ಬೇಡ ಮುನಿಸು ಸೂರ್ಯದೇವ
ಸ್ವಲ್ಪ ನೋಡು ನಮ್ಮ ನೋವ
ಬಿಸಿಲು ಹರಿಸಿ ನಗುವೆ ನೀನು
ನಮ್ಮ ನೋವ ತಿಳಿಯದೇನು?
ಬೆಳಕು ಮಾತ್ರ ನಮಗೆ ಬರಲಿ
ಸುಡುವ ಕಿರಣ ನಿನಗೇ ಇರಲಿ
ಕಾಡು ಎಲ್ಲ ನಾಶವಾಗಿದೆ
ಬಯಲಿನಲ್ಲಿ ನೆರಳು ಎಲ್ಲಿದೆ?
ಮೈಯ್ಯ ತುಂಬ ಬೆವರು
ಸಾಲದು ಕುಡಿವ ನೀರು
ಕಣ್ಣು ಕಾಣದು ಬಿಸಿಲಿಗೆ
ಬೇಡ ಬೇಡ ಹಗಲು ನಮಗೆ
ತಣ್ಣನೆಯ ಮಜ್ಜಿಗೆ ಇರಲು
ಏನು ಬೇಕು ಹೊಟ್ಟೆ ತುಂಬಲು
ತಣ್ಣಗಿರು ಚಂದ್ರನಂತೆ
ನೀನೇ ನಮಗೆ ದೇವರಂತೆ
ಬಂದರೆ ಚಳಿಯ ಕಾಲವು
ಆಗಬೇಕು ನಿನ್ನ ಜತೆಯು
ನಮ್ಮ ಮೊರೆಯ ಮನ್ನಿಸು
ಬಿಸಿಲ ಬೇಗೆ ಮುಗಿಸು
-ಶಿವನಾಪುರ ನರಸಿಂಹಮೂರ್ತಿ