ಫೋಬಿಯಾ ಅಂದ್ರೇನು ಅಂತ ಹೆಚ್ಚಿಗೆ ಹೇಳುವ ಅಗತ್ಯವೇನೂ ಇಲ್ಲ. ಏರೋಫೋಬಿಯಾ,
ಅಲ್ಗೋಫೋಬಿಯಾ, ಅಮ್ಯಾಥೋಫೋಬಿಯಾ... ಹೀಗೆ ಬಹುತೇಕ ಮಂದಿ ಒಂದಲ್ಲಾ ಒಂದು ಫೋಬಿಯಾದಿಂದ ಬಳಲುತ್ತಿರುತ್ತಾರೆ. ನೊಮೊಫೋಬಿಯಾ ಈ ಫೋಬಿಯಾಗಳ ಪಟ್ಟಿಗೆ ಹೊಸ ಸೇರ್ಪಡೆ. ಮೊಬೈಲ್ ತಂತ್ರಜ್ಞಾನದಲ್ಲಿನ ಕ್ರಾಂತಿ ಈ ಫೋಬಿಯಾವೊಂದನ್ನು ಯುವಜನತೆಗೆ ಕೊಡುಗೆಯಾಗಿ ನೀಡಿದೆ.
ಅರೆ..! ನೊಮೊಫೋಬಿಯಾನ ಹಾಗಂದ್ರೆ ಏನು? ಅಂತ ಬಹುತೇಕರು ತಲೆಕೆಡಿಸಿಕೊಳ್ಳಬಹುದು. ಅದು ನಿಜಾನೇ. ಯಾಕೆಂದರೆ ಬಹುತೇಕರು ಈ ಹೆಸರು ಕೇಳಿರಲಿಕ್ಕೇ ಇಲ್ಲ. ಇದು 21ನೇ ಶತಮಾನದ ಮನೋರೋಗ. ಇದೊಂಥರ ಮೊಬೈಲ್ ಗೀಳಿನಿಂದ ಹುಟ್ಟಿಕೊಳ್ಳುವ ಫೋಬಿಯಾ. ಈ ರೀತಿಯ ಫೋಬಿಯಾದಿಂದ ಬಳಲುತ್ತಿರುವವರು ಮೊಬೈಲ್ ಫೋನ್ ಸಂಪರ್ಕ ಕಳೆದುಕೊಳ್ಳುವ, ಬ್ಯಾಟರಿ ಖಾಲಿಯಾಗುವ, ನೆಟ್‌ವರ್ಕ್ ಸಿಗದಿದ್ದಾಗ ವಿಚಿತ್ರವಾದ ಕಳವಳಕ್ಕೆ ಒಳಗಾಗುತ್ತಾರೆ.
ಮೊಬೈಲ್ ಹೊಂದಿರುವ, 30 ವರ್ಷದೊಳಗಿನ ಬಹುತೇಕರು ಇಂಥದ್ದೊಂದು ಫೋಬಿಯಾದಿಂದ ಬಳಲುತ್ತಿರುತ್ತಾರೆ. ಈ ಹಿಂದೆ ಶೇ.50ರಷ್ಟು ಯುವಕರಿಗಿದ್ದ ಫೋಬಿಯಾ ಈಗ ಶೇ. 65ರಷ್ಟು ಹಂತ ತಲುಪಿದೆ. ಇದೇ ಕಾರಣಕ್ಕೆ ಈ ಮೊಬೈಲ್ ಯುಗದ ಫೋಬಿಯಾಗೆ ಜಗತ್ತಿನ ಅತಿ ದೊಡ್ಡ ಫೋಬಿಯಾ ಎನ್ನುವ ಕುಖ್ಯಾತಿ ಸಿಕ್ಕಿದೆ.
ಸ್ಮಾರ್ಟ್‌ಫೋನ್ ಬಂದ ಮೇಲಂತೂ ಯುವಜನರು ಬಾಹ್ಯ ಪ್ರಪಂಚದಿಂದ ದೂರವೇ ಇದ್ದು ಬಿಡುತ್ತಾರೆ. ಈ ಗೀಳು ಯಾವ ಹಂತಕ್ಕೆ ಬೆಳೆದು ನಿಂತಿರುತ್ತದೆ ಎಂದರೆ ಅವರಿಗೆ ಮೊಬೈಲ್ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದುಬಿಟ್ಟರೆ ಊಟದ ಪರಿವೆಯೂ ಇರುವುದಿಲ್ಲ. ನೆಟ್, ವಿಡಿಯೋ ಗೇಮ್, ಚಾಟಿಂಗ್... ಹೀಗೆ ಪ್ರತಿಯೊಂದು ಸೌಲಭ್ಯವೂ ಮೊಬೈಲ್‌ನಲ್ಲಿದೆ.
ಊಟ, ಆಟ, ಪಾಠ ಬಿಡಿ... ಬಾತ್‌ರೂಂ, ಟಾಯ್ಲೆಟ್‌ಗೆ ಹೋಗುವಾಗಲೂ ಬಹುತೇಕರಿಗೆ ಮೊಬೈಲ್ ಜತೆಗಿರಬೇಕು. ಒಂದತ್ತು ನಿಮಿಷ ಮೊಬೈಲ್ ಅಕ್ಕಪಕ್ಕ ಇಲ್ಲಾಂದ್ರೆ ಏನೋ ಕಳೆದುಕೊಂಡ ಭಾವ. ಗಾಬರಿ... ಈ ಗೀಳಿನಿಂದಾಗಿಯೇ ನೊಮೊಫೋಬಿಯಾ ಅರಿವಿಲ್ಲದೆ ನಮ್ಮನ್ನು ಆವರಿಸುತ್ತದೆ. ಬಹುತೇಕರಿಗೆ ತಾವು ಇಂಥದ್ದೊಂದು ಫೋಬಿಯಾದಿಂದ ಬಳಲುತ್ತಿದ್ದೇವೆ ಅನ್ನುವ ಅರಿವೇ ಇರುವುದಿಲ್ಲ.
ಭಾರತದಲ್ಲೂ ಫೋಬಿಯಾ!
ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ನೊಮೋಫೋಬಿಯಾದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮೊಬೈಲ್ ಬಳಸುತ್ತಿರುವ ದೇಶದ ಶೇ.45ರಷ್ಟು ಮಂದಿ ನೊಮೊಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕ ಡಾ. ಸಂಜಯ್ ದೀಕ್ಷಿತ್ ಅಭಿಪ್ರಾಯ ಪಡುತ್ತಾರೆ.
- ಎ.ಕೆ.