ಚಿನ್ನದ ಹಾಡು
ಚಿನ್ನದ ನಾಡು ಗಂಧದ ಬೀಡು
ಜೇನಿನ ಗೂಡಿದು ಕನ್ನಡವು
ಸುಂದರ ವನಗಳ ಗಿರಿ ಕಂದರಗಳ
ಚೆಲುವಿನ ನಾಡಿದು ಕನ್ನಡವು
ಜುಳುಜುಳು ಹರಿಯುವ ತೊರೆಗಳ ಕಲರವ
ಮೊರೆಯುವ ನಾಡಿದು ಕನ್ನಡವು
ತೆಂಗು ಕಂಗು ಬಾಳೆ ತಾಳೆಗಳ
ತೋಟದ ಸೊಬಗಿನ ಕನ್ನಡವು
ನವಿಲಿನ ನರ್ತನ ಕೋಗಿಲೆ ಕೂಜನ
ಶುಕಧ್ವನಿ ಮೊಳಗಿದ ಕನ್ನಡವು
ಕಪಿಗಳ ದಂಡು ಆನೆಯ ಹಿಂಡು
ಖಗಮೃಗ ತಳುಕಿನ ಕನ್ನಡವು
ರಾಜಾಧಿರಾಜರು ಆಳಿದ ನಾಡು
ವೈಭವ ಮೆರೆದಿಹ ಕನ್ನಡವು
ಕವಿಪುಂಗವರು ಬೆಳಗಿದ ನಾಡು
ಸಾಹಿತ್ಯ ಸ್ಫೂರ್ತಿಯ ಕನ್ನಡವು
ಸಂಸ್ಕೃತಿ ಕಲೆಗಳು ಮೆರೆದಿಹ ನಾಡು
ಸುಖಶಾಂತಿ ನೆಲೆಸಿದ ಕನ್ನಡವು
ಶರಣರು ಸಂತರು ಬಾಳಿದ ನಾಡು
ಪುಣ್ಯಭೂಮಿಯಿದು ಕನ್ನಡವು.
- ಆರ್.ಎಸ್. ಚಾಪಗಾವಿ