ತಂದೆ, ಮಗ ಇಬ್ಬರೂ ಮೇಸ್ತ್ರಿಗಳೇ. ತಂದೆ ಧಾರ್ಮಿಕ ಪ್ರವೃತ್ತಿಯವ, ಧರ್ಮಭೀರು, ಒಳ್ಳೆಯ ಕೆಲಸಗಾರ ಹಾಗೂ ಕೆಲಸದಲ್ಲಿ ತುಂಬಾ ನಿಷ್ಠಾವಂತ.
ಒಂದು ಆಸ್ಪತ್ರೆ ಕಟ್ಟಡದ ಅಡಿಪಾಯವನ್ನು ಅವರಿಬ್ಬರೂ ಸೇರಿ ಕಟ್ಟುತ್ತಿದ್ದರು. ದಿನದ ಕೊನೆ. ಕಟ್ಟಕಡೆಯ ಒಂದೇ ಒಂದು ಕಲ್ಲನ್ನು ಅಡಿಪಾಯಕ್ಕೆ ಕೂಡ್ರಿಸಬೇಕಾಗಿತ್ತು. ಆದರೆ ಸಿಮೆಂಟ್ ಗಾರೆ ಮುಗಿದುಹೋಗಿತ್ತು. ಆಗ ತಂದೆ 'ಮಗಾ, ಒಂದಷ್ಟು ಸಿಮೆಂಟು-ಮರಳು-ನೀರು ಸೇರಿಸಿ ಗಾರೆ ಕಲೆಸು. ಈ ಕಲ್ಲನ್ನು ಅಡಿಪಾಯಕ್ಕೆ ಸೇರಿಸಿ ಮನೆಗೆ ಹೋಗುವ' ಎಂದು ಹೇಳಿದ.
ಆಗ ಮಗ 'ಅಪ್ಪಾ, ಹೊಸದಾಗಿ ಸಿಮೆಂಟ್ ಗಾರೆ ಕಲೆಸೋದು ಬೇಡ. ಈಗ ಹಾಕಿರೋ ತಳಹದಿ ಕಲ್ಲುಗಳಿಂದ ಗಾರೆಯನ್ನು ಸ್ವಲ್ಪ ಕೆರೆದು ತೆಗೆದು, ಅದಕ್ಕೆ ನೀರು ಸೇರಿಸಿ ಕಲೆಸಿ, ಈ ಒಂದು ಕಲ್ಲನ್ನು ಬುಡಕ್ಕೆ ಸೇರಿಸಿಬಿಡುವ ಬಿಡು' ಎಂದು ಉಡಾಫೆಯಿಂದ ಹೇಳಿದ.
'ಹೊಸದಾಗಿ ಕಲೆಸೋ ಸಿಮೆಂಟ್ ಗಾರೆಯಷ್ಟು, ಈ ಕೆರೆದ ಸಿಮೆಂಟ್ ಗಾರೆ ಗಟ್ಟಿ ಇರುವುದಿಲ್ಲ ಕಣ್ಮಗ' ಎಂದ ಅಪ್ಪ.
'ಈ ಬಿಲ್ಡಿಂಗ್‌ಗೆ ನೂರು ವರ್ಷ ಆದ ಮೇಲೂ, ನೀನು ಹೀಗೆ ಈ ಅಡಿಪಾಯದ ಒಂದು ಕಲ್ಲನ್ನು ಕೆರೆದ ಗಾರೆಯಿಂದ ಕಟ್ಟಿದ್ದೀಯ ಅಂತ ಯಾರಿಗೆ ಗೊತ್ತಾಗುತ್ತೆ, ಬಿಡಪ್ಪಾ' ಎಂದು ಮಗ ವಾದ ಮಾಡಿದ.
'ಇಬ್ಬರಿಗೆ ಗೊತ್ತಾಗುತ್ತೆ ಮಗಾ, ಅವರು ಮುಂದೆ ಎಂದೋ ಒಂದು ದಿನ ದೇವರ ಮುಂದೆ ನಾಚಿಕೆಯಿಂದ ತಮ್ಮ ಈ ಮೋಸದ ಕೆಲಸಕ್ಕಾಗಿ ತಲೆ ತಗ್ಗಿಸಿ ನಿಂತುಕೋಬೇಕಾಗುತ್ತೆ' ಎಂದ ಅಪ್ಪ.
ಮಗ: 'ಯಾರು?'
ಅಪ್ಪ 'ನೀನು ಮತ್ತು ನಾನು!'
= ಎಸ್. ವಿಶ್ವನಾಥ, ಮಂಡ್ಯ