ಅದೊಂದು ಕಾಲೇಜು ಕ್ಯಾಂಪಸ್. ಒಂದು ಹುಡುಗಿಯನ್ನು ಹುಡುಗ ತನ್ನ ಗಲ್‌ಫ್ರೆಂಡ್ ಎಂದು ಎಲ್ಲರ ಬಳಿ ಹೇಳಿಕೊಂಡು ತಿರುಗುತ್ತಿರುತ್ತಾನೆ. ಆದರೆ, ಹುಡುಗಿ ಇಷ್ಟಪಡುತ್ತಿರುವುದು ಆ ಹುಡುಗನ ಫ್ರೆಂಡ್‌ನನ್ನು. ನಂತರ ಆತ್ಮೀಯ ಗೆಳೆಯರಿಬ್ಬರೂ ಆ ಹುಡುಗಿಗಾಗಿ ಪರಸ್ಪರ ಕಾದಾಡುತ್ತಾರೆ...
ಇದು ಇತ್ತೀಚೆಗೆ ತೆರೆಕಂಡ 'ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾದ ಕಥೆ. ನಮ್ಮ ಕಾಲೇಜು ಕ್ಯಾಂಪಸ್ ಹುಡುಕಾಡಿದರೂ ಇದೇ ರೀತಿಯ ಅದೆಷ್ಟೋ ಕಣ್ಣಿಗೆ ಬಿದ್ದರೆ ಅಚ್ಚರಿ ಇಲ್ಲ. ಪಾತ್ರಗಳಲ್ಲಿ ಒಂದಷ್ಟು ವ್ಯತ್ಯಾಸ ಇರಬಹುದು ಅಷ್ಟೆ. ಈಗೀಗ ಕಾಲೇಜು ಅಂದಮೇಲೆ ಪ್ರೀತಿ, ಪ್ರೇಮ ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ, ಟೈಂಪಾಸಿಗಾದರೂ ಸರಿ ಬಾಯ್‌ಫ್ರೆಂಡ್/ ಗರ್ಲ್‌ಫ್ರೆಂಡ್ ಇರಲೇಬೇಕು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿರುವುದು ಆಘಾತಕಾರಿ. ಇದರ ಪರಿಣಾಮ ಉಳಿದ ವಿದ್ಯಾರ್ಥಿಗಳ ಮೇಲೂ ಆಗುತ್ತದೆ. ತಮ್ಮ ಗೆಳತಿಯರನ್ನು ನೋಡಿ ಉಳಿದ ಅಮಾಯಕ ಹುಡುಗಿಯರೂ 'ನನಗೂ ಒಬ್ಬ ಗೆಳೆಯಬೇಕು... ಹೇಳದೇನೆ ಅವನಿಗೆಲ್ಲಾ ತಿಳಿಯಬೇಕು...' ಎಂದು ಮೌನವಾಗಿ ಹಾಡಲು ಶುರುಮಾಡುತ್ತಾರೆ. ಕೊನೆಗೊಂದು ದಿನ ಪ್ರೀತಿಯ ಹೆಸರಿನಲ್ಲಿ ಮೋಸ ಹೋಗಿ ಕಣ್ಣೀರು ಹಾಕುತ್ತಾರೆ.
ಕಾಲೇಜು ಅಂದಮೇಲೆ ಪ್ರೀತಿ, ಪ್ರೇಮ ಇದ್ದದ್ದೆ. ಆದರೆ, ಅದಕ್ಕೊಂದು ಒಂದು ಮಿತಿಯಿರಬೇಕು. ನಾವು ಕಾಲೇಜಿಗೆ ಬರೋದು ಓದಲಿಕ್ಕೆ ಅನ್ನುವುದು ಎನ್ನುವ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ಯಾವುದೂ ಅತಿರೇಕವಾಗಬಾರದು. ಇದು ಸ್ನೇಹದ ವಿಚಾರದಲ್ಲೂ ಅಷ್ಟೆ. ಇಲ್ಲದಿದ್ದರೆ ಓದುವ ವಯಸ್ಸಿನಲ್ಲಿ ಖಿನ್ನತೆಗೆ ಬಿದ್ದು ಭವಿಷ್ಯವೇ ಹಾಳಾಗಬಹುದು. ಕೊನೆಗೆ ಆ ನೋವು ಜೀವನವಿಡೀ ಕಾಡಬಹುದು. ಯಾಕೆಂದರೆ ಕ್ಯಾಂಪಸ್‌ನೊಳಗೆ ಅರಳುವ ಪ್ರೀತಿಯಾಗಲಿ, ಸ್ನೇಹವಾಗಲಿ ಬಿಟ್ಟು ಹೋಗುವ ನೋವು ಮತ್ತು ನಲಿವಿಗೆ ಯಾವತ್ತೂ ಸಾವಿಲ್ಲ...
- ವಿದ್ಯಾ ಇರ್ವತ್ತೂರು