ಕಲಿಯುವ ಸಮಯದಲ್ಲಿ ಹಣ ಗಳಿಸಬಾರದು ಎಂಬ ರೂಲ್ಸ್ ಏನಾದರೂ ಇದೆಯಾ? ಇಲ್ವಲ್ಲ. ದಿನಾ ಪಾಕೆಟ್ ಮನಿಗಾಗಿ ಅಪ್ಪ, ಅಮ್ಮನ ಬಳಿ ಗೋಳಾಡುವುದನ್ನು ಇನ್ನಾದರೂ ನಿಲ್ಲಿಸಿ. ವಿದ್ಯಾರ್ಥಿಯಾಗಿದ್ದರೂ ನೀವು ನಿಮ್ಮ ಕಾಲಲ್ಲೇ ನಿಲ್ಲಬಾರದು ಎಂದೇನೂ ಇಲ್ಲ. ಹಣ ಗಳಿಸಲು ವಯಸ್ಸೇನೂ ಅಡ್ಡಿ ಬರಲ್ಲ. ನೀವೇ ದುಡಿದು ಸಂಪಾದನೆ ಆರಂಭಿಸಿದರೆ ಅದರಲ್ಲಿ ಖುಷಿಯೂ ಇರುತ್ತದೆ, ಹೆತ್ತವರ ಹೊರೆಯೂ ಕಡಿಮೆಯಾಗುತ್ತದೆ. ಕಾಲೇಜಿಗೆ ಹೋಗುತ್ತಲೇ, ಬಿಡುವಿನ ವೇಳೆಯಲ್ಲಿ ಏನೇನು ಮಾಡಬಹುದು. ಹಾಳುಹರಟೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಂಪಾದನೆಯ ದಾರಿ ಹೇಗೆ ಕಂಡುಕೊಳ್ಳಬಹುದು? ಇಲ್ಲಿದೆ ದಾರಿ...
ನೀವೇ ಗುರುವಾಗಿ...
ನೀವು ವಿದ್ಯಾರ್ಥಿಯಾಗಿರಬಹುದು. ಆದರೆ, ನಿಮ್ಮಲ್ಲಿ ಕೆಲವು ವಿಶೇಷ ಕೌಶಲ್ಯಗಳಿರಬಹುದು. ಅವುಗಳ ಮೂಲಕ ಹಣ ಸಂಪಾದಿಸಿ. ಸಣ್ಣ ಮಕ್ಕಳಿಗೆ ಟ್ಯೂಷನ್ ಕೊಡಿ. ಡಾನ್ಸ್, ಈಜು, ಹೊಲಿಗೆ ಮತ್ತಿತರ ಕಲೆ ನಿಮಗೆ ಕರಗತವಾಗಿದ್ದರೆ ಬಿಡುವಿನ ವೇಳೆ ನೋಡಿಕೊಂಡು ಅದನ್ನು ಮನೆ ಸುತ್ತಮುತ್ತಲಿನವರಿಗೆ ಹೇಳಿಕೊಡಿ. ಫ್ರೀಯಾಗಿ ಅಲ್ಲ, ಅವರಿಂದ ತಿಂಗಳಿಗೆ ಇಂತಿಷ್ಟೆಂದು ಹಣ ಪಡೆಯಿರಿ. ಅವರೂ ಕಲಿಯುತ್ತಾರೆ, ನೀವೂ ಹಣ ಗಳಿಸುತ್ತೀರಿ.
ಆನ್‌ಲೈನ್ ಸಂಪಾದನೆ
ಇದು ಈಗ ಸಾಮಾನ್ಯವಾಗಿಬಿಟ್ಟಿದೆ. ನೀವೇ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ತೆರೆದು ಹಣ ಗಳಿಕೆಯ ಮಾರ್ಗ ಕಂಡುಕೊಳ್ಳಬಹುದು. ಬ್ಲಾಗ್‌ಗಳಿಗೆ ಜಾಹೀರಾತುಗಳು ಬಂದವೆಂದರೆ ನಿಮಗೆ ಲಾಟರಿ ಹೊಡೆಯಿತೆಂದೇ ಅರ್ಥ. ಇದಲ್ಲದೆ, ಆನ್‌ಲೈನ್‌ನಲ್ಲಿ ಲೋಗೋ ಮಾಡಿಕೊಡುವುದು, ವಿಮರ್ಶೆ, ಲೇಖನ ಬರೆಯುವುದು, ಕ್ರಿಯಾಶೀಲ ಬರಹಗಳು, ಟಿ-ಶರ್ಟ್ ಸ್ಲೋಗನ್‌ಗಳು... ಇವಕ್ಕೆಲ್ಲ ಹಣ ಪಾವತಿಸುವ ಕಂಪನಿಗಳು ಎಷ್ಟೋ ಇವೆ. ಬುದ್ಧಿ ಉಪಯೋಗಿಸಿ, ಸಮಯ ವ್ಯರ್ಥ ಮಾಡದಿರಿ. ಹಣ ಗಳಿಸುವುದು ಕಷ್ಟವೇನೂ ಅಲ್ಲ.
ಕರಕುಶಲ ಕಲೆ
ಗೊಂಬೆಗಳು, ಗ್ರೀಟಿಂಗ್ ಕಾರ್ಡ್‌ಗಳು, ಉಡುಗೊರೆಗಳು, ಫ್ಯಾಷನ್ ಆಭರಣಗಳು, ಅಲಂಕಾರಿಕ ವಸ್ತುಗಳು... ಹೀಗೆ ಒಂದೋ, ಎರಡೋ. ಕಲಿಯುವ ಮನಸ್ಸಿದ್ದರೆ ಥರಾವರಿ ಕರಕುಶಲ ವಸ್ತುಗಳ ತಯಾರಿಯಲ್ಲಿ ತೊಡಗಬಹುದು. ಇದು ನಿಮ್ಮ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ, ಕಿಸೆ ತುಂಬಿಸಲೂ ಸಹಾಯಕ. ಮನೆ ಮನೆಗೆ ಹೋಗಿ ಇವುಗಳನ್ನು ಮಾರಾಟ ಮಾಡುವುದಕ್ಕೆ ಮುಜುಗರವಾದರೆ, ಆನ್‌ಲೈನ್‌ನಲ್ಲಿ Etsyನಂಥ ಕ್ರಾಫ್ಟ್ ಸೈಟ್‌ನಲ್ಲೂ ಮಾರಾಟ ಮಾಡಬಹುದು.
ಡಾಟಾ ಎಂಟ್ರಿ
ಹಣ ಗಳಿಸುವ ಸುಲಭ ವಿಧಾನ. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ವಿದ್ಯಾರ್ಥಿಗಳಿಗೆ ಪಾರ್ಟ್ ಟೈಂ ಆಗಿ ಡಾಟಾ ಎಂಟ್ರಿ ಕೆಲಸ ನೀಡುತ್ತಿವೆ. ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲೂ ಈ ಕೆಲಸ ಮಾಡಬಹುದು. ಇದರಿಂದ ನಿಮ್ಮ ಟೈಪಿಂಗ್ ವೇಗ ಕೂಡ ಸುಧಾರಣೆಯಾಗುತ್ತದೆ.
ಫೋಟೋಗಳಿಗೂ ಆದ್ಯತೆ
ನಿಮಗೆ ಫೋಟೋಗ್ರಫಿಯಲ್ಲಿ ಆಸಕ್ತಿಯಿದೆಯೇ? ಹಾಗಿದ್ದರೆ, ಬಿಡುವಿನ ವೇಳೆ ಕ್ಯಾಮೆರಾ ಹಿಡಿದುಕೊಂಡು ಹೋಗಿ. ಕೆಲವಷ್ಟು ಫೋಟೋಗಳನ್ನು ತೆಗೆಯಿರಿ. ಆನ್‌ಲೈನ್‌ನಲ್ಲಿ ಡಿಜಿಟಲ್ ಫೋಟೋ ಮಾರಾಟ ಮಾಡಿಯೂ ಹಣ ಸಂಪಾದಿಸಬಹುದು. ಫೋಟೋ ಮಾರಾಟಕ್ಕೆ Q iStockPhoto, Dreamstime, Shutterstock ಇತ್ಯಾದಿಗಳು ಉತ್ತಮ ಸೈಟ್‌ಗಳು.
ಲೇಖನ ಬರೆಯಿರಿ
ಬರವಣಿಗೆಯಲ್ಲಿ ಆಸಕ್ತಿಯಿದ್ದವರು ಪತ್ರಿಕೆಗಳು, ನಿಯತಕಾಲಿಕಗಳಿಗೆ ಲೇಖನ, ಕವನಗಳನ್ನು ಬರೆದು ಕಳುಹಿಸಬಹುದು. ಇದರಿಂದ ನಿಮ್ಮ ಬರವಣಿಗೆಯ ಶೈಲಿಯೂ ಸುಧಾರಣೆಯಾಗುತ್ತದೆ. ನಿಮ್ಮ ಹೆಸರೂ ಪರಿಚಿತವಾಗುತ್ತದೆ. ಜತೆ ಜತೆಗೇ ಪಾಕೆಟ್ ಮನಿಯೂ ಸುಲಭವಾಗಿ ಸಂಪಾದನೆಯಾಗುತ್ತದೆ.
ಆನ್‌ಲೈನ್ ಸಮೀಕ್ಷೆಗಳು
ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರ ಸಮೀಕ್ಷೆ ಮಾಡುವ ತವಕದಲ್ಲಿರುತ್ತವೆ. ಅವುಗಳಿಗೆ ನೆರವಾಗುವ ಮೂಲಕ ನೀವೂ ಆದಾಯ ಗಳಿಸಬಹುದು. ಆನ್‌ಲೈನ್ ಸಮೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳುವ ಅವಕಾಶವಿದೆಯೇ ಎಂದು ನೋಡಿಕೊಳ್ಳಿ.
-ಹಲೀಮತ್ ಸಅದಿಯಾ