ಯುವಜನ/ಮಕ್ಕಳು

ಬೇಸಿಗೆ ರಜೆ ಆಗದಿರಲಿ ಸಜೆ

'ಅಮ್ಮಾ, ನಾಳೆಯಿಂದ ಶಾಲೆಗೆ ರಜೆ, ಅಜ್ಜಿ ಮನೆಗೆ ಹೋಗೋಣಾ....

'ಅಮ್ಮಾ, ನಾಳೆಯಿಂದ ಶಾಲೆಗೆ ರಜೆ, ಅಜ್ಜಿ ಮನೆಗೆ ಹೋಗೋಣಾ. ಅಲ್ಲಿ ನಾಯಿ, ಬೆಕ್ಕು, ದನ, ಕರು, ಕಾಡು, ನದಿ ಎಲ್ಲಾ ಇದೆ. ಚೆನ್ನಾಗಿ ಆಟವಾಡಬಹುದು' ಎಂದು ಪಕ್ಕದ್ಮನೆ ಕೌಸ್ತುಭ ಒಂದೇ ಸಮನೆ ಹಠ ಮಾಡ್ತಾ ಇದ್ರೆ, ಅವರಮ್ಮ,  'ಬೇಸಿಗೆ ಶಿಬಿರಕ್ಕೆ ಹೆಸರು ಕೊಟ್ಟು ಬಂದಿದ್ದೀನಿ. ನೀನು ಅಜ್ಜಿ ಮನೆಗೆ ಹೋದರೆ ಶಿಬಿರಕ್ಕೆ ಯಾರು ಹೋಗ್ತಾರೆ...' ಎನ್ನುತ್ತಿದ್ದಳು.
ಇದು ಕೇವಲ ಒಂದು ಮನೆಯ ಕತೆಯಲ್ಲ. ವರ್ಷವಿಡೀ ಒಂದು ದಿನವೂ ಬಿಡುವಿಲ್ಲದೆ ಶಾಲೆ, ಟ್ಯೂಷನ್, ಬೇರೆಬೇರೆ ಕಲಿಕೆಯ ತರಗತಿಗಳು ಎಂದೆಲ್ಲಾ ಓಡಾಡುವ ಮಕ್ಕಳಿಗೆ ವರ್ಷಕ್ಕೊಮ್ಮೆ ಬರುವ ಬೇಸಿಗೆ ರಜೆಯನ್ನು ಸಂತಸದಿಂದ ಕಳೆಯಲು ಆಸೆ. ಆದರೆ, ತಮ್ಮ ಮಕ್ಕಳು ಅವರ ವಯಸ್ಸಿಗಿಂತ ಹೆಚ್ಚಿನ ಸಾಧನೆ ಮಾಡಿ, ಕೀರ್ತಿ ತರಬೇಕೆನ್ನುವುದು ಹೆತ್ತವರ ಆಸೆ.
ಗ್ರಾಮೀಣ ಪ್ರದೇಶದಲ್ಲಿಯಾದರೆ, ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲೋ, ಹೊಲದಲ್ಲೋ ಸಮಯ ಕಳೆಯುತ್ತಾರೆ. ಆದರೆ ಪಟ್ಟಣ ಪ್ರದೇಶದಲ್ಲಿ ಅಪ್ಪ-ಅಮ್ಮ ಇಬ್ಬರೂ ವೃತ್ತಿಪರರಾಗಿದ್ದರೆ, ಮಕ್ಕಳನ್ನು ಯಾವುದಾದರೂ ಶಿಬಿರಗಳಿಗೋ, ಕಲಿಕೆಗೋ ಕಳುಹಿಸುವುದು ಅನಿವಾರ್ಯವಾಗುತ್ತದೆ.
ಇತ್ತೀಚೆಗೆ ಗಲ್ಲಿಗೊಂದರಂತೆ ತಲೆಯೆತ್ತುವ 'ಬೇಸಿಗೆ ಶಿಬಿರ'ಗಳಲ್ಲಿ ಕೆಲವು ಹಣ ಸಂಪಾದನೆಗಾಗಿಯೇ ಇರುವಂಥವು. ಎಲ್ಲ ಮಕ್ಕಳನ್ನೂ ಒಟ್ಟುಗೂಡಿಸಿ, ಅವರಿಗಿಷ್ಟವಿಲ್ಲದ ಬಂಧನದಲ್ಲಿ ಸಿಲುಕಿಸಿ, ಅವರಲ್ಲಿರುವ ಉತ್ಸಾಹವನ್ನೆಲ್ಲ ತಗ್ಗಿಸಿ, ಬೇಸಿಗೆ ಶಿಬಿರಕ್ಕಿಂತ ಶಾಲೆಯೇ ವಾಸಿ ಎನ್ನುವ ರೀತಿ ಆಯೋಜನೆಗೊಂಡಿರುತ್ತವೆ.ಆದುದರಿಂದ ಮಕ್ಕಳನ್ನು ಶಿಬಿರಗಳಿಗೆ ಸೇರಿಸುವಾಗ ಸರಿಯಾಗಿ ವಿಚಾರಿಸಿಕೊಂಡು, ಉಪಯುಕ್ತವಾದ ಹಾಗೂ ತಮ್ಮ ಮಕ್ಕಳ ಅಭಿರುಚಿಗೆ ಅನುಗುಣವಾಗಿ ಮಕ್ಕಳನ್ನು ಶಿಬಿರಗಳಿಗೆ ಸೇರಿಸುವುದು ಒಳಿತು.
ಇವೆಲ್ಲಕ್ಕೂ ಮಿಗಿಲಾಗಿ ರಜಾ ಅವಧಿಯಲ್ಲಿ ಪೋಷಕರು ಮಕ್ಕಳೊಂದಿಗೆ ಬೆರೆತು ಹೆಚ್ಚು ಸಮಯ ಕಳೆಯುವುದರಿಂದ, ಮಗುವಿನೊಂದಿಗೆ ಬಾಂಧವ್ಯ ಹೆಚ್ಚಾಗುತ್ತದೆ. ಇಷ್ಟೇ ಅಲ್ಲ ರಜಾ ಅವಧಿಯಲ್ಲಿ ಮಕ್ಕಳ ಪ್ರವಾಸಕ್ಕೆ ಸೂಕ್ತವಾದ ಸಮಯ. ಬೇರೆ ಊರಿನಲ್ಲಿ ವಾಸವಿರುವ ಪೋಷಕರು ತಮ್ಮ ಹುಟ್ಟೂರಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಮಕ್ಕಳಿಗೆ ಹಿರಿಯರ ಪರಿಚಯ, ಒಡನಾಟ ಹೆಚ್ಚಾಗುತ್ತದೆ. ಅಜ್ಜ-ಅಜ್ಜಿಯರಿದ್ದರೆ ಅವರಿಂದ ಕತೆಗಳು, ಶ್ಲೋಕಗಳು, ಹಿರಿಯರ ಜೀವನಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿಹೇಳಿದರೆ ಮಕ್ಕಳ ಮನಸ್ಸಿನಲ್ಲಿ ಸಾಧಿಸಬೇಕೆನ್ನುವ ಛಲ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಇದರ ಜತೆಗೆ ಕೆಲವು ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಇರುವ ಸ್ಥಳಗಳಿಗೆ ಪ್ರವಾಸ ಕರೆದುಕೊಂಡು ಹೋದಲ್ಲಿ ಮಕ್ಕಳ ಮನೋವಿಕಾಸವಾಗುತ್ತದೆ.
ರಜೆಯಲ್ಲಿ ಮಕ್ಕಳನ್ನು ಕೇವಲ ಶಿಬಿರಗಳಿಗೇ ಸೇರಿಸಬೇಕೆಂದಿಲ್ಲ. ಅವರ ಇಚ್ಛೆಯ ಪ್ರಕಾರ ಮನೆಯಲ್ಲಿಯೇ ತರಬೇತಿ ನೀಡಬಹುದು ಅಥವಾ ಇನ್ನಿತರೆ ಚಟುವಟಿಕೆಗಳಲ್ಲಿ ಅವರು ತೊಡಗುವಂತೆ ಮಾಡಬಹುದು. ಉದಾಹರಣೆಗೆ, ಈಜುವುದನ್ನು ಕಲಿಸಬಹುದು. ಪದಜೋಡಣೆ, ಪೇಪರ್ ಕಟಿಂಗ್, ವಿವಿಧ ವಿನ್ಯಾಸಗಳ ರಚನೆ, ಶ್ಲೋಕಗಳನ್ನು ಕಲಿಸುವುದು... ಹೀಗೆ ಹತ್ತು ಹಲವು ವಿಷಯಗಳಲ್ಲಿ ಮಕ್ಕಳನ್ನು ತೊಡಗಿಸಬಹುದು.
ಬೇಸಿಗೆ ರಜೆ ಎಂದರೆ ಮಕ್ಕಳು ಕುಣಿದು ಕುಪ್ಪಳಿಸುವುದಕ್ಕಷ್ಟೇ ಮೀಸಲಿಡಬಾರದು. ಆಟದ ಜತೆ ಓದಿನ ಕಡೆಗೂ ನಿಗಾವಹಿಸುವಂತೆ ಮಾಡಬೇಕು. ರಜೆಯಲ್ಲಿ ಪ್ರತಿದಿನ ನಿಗದಿತ ಸಮಯದಲ್ಲಿ ಪುಸ್ತಕಗಳೊಂದಿಗೆ ಇರುವಂತೆ ಮಾಡಬೇಕು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ರಜೆಯಲ್ಲಿ ಮಾಡಲು ಒಂದಷ್ಟು ಮನೆಗೆಲಸವನ್ನೂ ಕೊಟ್ಟಿರುತ್ತಾರೆ. ಇದನ್ನು ಪ್ರತಿದಿನ ತಪ್ಪದೇ ಮಾಡುವಂತೆ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯ. ಇವೆಲ್ಲದರ ಜತೆ ರಜೆಯು ಸಜೆಯಾಗದಂತೆ ಪ್ರೀತಿಯಿಂದ ನೋಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕ.

-ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!