ಯುವಜನ/ಮಕ್ಕಳು

ದೂರವಾಣಿ

ಮಗುವಿನ ಲೀಲೆಗಳನ್ನು ನೋಡುತ್ತಾ ಮೈಮರೆಯುವ ತಂದೆತಾಯಿಗಳು,...

ಮಗೂ,
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲಿಕ್ಕುತ್ತಾ, ತೊದಲು ನುಡಿಯಿಂದ ನಮ್ಮೆಲ್ಲರ ಕಣ್ಮನಗಳಿಗೆ ತಂಪೆರೆಯುತ್ತಿದ್ದ ನೀನು ಅದೆಷ್ಟು ಬೇಗ ನಮ್ಮೆತ್ತರಕ್ಕೆ ಬೆಳೆದು ನಿಂತಿದ್ದೀಯಾ! ಮಗುವಿನ ಲೀಲೆಗಳನ್ನು ನೋಡುತ್ತಾ ಮೈಮರೆಯುವ ತಂದೆತಾಯಿಗಳು, ಆ ಸಂತೋಷವನ್ನು ಅನುಭವಿಸಲು ಕಾಲ ನಿಂತು ಬಿಡಬಾರದೇ ಎಂದುಕೊಳ್ಳುತ್ತಾರೆ. ಜೊತೆಜೊತೆಗೆ ತಮ್ಮ ಮಗುವಿನ ಭವಿಷ್ಯವನ್ನು ರೂಪಿಸುವ ಮತ್ತು ಅದನ್ನು ತಮ್ಮ ಜೀವಿತಾವಧಿಯಲ್ಲೇ ಸವಿಯುವ ಕಾತರದಿಂದ ಸಮಯ ನಾಗಾಲೋಟದಲ್ಲಿ ಏಕೆ ಓಡುತ್ತಿಲ್ಲ ಎಂದೂ ಕೊರಗುತ್ತಾರೆ.  
ಇಂಥ ಕಾಲದ ಒಂದು ನಿರ್ಣಾಯಕ ಘಟ್ಟದಲ್ಲಿ ನೀನಿದ್ದೀಯ ಮಗೂ... ನಿನ್ನ ವಿದ್ಯಾಭ್ಯಾಸದ ಅಗತ್ಯಗಳಿಗೆ ನಮ್ಮಿಂದ ದೂರ ಹೋಗಿ ಹಾಸ್ಟೆಲ್‌ನಲ್ಲಿ ವಸತಿ ಹೂಡಬೇಕಾಗಿದೆ. ಒಮ್ಮೆಲೆ ಇದು ನಿನ್ನ ಮೇಲೆ ಅನೇಕ ಒತ್ತಡಗಳನ್ನು ಹೇರುತ್ತದೆ. ಬರಿಯ ನಿನ್ನ ವೈಯುಕ್ತಿಕ ಬದುಕನ್ನಷ್ಟೇ ಅಲ್ಲ, ಇಡೀ ಜಗತ್ತನ್ನು ನೋಡುವ ನಿನ್ನ ದೃಷ್ಟಿಕೋನವೇ ಆಮೂಲಾಗ್ರವಾಗಿ ಬದಲಾಗುವ ಸಂಕ್ರಮಣ ಸಮಯವಿದು. ಇಂಥ ವೇಳೆ ಪೋಷಕರಿಂದ ದೂರವಿರುವ ಕೊರಗೂ ನಿನ್ನನ್ನು ಕಾಡಬಹುದು. ಅಥವಾ ಅಂಥ ಸ್ವಾತಂತ್ರ್ಯವನ್ನು ಸವಿಯುವ ಕಾತರದಲ್ಲೂ ನೀನಿರಬಹುದು. ಅದೇನೇ ಇದ್ದರೂ ನಮ್ಮ ಕಣ್ಣಳತೆಯಿಂದ ದೂರಹೋಗುತ್ತಿರುವ ನಿನಗೆ ನಮ್ಮ ಕೆಲ ಅನಿಸಿಕೆಗಳನ್ನು ಹೇಳುವ ಸಮಯವೊದಗಿಬಂದಿದೆ.
'ಇದೇನಪ್ಪಾ ಹೊಸದು, ಇಷ್ಟು ದಿನ ಹೇಳದೇ ಇದ್ದದ್ದು' ಎಂದೋ ಅಥವಾ 'ಈ ಅಪ್ಪ ಅಮ್ಮಂದು ಅದೇ ಹಳೇ ಗೋಳಿರಬೇಕು' ಎಂದು ಕಡೆಗಣಿಸಬೇಡ ಮಗೂ... ನಿನ್ನೆಲ್ಲಾ ಹರೆಯದ ತುಮುಲಗಳು ನಿನಗೆ ಮಾತ್ರ ವಿಶಿಷ್ಟವಾದದ್ದೆಂದು ನಿನಗನ್ನಿಸಿದರೂ, ನಾವೆಲ್ಲಾ ನಿನಗಿಂತ ಭಿನ್ನ ಕಾಲಘಟ್ಟದಲ್ಲಿ ಮತ್ತು ಬಹುಶಃ ಭಿನ್ನ ರೀತಿ ಅಥವಾ ತೀವ್ರತೆಗಳಲ್ಲಿ ಅವೆಲ್ಲವನ್ನೂ ಅನುಭವಿಸಿದ್ದೇವೆ. ಹಾಗಾಗಿ ನಿನ್ನ ಬಗೆಗಿನ ಕಾಳಜಿ ಮತ್ತು ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ಈ ಮಾತುಗಳಿಗೊಂದಿಷ್ಟು ಕಿವಿಯಗಲಿಸು. ನಂತರದ ನಿನ್ನೆಲ್ಲಾ ನಿರ್ಧಾರಗಳಿಗೆ, ಅವು ಕಾನೂನುಬಾಹಿರ, ಅನೈತಿಕ ಅಥವಾ ಅನಾಗರಿಕವಾಗಿಲ್ಲದಿದ್ದಲ್ಲಿ, ನಮ್ಮ ಸಂಪೂರ್ಣ ಬೆಂಬೆಲವಿದೆಯೆಂದು ನಾನು ಆಶ್ವಾಸನೆ ಕೊಡುತ್ತೇನೆ.  
ಮನೆಯಿಂದ ದೂರ ಹೋದ ಮೇಲೆ ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನಿನ್ನ ಸುತ್ತೆಲ್ಲಾ ಹರೆಯದ ಹೊಳೆಯೇ ಹರಿಯುತ್ತಿರುತ್ತದೆ. ಇದು ನಿನ್ನಲ್ಲಿ ಚಿಗುರುತ್ತಿರುವ ಕನಸುಗಳಿಗೆ ಸೂಕ್ತ ವಾತಾವರಣ ಕೂಡ. ವಿಪರ್ಯಾಸವೆಂದರೆ ನಿನ್ನ ಕನಸುಗಳಿಗೆ ಜೀವಜಲವಾಗಬೇಕಾದದ್ದು ನಿನ್ನನ್ನು ಕೊಚ್ಚಿಕೊಂಡು ಹೋಗಿ ದೂರದ ನಿರ್ಜನ ಪ್ರದೇಶದಲ್ಲಿ ಬೀಸಾಕಬಲ್ಲ ಪ್ರವಾಹವೂ ಆಗಬಲ್ಲದು. ಹಾಗಾಗಿ ಮೊದಲು ನಿನ್ನ ಜೀವನದ ದೂರಗಾಮಿ ಗುರಿಗಳನ್ನು ಸ್ಪಷ್ಟಪಡಿಸಿಕೊ. ಅದನ್ನು ವಾರ್ಷಿಕ, ಮಾಸಿಕ ಮತ್ತು ದೈನಿಕ ಗುರಿಗಳಾಗಿ ವಿಘಟನೆಗೊಳಿಸು. ನಂತರ ಸಕಲ ಸಿದ್ಧತೆಯೊಂದಿಗೆ ಜೀವನ ಸಮುದ್ರಕ್ಕೆ ಹಾರಿಬಿಡು.
ನಿನ್ನ ದೂರಾಗಾಮಿ ಗುರಿ ಮಾತ್ರ ನಾವಿಕನಿಗೆ ದಿಕ್ಸೂಚಿಯಾಗಿರುವ ಲೈಟ್ ಹೌಸ್‌ನಂತೆ ಯಾವಾಗಲೂ ಕಣ್ಣಳತೆಯಲ್ಲೇ ಇರಲಿ. ಆಗ ನಿನ್ನ ಹಾದಿಯಲ್ಲಿ ಬರುವ ಹರೆಯದ ಸಂಪೂರ್ಣ ಮಸ್ತಿಯನ್ನು ಅನುಭವಿಸು. ಲೈಟ್ ಹೌಸ್ ಕಣ್ಮರೆಯಾದೊಡನೆ ತಕ್ಷಣ ಎಚ್ಚೆತ್ತು ಅದನ್ನು ಅರಸಿದ ನಂತರ ಮಾತ್ರ ಮುಂದುವರಿ.
ನಾನು ಇಲ್ಲಿಯವರೆಗೆ ಹೇಳಿರುವುದೆಲ್ಲಾ ಬರಿಯ ಥಿಯರಿ ಮಾತ್ರ. ಎಲ್ಲಾ ವಿಷಯಗಳಲ್ಲೂ ಥಿಯರಿಯಲ್ಲಿ ಕಲಿತಿದ್ದನ್ನು ಸದಾ ಉಳಿಯಬಲ್ಲಂತೆ ಮೆದುಳಿನಲ್ಲಿ ದಾಖಲಿಸಿಕೊಳ್ಳಲು ಪ್ರ್ಯಾಕ್ಟಿಕಲ್‌ಗಳನ್ನು ಮಾಡಬೇಕು ಅಂತ ಕೂಡ ನಾನೇ ಹೇಳಿದ್ದೆ. ಹಾಗಾಗಿ ಸದ್ಯದ ನಿನ್ನ ಪರಿಸ್ಥಿತಿಗಳು ಇಂಥ ಪ್ರ್ಯಾಕ್ಟಿಕಲ್‌ಗಳಿಗೆ ಸರಿಯಾದ ಸಮಯ ಎಂದುಕೊಳ್ಳಬೇಡ. ನಿನ್ನ ಈಗಿನ ಗುರಿ ಅದಲ್ಲ ಎನ್ನುವುದನ್ನು ಮರೆಯದೆ ಭವಿಷ್ಯತ್ತಿಗೆ ನಿನ್ನ ಪ್ರಯೋಗಗಳನ್ನು ಮುಂದೂಡು. ಜೀವನದ ಮೊದಲ ಇಪ್ಪತ್ತೈದು ವರ್ಷಗಳನ್ನು ಉದ್ದೇಶರಹಿತವಾಗಿ ಕಳೆದರೆ ನಂತರದ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿವೆ.
ಲೈಂಗಿಕ ಸಾಹಸಗಳಿಂದ ತಪ್ಪಿಸಿಕೊಂಡರೂ, ಪ್ರೀತಿ ಪ್ರೇಮಗಳ ಬಲೆಗೆ ಬೀಳದೆ ಉಳಿಯುವುದು ಸುಲಭವಲ್ಲ. ಸಿನಿಮಾ, ಧಾರಾವಾಹಿಗಳನ್ನು ಮಾದರಿಯಾಗಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳು ಇದನ್ನು ಅನಿವಾರ್ಯವಾಗಿಸಿಕೊಂಡಿದ್ದಾರೆ. ನಾವೇನು ಈ ಲವ್ವು ಗಿವ್ವುಗಳನ್ನು ಢೋಂಗಿ ಎಂದು ಹೇಳುತ್ತಿಲ್ಲ. ಅದೂ ಅಲ್ಲದೆ ನಮಗೆ ಜಾತಿ ಧರ್ಮಗಳ ಬಂಧನವೂ ಇಲ್ಲವೆಂದು ನಿನಗೂ ಗೊತ್ತಿದೆ.
ಪ್ರೀತಿ ಪ್ರೇಮವೆಲ್ಲಾ ಗೊತ್ತಿಲ್ಲದೆ ಆಗಿಬಿಡುತ್ತದೆ ಎನ್ನುವ ಮಾತುಗಳಿಂದ ಕೂಡ ಮೋಸ ಹೋಗಬೇಡ. ಇವೆಲ್ಲಾ ಷೋಡಷ ಮನಸ್ಸುಗಳನ್ನು ಮರುಳು ಮಾಡಿ ಹಣ ಮಾಡುವ ಸಿನಿಮಾದವರ ಹುನ್ನಾರ ಮಾತ್ರ. ನಿನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ಭಾವನಾತ್ಮಕ ಅಗತ್ಯಗಳನ್ನು ಸರಿತೂಗಿಸಬಲ್ಲ ಸಂಗಾತಿಯನ್ನು ಹುಡುಕಿಕೊಳ್ಳುಲು ನಿನಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.
ತಕ್ಷಣದ ಥ್ರಿಲ್‌ಗಳನ್ನು, ಅದೂ ಪದೇಪದೇ ಹೊಸ ಹೊಸ ರೀತಿಯ ರೋಮಾಂಚನಗಳನ್ನು ಅರಸುವುದು ಇಂದಿನ ಜೀವನಶೈಲಿಯೇ ಆಗಿಬಿಟ್ಟಿದೆ. ಇದರ ಬಗೆಗೆ ಎಚ್ಚರವಹಿಸದಿದ್ದರೆ ನಶೆಯ ವಸ್ತುಗಳತ್ತ ಸೆಳೆಯುಲ್ಪಡುವ ಸಾಧ್ಯತೆಗಳು ಹೆಚ್ಚು. ಸದ್ಯಕ್ಕೆ ನಮ್ಮ ಕಾಳಜಿಗಳು ಇಷ್ಟೇ ಮಗೂ... ನಿನ್ನ ದೂರಗಾಮಿ ಗುರಿಗಳತ್ತ ಮಾತ್ರ ಗಮನವಿಟ್ಟುಕೊ. ತಾತ್ಕಾಲಿಕ ಸೋಲುಗಳಿಂದ ಕಳೆಗುಂದಬೇಡ. ಸಣ್ಣ ಪುಟ್ಟ ಗೆಲುವುಗಳನ್ನು ಆನಂದಿಸು, ಆದರೆ ಅವುಗಳಿಂದ ಮೈಮರೆಯಬೇಡ.
ಉತ್ತಮ ದೈಹಿಕ ಆರೋಗ್ಯವನ್ನಿಟ್ಟುಕೊ, ಮಾನಸಿಕ ಸಮತೋಲನ ಕಾಪಾಡಿಕೊ. ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡ. ನಿನ್ನ ಮೇಲಿನ ನಮ್ಮ ಪ್ರೀತಿ ಷರತ್ತುರಹಿತ. ನಿನ್ನ ಮನಃಪೂರ್ವಕ ಪ್ರಯತ್ನಗಳ ಯಾವುದೇ ಫಲಿತಾಂಶವೂ ನಮಗೆ ಸಂಪೂರ್ಣ ಒಪ್ಪಿಗೆ.  
ಪ್ರೀತಿಯೊಂದಿಗೆ,
ನಿನ್ನ ಅಪ್ಪ-ಅಮ್ಮ

- ನಡಹಳ್ಳಿ ವಸಂತ್
nvasanth1@hotmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!