ಮಳೆಯ ಮಹಿಮೆಯೇ ಅಂಥದ್ದು!
ಒಂದೆಡೆ ಖುಷಿ, ಮತ್ತೊಂದೆಡೆ ಮುಗಿಯದ ತಲೆನೋವು, ಅನಾಹುತಗಳು... ಎಲ್ಲೆಂದರಲ್ಲಿ ಕೆಸರು, ಕಾಲಿಟ್ಟಲ್ಲಿ ನೀರು... ಕೈಯಲ್ಲಿ ಅನಿವಾರ್ಯ ಕರ್ಮವೆನಿಸಿದಂತ ಕೊಡೆ ಹಿಡಿಯಲೇ ಬೇಕು!
ಇವೆಲ್ಲದಕ್ಕಿಂತಲೂ, ಹೊರಗೆ ನಿಂತು ಸುರಿಯುವ ಮುಸಲಧಾರೆಯ ನಡುವೆ ನಿಸ್ಸಂಕೋಚವಾಗಿ ಮಳೆಯಲ್ಲಿ ನೆನೆದರೆ ಸಿಗೋ ಪುಳಕ ಮಾತ್ರ ಡಿಫರೆಂಟೋ ಡಿಫರೆಂಟು. ಮುಕ್ತವಾಗಿ ರಸ್ತೆ ನಡುವೆ ದಪ್ಪನೆಯ ಮಳೆ ಧಾರೆಗೆ ಫಲಾನುಬಿಗಳಾಗ್ಬೇಕು ಅಂದ್ರೆ ಬೈಕ್ ಸವಾರಿ ಮಾಡ್ಬೇಕು. ಅದೂ ಬ್ರೇಕೇ ಇಲ್ಲದ ಮಳೇನಲ್ಲಿ. ಅಧಿಕ ಪ್ರಸಂಗ ಅನ್ನಿಸಬಹುದಾದರೂ... ವಿಷಯ ಮಾತ್ರ ಆಹ್ಲಾದಕರ.
ಹಾಗೆ ನೋಡಿದರೆ, ಕೊಡೆ ಹಿಡ್ಕೊಂಡು ಹೋದ್ರೆ ಒದ್ದೆ ಆಗೋದಿಲ್ಲ ಅಂತ ಹೇಳಿದೋರು ಯಾರು? ಗಾಳಿ ಸಹಿತ ಮಂಗಳೂರು, ಮಡಿಕೇರಿಯಲ್ಲಿ ಸುರಿಯೋ ಥರ ಮಳೆ ಬಂದ್ರೆ ಸೊಂಟದ ಮೇಲೆ-ಕೆಳಗೆ ಎಲ್ಲಾ ಶವರ್ ಬಾತ್ ಖಂಡಿತ. ಎಂಥ ಮರದ ಕಾಲಿನ ಕೊಡೆ ಇದ್ರೂ ಗಾಳಿ ರಭಸಕ್ಕೆ ಮಳೆ ಹನಿ ಸಿಂಚನದಿಂದ ಪಾರಾಗೋಕೆ ಸಾಧ್ಯನೇ ಇಲ್ಲ. ಅಂಥದೇನಾದ್ರೂ ಪಾರಾಗೋವಂಥ ಕೊಡೆ ಇದ್ರೆ ದಯವಿಟ್ಟು ತಿಳ್ಸಿ...
ಜೊತೆಗೆ ಬ್ಯಾಗ್ ಇದ್ರಂತೂ ಮಳೇಲಿ ನಡ್ಕೊಂಡು ಹೋಗೋರ ಪಾಡು ದೇವ್ರಿಗೇ ಪ್ರೀತಿ..
ಆದ್ದರಿಂದ್ಲೇ... ಗಾಢ ಮಳೆಗೆ ಒಂದು ಸಾರಿ ನಿರುಮ್ಮಳವಾಗಿ ಬೈಕ್ ಸವಾರಿ ಮಾಡಿದ್ರೆ ಸಿಗೋ ಖುಷಿನೇ ಬೇರೆ (ರಿಸ್ಕೂ ಇದೆ).
ಮಳೆಯಲ್ಲಿ ಅಂಗಿ ತೊಟ್ಕೊಂಡು ಸವಾರಿ ಮಾಡಿದ್ರೆ ಒದ್ದೆ ಆಗೋದಿಲ್ವ ಅನ್ನೋ ಬಾಲಿಶ ಪ್ರಶ್ನೆ ಮಾತ್ರ ಕೇಳ್ಬೇಡಿ... (ಒಂದಿಷ್ಟೂ ಒದ್ದೆ ಆಗಿಸದ ರೈನ್ ಕೋಟು ಅಂಥನೂ ಇದೆಯಾ?!) ಖಂಡಿತಾ ಒಂದಷ್ಟು ಒದ್ದೆ ಆಗೇ ಆಗ್ತೀವಿ... ಆದರೆ, ಜೋರು ಗಾಳಿ ಮಳೆ ಬರ್ತಾ ಇರಬೇಕಾದ್ರೆ... ಮುಖಕ್ಕೆ ಎರಚುವ ತಂಪು ಹನಿರಾಶಿ, ಸುತ್ತಲೂ ಏನಾಗ್ತಿದೆ ಅಂತ ಗೊತ್ತಾಗದಷ್ಟರ ಮಟ್ಟಿಗೆ ಕಿವಿಗಡಚಿಕ್ಕುವ ಗಾಳಿಯ ಅಬ್ಬರ... ರಸ್ತೆ ತುಂಬಾ ನೀರು... ಕಾರುಗಳು, ಲಾರಿಗಳೂ ನಮ್ಮನ್ನು ಸವರಿಕೊಂಡೇ ಹೋಗ್ತಿವೆಯೇನೋ ಅನ್ನುವಷ್ಟು ಹತ್ರ ವೇಗವಾಗಿ ಸಂಚರಿಸೋವಾಗ, ಗುಂಡಿಗಳಲ್ಲಿದ್ದ ಕೆಸರೆಲ್ಲಾ ನಮ್ಮ ರೈನ್‌ಕೋಟ್ ಮೇಲೆ ನರ್ತನ... ತುಂಬಾ ಕಡೆ ರಸ್ತೆ ಮೇಲೆ ನದಿ ಥರ (ಪ್ರವಾಹ ಅಲ್ಲ) ಹರಿಯೋ ನೀರಿನ ರಾಶಿ ಮೇಲೆ ಜುಂ ಅಂಥ ಕ್ರಾಸ್ ಮಾಡೋವಾಗ ನೀರು ಹಾರೋ ಶೈಲಿ ನೋಡ್ಬೇಕು... ಅದೂ ಒಂಥರಾ ಮಜಾ... ರಸ್ತೆ ಮೇಲೆ ಅಲ್ಲಲ್ಲಿ ಗುಂಡಿ... ರಸ್ತೆ ಬಿಟ್ಟು ಕೆಳಗೆ ಇಳಿದ್ರೆ ಟಯರ್ ಹೂತು ಹೋಗೋ ಅಂಥ ಕೆಸರು...
ರಿಸ್ಕಿನ ಸವಾರಿ
ಮೋರೆಗೆ ಗಾಳಿಮಳೆ ಎರಚುತ್ತದೆ ಅಂತ ಹೆಲ್ಮೆಟ್‌ನ ಗ್ಲಾಸ್ ಇಳಿಬಿಟ್ರೆ ಎದುರಿಗೆ ಮಂಜು ಬಿಟ್ರೆ ಬೇರೇನೂ ಕಾಣೋದಿಲ್ಲ. ಮಳೆ ಬರ್ತಾ ಇರಬೇಕಾದ್ರೆ ಓವರ್‌ಟೇಕ್ ಮಾಡೋದು ತುಂಬಾ ಡೇಂಜರು.... ಮುಂತಾದ ಇತಿಮಿತಿಗಳೂ ಮಳೆಗಾಳಿ ಸವಾರಿನಲ್ಲಿ ಖಂಡಿತಾ ಇವೆ. ಆದರೂ...
ಹೇಗೂ ಒದ್ದೆ ಆಗ್ಕೊಂಡು ಬರೋ ಹೊತ್ತಿಗೆ ಆ ಬಿಕನಾಸಿ ಮಳೇನ ಅನುಭವಿಸ್ಕೊಂಡು ಬರೋದ್ರಲ್ಲೂ ಖುಷಿ ಇರುತ್ತೆ ಕಣ್ರೀ...
ಅದ್ರಲ್ಲೂ ಭಯಂಕರ ಗಾಳಿ ಮಳೆ ಬಂದು ಬಿಟ್ಟ ತಕ್ಷಣ ರೋಡ್ ಮೇಲೆಲ್ಲಾ ಹರೀತಾ ಇರೋ ನೀರ ಮೇಲೆ ಗುಂಡಿಗಳನ್ನ ತಪ್ಪಿಸ್ಕೊಂಡು ಹೋಗೋದು ಥಂಡ ಥಂಡ... ರಿಸ್ಕಿ ಅನುಭವ... ಆದರೂ...
ರಸ್ತೆ ಪಕ್ಕ ಕೊಡೆ ಹಿಡ್ಕೊಂಡು ಕೆಸರು ಸ್ನಾನಕ್ಕೆ ಸಾಕ್ಷಿಯಾಗೋರ ಪಾಡು ದೇವರಿಗೇ ಪ್ರೀತಿ. ಏನೇ ಇರ್ಲಿ... ಹೊರಗೆ ಜೋರಾಗಿ ಮಳೆ ಬರ್ತಾ ಇದ್ರೆ... ಮತ್ತ್ಯಾಕೆ ತಡಾ ಹೊಡೀರಿ ಹಲಿಗಿ.... ರೈನ್‌ಕೋಟ್ ತೊಡ್ಕೊಂಡು ತೆಗೀರಿ ಬೈಕು!
- ಕೃಷ್ಣಮೋಹನ ತಲೆಂಗಳ
kmohant@gmail.com