ಆ ದಿನವೂ ಎಂದಿನಂತೆಯೇ ನಮ್ಮ ಕಾಗೆ ಆಹಾರ ಹುಡುಕುತ್ತಾ ಹೊರಟಿತ್ತು. ವಾಹ್! ಸ್ವಲ್ಪ ದೂರದಲ್ಲಿಯೇ ಒಂದು ಎಲುಬಿನ ತುಂಡು ಸಿಕ್ಕಿತು. ಮರ ಹತ್ತಿ ಬಾಯಲ್ಲಿಟ್ಟು ಎಲುಬು ಕಡಿಯಲು ಶುರುಮಾಡಿತು.
ಕೆಳಗೆ ಒಂದು ತೋಳ ಬಂದು ನಿಂತು ಕಾಗೆಯನ್ನೇ ನೋಡುತ್ತಿತ್ತು. ಕಾಗೆಯ ಬಾಯಲ್ಲಿ ಮೂಳೆಯ ತುಂಡು! ತೋಳಕ್ಕೆ ಬಾಯಲ್ಲಿ ನೀರು. ಹೇಗಾದರೂ ಮಾಡಿ ಎಲುಬನ್ನು ಲಪಟಾಯಿಸಬೇಕು. 1980ರಲ್ಲಿ ಇದೇ ರೀತಿ ಒಂದು ಕಾಗೆಗೆ 'ನೀನೇ ಇಂದ್ರ, ನೀನೇ ಚಂದ್ರ...' ಎಂದೆಲ್ಲಾ ಹೊಗಳಿ ಕಾಗೆ ಬಾಯಿಬಿಡುವಂತೆ ಮಾಡಿ ಮಾಂಸವನ್ನು ಲಪಟಾಯಿಸಿದ್ದ ತನ್ನ ಅಜ್ಜ ತೋಳನ ನೆನಪಾಯಿತು. ಅವನ ಮೊಮ್ಮಗ ತಾನೇನು ಕಮ್ಮಿ? ಕಾಗೆಯನ್ನು ಹೊಗಳಲಾರಂಭಿಸಿತು.
'ಕಾಗಣ್ಣಾ... ನೀನು ಒಳ್ಳೆ ಸೋನು ನಿಗಮ್ ಥರಾ ಹಾಡ್ತೀಯಂತೆ... ಗಂಗ್ನಮ್ ಡ್ಯಾನ್ಸ್ ಮಾಡ್ತಾ ಒಂದು ಹಾಡು ಬಿಸಾಕು ನೋಡೋಣ'
ತಕ್ಷಣ ಕಾಗೆ ತನ್ನ ಲ್ಯಾಪ್‌ಟಾಪ್ ತೆಗೆದು ಟಕಟಕ ಎನಿಸಿ ತನ್ನ ತಂಗಿಗೆ ಮೇಲ್ ಕಳಿಸಿತು. ಮರುಕ್ಷಣ ತಂಗಿ ಹಾಜರ್. ಕಾಗೆ ತನ್ನ ಬಾಯಲ್ಲಿದ್ದ ಮೂಳೆಯ ತುಂಡನ್ನು ತಂಗಿಯ ಬಾಯಿಗೆ ವರ್ಗಾಯಿಸಿ 'ಆ....' ಎಂದು ಕರ್ಕಶವಾಗಿ ಕಿರುಚಿತು. ರಸ್ತೆಯಲ್ಲಿದ್ದ ಜನರೆಲ್ಲಾ ಎದ್ದೆನೋ ಬಿದ್ದೆನೋ ಎಂದು ಓಡತೊಡಗಿದರು.
'ತೋಳಣ್ಣಾ ಸಾಕಾ? ಹಿಂದೆ ಹೀಗೇ ನಿಮ್ಮಜ್ಜ ಯಾಮಾರಿಸಿದ್ದ ಕಾಗೆ ನಮ್ಮ ದೊಡ್ಡಪ್ಪ ಗೊತ್ತಾ!' ಎಂದು ತನ್ನ ತಂಗಿ ಹಾಗೂ ಎಲುಬಿನ ಚೂರಿನೊಂದಿಗೆ ಪುರ್ರೆಂದು ಹಾರಿ ಹೋಯಿತು.
ಎಲ್ಲಾ 2013ರ ಮಹಿಮೆ. ತೋಳ ಬಾಲ ಮುದುರಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿತು.
- ಕೆ.ಶ್ರೀನಿವಾಸರಾವ್ ಹರಪನಹಳ್ಳಿ