ಹೂಡೆಡ್ ಪಿಟೊಹುಯಿ ಹಕ್ಕಿಯನ್ನು ಪಕ್ಷಿಲೋಕದ ಏಕೈಕ ವಿಷಕಾರಿ ಹಕ್ಕಿಯೆಂದು ಪಕ್ಷಿಶಾಸ್ತ್ರಜ್ಞರು ಗುರುತಿಸುತ್ತಾರೆ. ಇದು ನ್ಯೂಗಿನಿಯಾ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಮೈತುಂಬಾ ವಿಷ ತುಂಬಿಕೊಂಡಿರುವ ಈ ಹಕ್ಕಿಯ ವಿಶೇಷವೆಂದರೆ, ಇವು ಇಂಪಾಗಿ ಹಾಡಬಲ್ಲವು. ಚಿಕ್ಕ ಗಾತ್ರದ್ದಾಗಿರುವ ಇವುಗಳ ರೆಕ್ಕೆ, ತಲೆ, ಬಾಲದ ಪುಕ್ಕಗಳೆಲ್ಲ ಕಪ್ಪಾಗಿದ್ದು, ಕೊಕ್ಕು ಗಟ್ಟಿಯಾಗಿ, ಹರಿತವಾಗಿ ಕಪ್ಪಾಗಿರುತ್ತದೆ. ಆದರೆ ಹಕ್ಕಿಯ ಹಿಂಭಾಗ ಮಾತ್ರ ಕೇಸರಿ ಬಣ್ಣದಿಂದ ಕೂಡಿರುತ್ತದೆ.
ಇವುಗಳಲ್ಲಿ ಒಟ್ಟು ಆರು ತಳಿಗಳು ಕಂಡುಬರುತ್ತವೆ. ವಿಷದ ಪ್ರಮಾಣ ಕೂಡ ತಳಿಯಿಂದ ತಳಿಗೆ ಭಿನ್ನವಾಗಿರುತ್ತದೆ. ಪಿಟೊಹುಯಿ ಕಿರೊಸಿಫಲಸ್ ತಳಿಯ ಪಕ್ಷಿ ಅತ್ಯಂತ ಹೆಚ್ಚು ವಿಷಕಾರಿ. ಇವುಗಳನ್ನು ಹಿಡಿಯಲು ಹೋದರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಹೋಮೋ ಬಿಟಿಎಕ್ಸ್ ಎಂಬ ವಿಷಕಾರಿ ವಸ್ತು ಈ ಹಕ್ಕಿಗಳ ಚರ್ಮ, ರೆಕ್ಕೆಪುಕ್ಕಗಳಲ್ಲಿ, ಎದೆಯ ಹಾಗೂ ಕಾಲಿನ ಮೇಲಿರುವ ಗರಿಗಳಲ್ಲಿರುತ್ತದೆ. ಈ ಹಕ್ಕಿಗಳನ್ನು ಮುಟ್ಟಿದರೆ ಉರಿ, ತುರಿಕೆ, ಕಣ್ಣಲ್ಲಿ ನೀರು ಬರಲಾರಂಭಿಸುತ್ತದೆ. ಹೂಡೆಡ್ ಪಿಟೊಹುಯಿ ಪಕ್ಷಿಗಳು ಗಿಡದ ಟೊಂಗೆಗಳಲ್ಲಿ ಕಪ್ ಆಕಾರದ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ.