅಭಿವೃದ್ಧಿಗೆ ಇದು ಸಕಾಲ. ಆದರೆ ಅದನ್ನು ರಾಜ್ಯದ ಆಂತರಿಕ ಸಂಪನ್ಮೂಲಗಳಿಂದಲೇ ಮಾಡಬೇಕೆಂದರೆ ಸಾಧ್ಯವಿಲ್ಲ.
ಈಶಾನ್ಯ ಭಾರತದ ಎಲ್ಲ ರಾಜ್ಯಗಳಂತೆ, ತ್ರಿಪುರಾ ಕೂಡಾ ಕೇಂದ್ರದ ನೆರವನ್ನೇ ಅವಲಂಬಿಸಿದೆ. ಅಲ್ಲಿನ ಸರ್ಕಾರದಲ್ಲಿ ಭ್ರಷ್ಟಾಚಾರವಿದೆ ಎನ್ನುವ ಮಾತನ್ನು ಪ್ರತಿಪಕ್ಷವಾದ ಕಾಂಗ್ರೆಸ್ಸೂ ಹೇಳುವುದಕ್ಕೆ ಆಗದಂಥ ಆಡಳಿತಾತ್ಮಕ ವಾತಾವರಣವನ್ನು ಸೃಷ್ಟಿಸಿರುವುದೇ ಸರ್ಕಾರ್ ಅವರ ದೊಡ್ಡ ಸಾಧನೆ. ಆದರೂ ಅವರ ಪರಿಚಯ ಮಾಡಿಕೊಡುವವರು ದೇಶದ ಅತಿ ಬಡವ ಮುಖ್ಯಮಂತ್ರಿ ಎಂದೇ ಪರಿಚಯ ಮಾಡಿಕೊಡುತ್ತಿರುವುದನ್ನು ಇನ್ನಾದರೂ ನಿಲ್ಲಿಸಬೇಕು. ಅವರ ವ್ಯಕ್ತಿತ್ವದ ಹಿರಿಮೆಯನ್ನು ಹೇಳಬೇಕು. <

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?