ಇಂದು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಲು ತೋರುವ ಶ್ರದ್ಧೆಯನ್ನು ಸಚ್ಚಾರಿತ್ರ್ಯ ಬೆಳೆಸಿಕೊಳ್ಳಲು ತೋರುತ್ತಿಲ್ಲ. ಇದು ಬಹುತೇಕರ ದೂರು. ಇದು ಸಂಪೂರ್ಣ ನಿಜವಲ್ಲವಾದರೂ ಪೂರ್ಣ ಸುಳ್ಳಂತೂ ಅಲ್ಲ. ಶಿಕ್ಷಣವೆಂದರೆ ಈಗ ಹೊಟ್ಟೆಪಾಡು ಆಗಿಬಿಟ್ಟಿದೆ. ಶಿಸ್ತು ಭಕ್ತಿಯಾಗಿ ಉಳಿದಿಲ್ಲ. ಭಯವಾಗಿ ಬದಲಾಗಿದೆ. ಇದರಿಂದ ವಿದ್ಯಾರ್ಥಿಗಳ ಮಾತು ಮತ್ತು ಕೃತಿ ಎರಡರಲ್ಲಿ ಅಗಾಧ ವ್ಯತ್ಯಾಸವಿದೆ.
ವ್ಯಕ್ತಿಯೊಬ್ಬ ವಿನಯ ಮತ್ತು ವಿವೇಕ ಕಳೆದುಕೊಂಡರೆ ಶಿಕ್ಷಣವೆನ್ನುವುದು ನಿರರ್ಥಕವಷ್ಟೇ ಅಲ್ಲ ಅಪಾಯಕಾರಿಯೂ ಆಗುತ್ತದೆ ಎನ್ನುತ್ತಾರೆ ಡಾ. ಎಸ್. ರಾಧಾಕೃಷ್ಣನ್. ಈ ಮಾತು ವಿದ್ಯಾರ್ಥಿಗಳ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿ. ಇಂದು ಶಿಕ್ಷಣ, ಕೇವಲ ಪುಸ್ತಕದಲ್ಲಿದ್ದುದ್ದನ್ನು ತಲೆಗೆ ತುಂಬುವುದಷ್ಟೇ ಆಗಿದೆ. ಇದರ ಪರಿಣಾಮ ಬಹುತೇಕ ವಿದ್ಯಾರ್ಥಿಗಳು ಪುಸ್ತಕಜ್ಞಾನವನ್ನು ಮಸ್ತಕದಲ್ಲಿ ತುಂಬಿಸಿಕೊಂಡು ನಂತರ ಅದನ್ನು ಪರೀಕ್ಷೆಯಲ್ಲಿ ಖಾಲಿ ಮಾಡುವ ಕೊಡಗಳಾಗಿ ಬಿಟ್ಟಿದ್ದಾರೆ. ಹಾಗಾಗಿ ಅವರ ತಲೆ ಯಾವತ್ತೂ ಖಾಲಿಯಾಗಿಯೇ ಉಳಿಯುತ್ತದೆ. ಇದೇ ಕಾರಣಕ್ಕೆ 'ತಲೆ ಯಾವತ್ತೂ ಭತ್ತ ತುಂಬಿದ ಮೂಟೆಯಾಗಬಾರದು. ಬದಲಾಗಿ ಪ್ರಾಯೋಗಿಕ ಮತ್ತು ಸೃಜನಶೀಲತೆಯ ಬೀಜವಾಗಬೇಕು' ಎಂದು ಕುವೆಂಪು ಹೇಳುತ್ತಿದ್ದರು.
ಇದನ್ನೇ ಡಿ.ವಿ. ಗುಂಡಪ್ಪ ಹೀಗೆ ಹೇಳಿದ್ದಾರೆ.
ಭೌತ ವಿಜ್ಞಾನಿ ರವಿ ತಾರೆ
ಧರೆಗಳ ಚಲನ!
ರೀತಿ, ವೇಗವನಳೆದು ಶಕ್ತಿಗಳ
ಗುಣೆಪನ್
ಪ್ರೀತಿರೋಷಗಳ ನವನಳೆವನೇಳ್?
ಅವ್ಯಕ್ತ!!
ಚೇತನವರಿವನೇಂ?!!- ಮಂಕುತಿಮ್ಮ
ಶಿಕ್ಷಣದಲ್ಲಿ ಎರಡು ವಿಧ. ಮೊದಲನೆಯದು ಪುಸ್ತಕದ ಜ್ಞಾನ, ಎರಡನೆಯದು ಎಜುಕೇರ್. ಎಜುಕೇರ್ ಅಂದರೆ ನಮ್ಮೊಳಗಿರುವುದನ್ನು ಹೊರಗೆಡಹುದು ಎಂದರ್ಥ. ವಿಶಾಲಾರ್ಥದಲ್ಲಿ ನಮ್ಮೊಳಗಿರುವ ಮಾನವೀಯ ಮೌಲ್ಯ, ಸಚ್ಚಾರಿತ್ರ್ಯವನ್ನು ಹೊರಗೆಡಹುವುದು ಎಂದರ್ಥ. ಮಾನವೀಯ ಮೌಲ್ಯಗಳು ನಮ್ಮೊಳಗೇ ಇರುತ್ತವೆ. ಶಿಕ್ಷಣದ ನಿಜವಾದ ಸಾರ್ಥಕತೆ ಅಡಗಿರುವುದು ಈ ಮೌಲ್ಯಗಳನ್ನು ಹೊರತರುವುದರಲ್ಲೇ. ಇದು ವಿದ್ಯಾರ್ಥಿಗಳಿಗೆ ಅರ್ಥವಾದಾಗ ದೇಶದ ಭವಿಷ್ಯ ಸುಂದರವಾಗುವುದರಲ್ಲಿ ಸಂಶಯವೇ ಇಲ್ಲ.
- ಡಾ. ಎಲ್.ಸಿ.ಎಸ್. ಮೂರ್ತಿ