ವಾರ್ಷಿಕ ಪರೀಕ್ಷೆ ಹತ್ತಿರ ಬಂದೇ ಬಿಡ್ತು. ತಯಾರಿಯೂ ಶುರುವಾಯ್ತು. ಓದು ವ್ಯವಸ್ಥಿತವಾಗಿದ್ದರೆ ಬೇಗ ತಲೆಗೆ ಹತ್ತುತ್ತದೆ. ಅದಕ್ಕಾಗಿ ಇಲ್ಲಿವೆ ಟಿಪ್ಸ್.
4 ಬೆಳಗ್ಗೆ ಬೇಗ ಎದ್ದು ಓದುವುದು ಹೆಚ್ಚು ಸೂಕ್ತ. ಬೆಳಗ್ಗೆ 5ರಿಂದ 8 ಗಂಟೆ, ಸಾಯಂಕಾಲ 7ರಿಂದ 10 ಗಂಟೆ ಓದುವ ವೇಳಾಪಟ್ಟಿಯನ್ನು ತಯಾರು ಮಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ 6 ಗಂಟೆಗಳ ಅಭ್ಯಾಸವಿರಲೇಬೇಕು.
4 ಬ್ರಾಹ್ಮೀ ಮುಹೂರ್ತ (ಬೆಳಗಿನ 5ರಿಂದ 6) ಓದಲು ಹೆಚ್ಚು ಅನುಕೂಲ. ಈ ಕಾಲದಲ್ಲಿ ವಿದ್ಯುತ್‌ಕಾಂತೀಯ ತರಂಗಗಳು ಶುದ್ಧವಾಗಿರುವುದರಿಂದ ಓದಿದ್ದು ಬೇಗ ಅರ್ಥವಾಗುವುದು.
4 ಅಂದಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಬೇಕು. ಯಾವ ಕಾರಣಕ್ಕೂ ಮುಂದೂಡಬಾರದು. ಪ್ರಾರಂಭದಿಂದಲೇ ಇಂಥ ಅಭ್ಯಾಸವನ್ನು ಬೆಳೆಸಿಕೊಂಡರೆ ಪರೀಕ್ಷಾ ಸಮಯದಲ್ಲಿ 'ಪರೀಕ್ಷಾ ಭೀತಿ' ಇರುವುದಿಲ್ಲ.
4 ಶಾಲೆಯ ವೇಳಾಪಟ್ಟಿಯಂತೆ ಮನೆಯಲ್ಲಿ ಓದುವಾಗಲೂ ವೇಳಾಪಟ್ಟಿ ಹಾಕಿಕೊಂಡು ವ್ಯವಸ್ಥಿತವಾಗಿ ಓದಬೇಕು. ಇದರಿಂದ ಯಾವ ಕಾಲದಲ್ಲಿ ಏನನ್ನು ಓದಬೇಕೆಂಬುದನ್ನು ನೆನಪು ಮಾಡಿಕೊಡುತ್ತದೆ.
4 ಬೆಳಗ್ಗೆ ಓದುವ ಪಠ್ಯವನ್ನು ಹಿಂದಿನ ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿ. ಬೆಳಗ್ಗೆ ಎದ್ದು ಹುಡುಕುವ ಪ್ರಮೇಯವಿರುವುದಿಲ್ಲ.
4 ಓದುವ ಕೋಣೆ ಪ್ರಶಾಂತವಾಗಿ, ನಿಶ್ಶಬ್ದವಾಗಿರಲಿ. ಓದುವಾಗ ಒಂದು ಲೋಟ ನೀರನ್ನು ಇಟ್ಟುಕೊಳ್ಳಿ.
4 ಪ್ರತಿ ವಿಷಯದ ಬಗ್ಗೆಯೂ ಪ್ರೀತಿಯನ್ನು ಬೆಳೆಸಿಕೊಳ್ಳಿ. ಇದು ಕಷ್ಟ ನಂತರ ಓದುತ್ತೇನೆ ಎನ್ನುವುದು ಬೇಡ. ಎಲ್ಲವನ್ನೂ ಓದಲೇಬೇಕು, ತೇರ್ಗಡೆ ಹೊಂದಲೇಬೇಕು.
4 ಸಾಯಂಕಾಲದ ವೇಳಾಪಟ್ಟಿಯಲ್ಲಿ ಬರೆಯುವ, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಒಳ್ಳೆಯದು.
4 ಓದಿದ ಪಠ್ಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ. ಸಂಶಯವಿದ್ದರೆ ಶಾಲೆಯಲ್ಲಿ ಶಿಕ್ಷಕರ ಜೊತೆ ಅಥವಾ ಮನೆಯ ಹಿರಿಯರ ಜೊತೆ ಕೇಳಿ ಸಂಶಯ ಪರಿಹರಿಸಿಕೊಳ್ಳಿ.
4 ಓದುವ ಕೋಣೆಯ ಗೋಡೆಯಲ್ಲಿ ಒಂದು ಚಾರ್ಟ್ ತಯಾರು ಮಾಡಿ ಅದರಲ್ಲಿ ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರದ ಸೂತ್ರಗಳನ್ನು ಬರೆದಿಡಿ. ಆಗಾಗ್ಗೆ ನೋಡುವುದರಿಂದ ನೆನಪಿನಲ್ಲುಳಿಯುತ್ತದೆ.
4 ಟೀವಿ, ಮೊಬೈಲ್ ಸಹವಾಸದಿಂದ ದೂರವಿರಿ. ಇದು ಭವಿಷ್ಯಕ್ಕೆ ಹಾನಿಯುಂಟುಮಾಡುತ್ತದೆ.
4 ಸುಲಭವಾಗಿ ಅರ್ಥವಾಗುವ ಪಠ್ಯಕ್ಕಿಂತ ಕಷ್ಟ ಎನಿಸುವ ಪಠ್ಯದ ಬಗ್ಗೆ ಹೆಚ್ಚು ಗಮನ ಕೊಡಿ.
4 ಹಿತ-ಮಿತವಾಗಿ ಸಕಾಲದಲ್ಲಿ ತಿಂಡಿ-ಊಟ ಮಾಡಿ. ಅತಿಯಾಗಿ ತಿಂದರೆ ನಿದ್ರೆ, ಕಡಿಮೆ ತಿಂದರೆ ನಿತ್ರಾಣವಾಗುತ್ತದೆ.
= ಎ.ಎನ್. ಮಧುಸೂದನರಾವ್