ಜಂಗಲ್ ಜಾಕಿ ರಾಜೇಶ್ ಪ್ರೇರಣೆಯಿಂದ ಇತರ ಗಿರಿಜನರು ಪ್ಯಾಟೆಯತ್ತ ಮುಖ ಮಾಡಿದರೆ? ಗಿರಿಜನರ ಬದುಕು ಹೇಗಿದೆ? ನಾಡಿನಿಂದ ವಿಮುಖವಾಗಿ ಕಾಡಿನಲ್ಲೇ ಬದುಕು ಸವೆಸಬಹುದೆ? ಆದಿವಾಸಿಗಳು ಆಧುನಿಕ ಬದುಕಿನಿಂದ ಎಂಥ ಸವಾಲು ಎದುರಿಸುತ್ತಾರೆ? ಹೀಗೇ ಪ್ರಶ್ನೆಗಳು.
ಕಾಕನಕೋಟೆ ಕಾಡಿನ ಬಳ್ಳೆ ಹಾಡಿಯಿಂದ ಬಂದ ಗಿರಿಜನ ಯುವಕ ರಾಜೇಶ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನಿಂದ ಎಷ್ಟು ಬೇಗ ಪ್ರಸಿದ್ಧಿಯಾದನೋ ಅಷ್ಟೇ ಬೇಗ ಕಣ್ಮರೆಯಾಗಿದ್ದಾನೆ. ರೀಲ್ ಮತ್ತು ರಿಯಲ್ ಲೈಫ್‌ಗಳ, ಭ್ರಮೆ ಮತ್ತು ವಾಸ್ತವಗಳ ನಡುವಿನ ಅಂತರ ಅರಿಯದೇ ಹೋದದ್ದು ಇದಕ್ಕೆ ಕಾರಣ.
ರಾಜೇಶ್ ರಿಯಾಲಿಟಿ ಶೋನಿಂದ ರೀಲ್ ಬದುಕಿಗೆ ಕಾಲಿಟ್ಟ. ಜಂಗಲ್‌ಜಾಕಿ ಚಿತ್ರದ ನಾಯಕ ನಟನಾದ. ಬಣ್ಣ, ಬಣ್ಣದ ಶರ್ಟು, ಜೀನ್ಸ್ ಪ್ಯಾಂಟ್ ಹಾಕತೊಡಗಿದ. ರಸ್ತೆ ಇಲ್ಲದ ತನ್ನ ಹಾಡಿಗೆ ಬೈಕ್ ತಂದ. ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು, ಜೊತೆಗೊಂದು ಕ್ಯಾನಿನಲ್ಲಿಯೂ ಪೆಟ್ರೋಲ್ ಇಟ್ಟುಕೊಂಡು ಸಮೀಪದ ಡಿ.ಬಿ. ಕುಪ್ಪೆ, ಕೇರಳದ ಮಾನಂದವಾಡಿ ಮತ್ತಿತರ ಸ್ಥಳಗಳಿಗೆ ಸುತ್ತತೊಡಗಿದ. ಕರೆಂಟ್ ಇಲ್ಲದ ಹಾಡಿಯ ಮನೆಗೆ ಜನರೇಟರ್ ತಂದ. ಟಿವಿ ತಂದ. ಟಿವಿ ನೋಡಲು ಆಂಟೆನ ಹಾಕಿಸಿಕೊಂಡ. ಸಂಬಂಧಿಕರ ಯುವತಿಯನ್ನು ಮದುವೆಯೂ ಆದ. ಜಂಗಲ್‌ಜಾಕಿ ಚಿತ್ರ ಬಿಡುಗಡೆ ವಿಳಂಬವಾದಾಗ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆದ.
ನಂತರ ಬಿಗ್ ಬಾಸ್‌ಗೂ ಹೋಗಿ ಬಂದ. ಲವ್ ಈಸ್ ಪಾಯಿಸನ್ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದ. ರಿಯಾಲಿಟಿ ಶೋನಲ್ಲಿ ಆದಂತೆಯೇ ಹಳ್ಳಿಯಿಂದ ನಿಜವಾಗಿಯೂ ಪ್ಯಾಟೇಗ್ ಬಂದಿದ್ದ. ದೂರದ ಬಳ್ಳೆಯಿಂದ ಮೈಸೂರು ಹೊರವಲಯದ ಪರಸಯ್ಯನಹುಂಡಿಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ.
ರಾಜೇಶ್‌ನನ್ನು ಅನುಸರಿಸಿ, ಇತರೆ ಗಿರಿಜನರು ಕಾಡಿನಿಂದ ಪ್ಯಾಟೆಯತ್ತ ಮುಖ ಮಾಡಿದರೆ? ಹಾಗೇನೂ ಇಲ್ಲ. ಗಿರಿಜನರು ತಲಾತಲಾಂತರದಿಂದಲೂ ನಾಡಿನಿಂದ ದೂರ ಉಳಿದವರು. ಅಮಾಯಕರು, ಮುಗ್ಧರು, ಅಕ್ಷರ ವಂಚಿತರು. ನಾಗರಿಕ ಸಮಾಜದ ಥಳುಕು- ಬಳಕು ಅರಿಯದವರು. ಎಷ್ಟೋ ಮಂದಿ ನಾಡಿನ ಜನರ ಸಹವಾಸವೇ ಬೇಡ ಎಂದು, ಜಪ್ಪಯ್ಯ ಅಂದರೂ ಕಾಡಿನಿಂದ ಹೊರಗೆ ಬರಲೊಪ್ಪದವರು. ಈಗಲೂ ಕೂಲಿಗಾಗಿ ಪಕ್ಕದ ಕೇರಳದ ವಯನಾಡು ಹಾಗೂ ಕೊಡಗಿನ ಕಾಫಿ ಎಸ್ಟೇಟ್‌ಗಳಿಗೆ ಹೋಗುತ್ತಾರೆ. ಕೆಲವರು ಪ್ರತಿದಿನ ಬೆಳಗ್ಗೆ ವಾಹನದಲ್ಲಿ ಹೋಗಿ ಸಂಜೆ ವಾಪಸ್ ಆದರೆ ಮತ್ತೆ ಕೆಲವರು ಕುಟುಂಬ ಸಮೇತ ಹೋಗಿ ಎರಡು- ಮೂರು ತಿಂಗಳು ಇದ್ದು, ಒಂದಷ್ಟು ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ. ಆನೆ ಶಿಬಿರಗಳಲ್ಲಿರುವವರು ದಸರೆ ಸಂದರ್ಭ ಎರಡು ತಿಂಗಳು ಮೈಸೂರಿಗೆ ಬರುವುದು ಹೊರತುಪಡಿಸಿದರೆ ಉಳಿದಂತೆ ಕಾಡಿನಲ್ಲಿಯೇ ಇರುತ್ತಾರೆ. ಆದಿವಾಸಿಗಳ ಪೈಕಿ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವರು ಮಾತ್ರ ಆಗಾಗ ಬೇರೆ ಬೇರೆ ವ್ಯಾಪಾರ- ವ್ಯವಹಾರ ಎಂದು ಹೋಗಿ ಬರುವುದುಂಟು. ಇದಕ್ಕೆ ಹುಣಸೂರು ತಾಲೂಕು ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗ ನಿದರ್ಶನ.
ಖಾಸಗಿ ವಾಹಿನಿ ರಿಯಾಲಿಟಿ ಶೋ ಆರಂಭಿಸಿದಾಗ ರಾಜೇಶ ಮಾತ್ರವಲ್ಲದೆ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದ ಸಿದ್ದಿ ಜನಾಂಗದ ಸುಮಾರು 10 ಯುವಕರು ಕೂಡ ಹೋಗಿದ್ದರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಹೊರಬಿದ್ದ ನಂತರ ಪ್ಯಾಟೆ ಸಹವಾಸವೇ ಬೇಡ ಎಂದು ತಮ್ಮ ತಮ್ಮ ಹಾಡಿಗಳಲ್ಲಿ ಎಂದಿನಂತೆ ಬದುಕುತ್ತಿದ್ದಾರೆ. ರಾಜೇಶನಂತೆ ಯಾರೂ ಹಣ ಮತ್ತು ಪ್ರಸಿದ್ಧಿಯ ಹಿಂದೆ ಬಿದ್ದಿಲ್ಲ.
ಆದಿವಾಸಿಗಳಲ್ಲಿ ಜೇನು ಕುರುಬರು, ಬೆಟ್ಟ ಕುರುಬರು, ಯರವರು, ಇರುಳಿಗರು- ಎಂಬ ನಾಲ್ಕು ಪ್ರಮುಖ ಜಾತಿ. ಸೂಜಿ ಸೋಲಿಗರು ಹಕ್ಕಿಪಿಕ್ಕಿ ಜನಾಂಗದವರಂತೆ ಶಾಸ್ತ್ರ ಹೇಳಲು ಊರೂರು ಅಲೆಯುತ್ತಾರೆ. ಮೈಸೂರು ಜಿಲ್ಲೆಯಲ್ಲಿರುವ 106 ಹಾಡಿಗಳಲ್ಲಿ ಜೇನು ಕುರುಬರದ್ದೇ ಮೇಲುಗೈ. ಹಕ್ಕಿಪಿಕ್ಕಿ ಮತ್ತು ಸೂಜಿಸೋಲಿಗರು ಮೂರ್ನಾಲ್ಕು ಹಾಡಿಗಳಲ್ಲಿ ಇದ್ದಾರೆ. ಒಟ್ಟಾರೆ ಆದಿವಾಸಿಗಳ ಜನಸಂಖ್ಯೆ ನಲ್ವತ್ತು ಸಾವಿರ.
ರಾಜೇಶ ಬಳ್ಳೆ ಹಾಡಿಗೆ ಸೇರಿದವನು. ಇದು ಕಾಕನಕೋಟೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಕಾಕನಕೋಟೆ ವ್ಯಾಪ್ತಿಯಲ್ಲಿ ಬಳ್ಳೆ ಹಾಡಿ, ಗೋಳೂರು ಹಾಡಿ, ಮಚ್ಚೂರು ಹಾಡಿ, ಮಚ್ಚೂರು ಕೆರೆ ಹಾಡಿ, ಆನೆಮಾಳ, ಮಾನಿಮೂಲೆ, ತಿಮ್ಮನಹೊಸಹಳ್ಳಿ, ಹೊಸೂರು, ಬಾವಲಿ, ಮೂಲೆಯೂರು- ಈ 10 ಹಾಡಿಗಳು ಬರುತ್ತವೆ. ಇದಲ್ಲದೆ ಕಾಡಂಚಿನಲ್ಲಿ ದಮ್ಮನಕಟ್ಟೆ, ಮಾಳದಹಾಡಿ, ಶೀಗೂರು ಕೆರೆಹಾಡಿ ಬರುತ್ತವೆ. ಇಲ್ಲಿ ಸುಮಾರು 600 ಕುಟುಂಬಗಳಿದ್ದು, ಜನಸಂಖ್ಯೆ 2,500.
ಆದಿವಾಸಿಗಳು ವಾಸಿಸುವ ಬಹುತೇಕ ಹಾಡಿಗಳಿಗೆ ಇವತ್ತಿಗೂ ಮೂಲಭೂತ ಸೌಲಭ್ಯಗಳಿಲ್ಲ. ಸೂಕ್ತ ಶಾಲಾ ಕಟ್ಟಡ, ಆಸ್ಪತ್ರೆಗಳಿಲ್ಲ. ಹೊಸ ಕಟ್ಟಡ ನಿರ್ಮಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಇರುವ ಶಾಲೆಗಳಿಗೆ ಶಿಕ್ಷಕರು ಹೋಗುವುದಿಲ್ಲ. ಏಕೆಂದರೆ ಸಾರಿಗೆ ಸೌಲಭ್ಯ ಕೊರತೆ. ರಾತ್ರಿ ಕಾಡುಪ್ರಾಣಿಗಳ ಭಯ. ಕಾಡಿನಿಂದ ಹೊರಬಂದಿರುವ ಆದಿವಾಸಿಗಳ ಪುನರ್ವತಿ ಕೇಂದ್ರದಲ್ಲೂ ಸೌಲಭ್ಯಗಳ ಕೊರತೆ. ಹುಣಸೂರು ತಾಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಬಾಣಂತಿ ಹಾಗೂ ಮಗು ಸಾವಿನ ಪ್ರಕರಣ ಇದಕ್ಕೆ ನಿದರ್ಶನ.
ಕಾಡಿನಿಂದ ಹೊರಬಂದ ಗಿರಿಜನರು ಸತ್ತವರನ್ನು ಹೂಳಲು ಜಾಗವಿಲ್ಲದೆ ಪರದಾಡಿದ್ದಾರೆ. ಮೀನಿನ ಬೇಟೆಗೆ ಹೋಗಿ ಅರಣ್ಯ ಇಲಾಖೆಯವರಿಂದ ಗುಂಡೇಟು ಹೊಡೆಸಿಕೊಂಡಿದ್ದಾರೆ. ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಹೋಗಿ ಕೇಸುಗಳಿಗೆ ಸಿಲುಕಿದ್ದಾರೆ.
ಕೇಂದ್ರ ಸರ್ಕಾರದ ಬುಡಕಟ್ಟು ಅರಣ್ಯ ಹಕ್ಕುಗಳ ಮಾನ್ಯತಾ ಕಾಯ್ದೆ 2006ರ ಅನ್ವಯ ಸಾಮೂಹಿಕ ಅರಣ್ಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ಸಾಮೂಹಿಕ ಅರಣ್ಯ ಹಕ್ಕುಪತ್ರ ಸಿಕ್ಕಿಲ್ಲ. ಈ ಹಕ್ಕುಪತ್ರ ನೀಡಿ, ಮನೆ, ಶಾಲೆ, ಅಂಗನವಾಡಿ, ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಗಿಡಮೂಲಿಕೆ ಸಂಗ್ರಹ, ಮೀನು ಹಿಡಿಯಲು,ಕಿರು ಅರಣ್ಯ ಉತ್ಪನ್ನ ಸಂಗ್ರಹ, ಪೂಜಾ ಸ್ಥಳ, ಸ್ಮಶಾನ ಜಾಗ ನಿಗದಿ ಮಾಡಿಕೊಡಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೂ ಗಿರಿಜನರು ಕೂಗು ಸಂಬಂಧಪಟ್ಟವರಿಗೆ ತಲುಪಿಲ್ಲ.
- ಅಂಶಿ ಪ್ರಸನ್ನಕುಮಾರ್
amshipkumar@gmail.com