ಒಮ್ಮೆ ದೇವಲೋಕದ ರಾಜ ದೇವೇಂದ್ರನಿಗೆ ತುಂಬಾ ಗರ್ವ ಬಂತು. ಎಲ್ಲ ದೇವರಿಗಿಂತ ನಾನೇ ಶ್ರೇಷ್ಠ, ನಾನುದೇವಾಧಿಪತಿ ಇಂದ್ರ. ನನಗಿಂತ ದೇವರಿಲ್ಲ ಎಂದು ಬೀಗಿದ. ಆಗ ಅಲ್ಲಿಗೆ ಬಂದ ನಾರದ 'ಇಲ್ಲ ದೇವೇಂದ್ರ, ನೀನು ಸುರರಿಗೆ ಮಾತ್ರ ಅಧಿಪತಿ. ನಿನಗಿಂತ ಮಿಗಿಲಾದ ದೇವರುಗಳೂ ಇದ್ದಾರೆ. ಅವರೇ ತ್ರಿಮೂರ್ತಿಗಳಾದ ಹರಿ ಹರ ಬ್ರಹ್ಮರು' ಎಂದ. ಆದರೆ ದೇವೇಂದ್ರ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ನಾರದ ಎಷ್ಟೇ ತಿಳಿಸಿ ಹೇಳಿದರೂ ಅವನ ಮಾತನ್ನು ದೇವೇಂದ್ರ ಒಪ್ಪಲಿಲ್ಲ. ದೇವೇಂದ್ರ ಕೋಪದಿಂದ 'ಸರಿ, ಹಾಗಾದರೆ ನೋಡಿಯೇಬಿಡೋಣ. ನಾನು ಭೂಲೋಕದಲ್ಲಿ ಹನ್ನೆರಡು ವರ್ಷಗಳವರೆಗೆ ಮಳೆಯನ್ನೇ ಸುರಿಸುವುದಿಲ್ಲ. ಆಗ ಭೂಲೋಕದ ಜನರು ಏನು ಮಾಡುತ್ತಾರೋ ನೋಡೋಣ' ಎಂದ. ನಾರದ 'ಸರಿ ಹಾಗೇ ಮಾಡು' ಎಂದು ಹೊರಟುಹೋದ.
ಇತ್ತ ಭೂಲೋಕದಲ್ಲಿ ಮಳೆಯಿಲ್ಲದೆ ಹಾಹಾಕಾರವೆದ್ದಿತು. ಕೆರೆ-ಕಟ್ಟೆಗಳೆಲ್ಲ ಬತ್ತಿಹೋದವು. ಕುಡಿಯಲೂ ನೀರಿಲಲಿಲ್ಲ. ವ್ಯವಸಾಯ ಮಾಡುವುದಂತೂ ದೂರವೇ ಉಳಿಯಿತು. ಜಮೀನನ್ನು ಉತ್ತು ಬಿತ್ತು ಬೆಳೆ ಬೆಳೆಯದೆ ಹೊಟ್ಟೆಗೆ ತಿನ್ನುವುದೆಂತು? ಜನರು ವ್ಯವಸಾಯ ಮಾಡುವುದನ್ನೇ ಕೈಬಿಡಬೇಕಾದ ಪರಿಸ್ಥಿತಿ. ನಾವು ಹೀಗೆ ವ್ಯವಸಾಯ ಮಾಡದೆ ಕೈಕಟ್ಟಿ ಕುಳಿತರೆ ನಮ್ಮ ಮುಂದಿನ ಪೀಳಿಗೆಗೆ ವ್ಯವಸಾಯದ ಬಗ್ಗೆ ಮಾಹಿತಿ ಕೊಡುವುದಾದರೂ ಹೇಗೆ ಎಂದು ಜನ ಮಾತನಾಡಿಕೊಳ್ಳತೊಡಗಿದರು. ಕೊನೆಗೆ ಅವರೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು. ಅದೆಂದರೆ, ಮಳೆ ಬರಲಿ, ಬಿಡಲಿ. ನಾವು ನಮ್ಮ ಕರ್ತವ್ಯದಲ್ಲಿ ನಿರತರಾಗೋಣ. ಹಾಗೆ ಮಾಡಿದಾಗ ನಮ್ಮ ಜನರಿಗೆ ವ್ಯವಸಾಯ ಮಾಡುವುದು ಮರೆತುಹೋಗಲ್ಲ. ಬೆಳೆ ಬೆಳೆಯುವುದೂ ಮರೆತುಹೋಗಲ್ಲ. ಹೀಗಾಗಿ ನಾವೆಲ್ಲ ನಾಳೆಯಿಂದಲೇ ನಮ್ಮ ನಮ್ಮ ಹೊಲಗಳಿಗೆ ಹೋಗಿ ಕರ್ತವ್ಯನಿರತರಾಗೋಣ.
ಮರುದಿನ ಎಲ್ಲ ರೈತರೂ ತಮ್ಮ ತಮ್ಮ ಹೊಲಗಳಿಗೆ ಹೋಗಿ ಉಳುಮೆ ಮಾಡತೊಡಗಿದರು. ಹೀಗೆ ಉಳುಮೆ ಮಾಡತೊಡಗಿದಾಗ ನೆಲದಲ್ಲಡಗಿದ್ದ ಕಪ್ಪೆ ಎದ್ದು ಬಂದು, 'ರೈತಣ್ಣಾ.. ರೈತಣ್ಣಾ.. ಮಳೆಯಿಲ್ಲ, ನೀರಿಲ್ಲ. ಮತ್ತೇಕೆ ಉಳುತ್ತಿರುವೆ? ನಿನಗೆ ಗೊತ್ತಿಲ್ವಾ? ಇಂದ್ರ 12 ವರ್ಷಗಳವರೆಗೆ ಮಳೆ ಸುರಿಸುವುದಿಲ್ಲ ಎಂದು ಶಪಥ ಮಾಡಿರುವನಲ್ಲಾ? ಹಾಗಿರುವಾಗ ಏಕೆ ವ್ಯರ್ಥ ಶ್ರಮ' ಎಂದಿತು.
'ಅದು ನಮಗೂ ಗೊತ್ತಿಗೆ ಕಪ್ಪೆಯಣ್ಣಾ... ಮಳೆಯಿಲ್ಲ ಎಂದು ನಮ್ಮ ಕುಲಕಸುಬನ್ನೇ ಮರೆತು ಕುಳಿತರೆ ಮುಂದೆ ನಮ್ಮ ಮಕ್ಕಳು ವ್ಯವಸಾಯ ಮಾಡುವುದನ್ನು ಹೇಗೆ ಕಲಿಯುತ್ತಾರೆ? ಅದಕ್ಕೇ, ಮಳೆ ಬರಲಿ, ಬಿಡಲಿ ನಾವಂತೂ ನಮ್ಮ ಕರ್ತವ್ಯದಲ್ಲಿ ನಿರತರಾಗಿರೋಣ. ಫಲಾಫಲಗಳನ್ನು ಆ ದೇವರಿಗೆ ಬಿಟ್ಟುಬಿಡೋಣ' ಎಂದ ರೈತ. ಕಪ್ಪೆಗೂ ಅದು ಸರಿ ಎಂದನಿಸಿತು. ಅದು ತಾನೂ ವಟರ್... ವಟರ್... ಎಂದು ಕೂಗಲಾರಂಭಿಸಿತು.
ಕಪ್ಪೆಯ ಕೂಗನ್ನು ಕೇಳಿದ ನವಿಲು ಕತ್ತೆತ್ತಿ ಮುಗಿಲಕಡೆಗೆ ನೋಡಿತು. ಅಲ್ಲೆಲ್ಲೂ ಒಂದೇ ಒಂದು ಚೂರು ಕಪ್ಪು ಮೋಡ ಕಾಣಿಸಲಿಲ್ಲ. ಮಳೆಬರುವ ಯಾವ ಲಕ್ಷಣಗಳೂ ಕಂಡುಬರಲಿಲ್ಲ. ಹಾಗಿದ್ದೂ ಈ ಕಪ್ಪೆಯೇಕೆ ವಟಗುಡುತ್ತಿದೆ? ಎಂದು ಕಪ್ಪೆಯೆಡೆಗೆ ಬಂದು, ನೀನೇಕೆ ಕೂಗುತ್ತಿರುವೆ? ಎಂದಿತು. ಕಪ್ಪೆ ಹೇಳಿತು 'ಮಳೆ ಬರಲಿ, ಬಿಡಲಿ ನಾವಂತೂ ಕಾಲಕ್ಕೆ ತಕ್ಕಂತೆ ಕೆಲಸ ಮಾಡಿಕೊಂಡಿರಬೇಕು. ಫಲಾಫಲಗಳನ್ನು ದೇವರಿಗೆ ಬಿಟ್ಟುಬಿಡಬೇಕು. ಈಗ ನೋಡು, ರೈತ ಉಳುತ್ತಿದ್ದಾನೆ. ಹಾಗಾಗಿ ನಾನೂ ಕೂಗುತ್ತಿದ್ದೇನೆ'. ಕಪ್ಪೆಯ ಮಾತು ನವಿಲಿಗೂ ಸರಿ ಎನಿಸಿತು. ನವಿಲೂ ಮೀಯೋಂ... ಮೀಯೋಂ... ಎಂದು ಕೂಗಲಾರಂಭಿಸಿತು.
ಇದೆಲ್ಲವನ್ನೂ ದೇವಲೋಕದಲ್ಲಿರುವ ದೇವೇಂದ್ರ ನೋಡುತ್ತಾ ಆಲೋಚಿಸುತ್ತಿದ್ದ. ಅರೇ.. ಈ ಭೂಲೋಕದ ಜೀವಿಗಳಿಗೆ ಅದ್ಯಾವ ರೀತಿಯ ಮರುಳು?! ನಾನು ಮಳೆ ಸುರಿಸುವುದಿಲ್ಲ ಎಂದು ಶಪಥ ಮಾಡಿರುವುದು ಇವರಿಗೆ ತಿಳಿದಿಲ್ಲವೇ? ಅಥವಾ ತಿಳಿದಿದ್ದೂ ಹೀಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೋ...? ಅವರನ್ನೇ ಕೇಳಿ ತಿಳಿದುಕೊಂಡರಾಯಿತು ಎಂದು ದೇವೇಂದ್ರ ಸೀದಾ ಭೂಲೋಕಕ್ಕೆ ಬಂದು ರೈತನನ್ನುದ್ದೇಶಿಸಿ 'ಏನಪ್ಪಾ ರೈತಣ್ಣ... ನಾನು ಮಳೆ ಸುರಿಸುವುದಿಲ್ಲವೆಂದು ಗೊತ್ತಿದ್ದೂ ಈ ಒಣ ನೆಲವನ್ನು ಉಳುತ್ತಿರುವಿಯಲ್ಲಾ! ಮರುಳಲ್ಲವೇ ನಿನಗೆ?' ಎಂದ.
ಆಗ ರೈತ 'ನೀನು ಮಳೆ ಸುರಿಸುವುದಿಲ್ಲವೆಂಬುದು ನಮಗೆಲ್ಲ ತಿಳಿದಿದೆ ದೇವೇಂದ್ರ. ಆದರೆ ನಾವಾದರೂ ಏನು ಮಾಡಬೇಕು? ನಮ್ಮ ಕುಲ ಕಸುಬು ವ್ಯವಸಾಯ ಮಾಡುವುದು. ನೀನು ಮಳೆ ಸುರಿಸುವುದಿಲ್ಲವೆಂದಮಾತ್ರಕ್ಕೆ ನಾವು ಕೆಲಸ ಮಾಡದೆ ಕೈಕಟ್ಟಿ ಕುಳಿತುಕೊಳ್ಳಬೇಕೇ? ಕರ್ತವ್ಯವವೇ ನಮ್ಮ ದೇವರು. ಕಾಯಕವೇ ಕೈಲಾಸ ಎಂದು ನಂಬಿರುವವರು ನಾವು. ಅದನ್ನು ನಿಷ್ಠೆಯಿಂದ ಮಾಡುತ್ತೇವೆ. ಫಲಾಫಲಗಳನ್ನು ದೇವರ ಇಚ್ಛೆಗೆ ಬಿಡುತ್ತೇವೆ. ನಾವು ನಂಬಿದ ದೇವರು ನಮ್ಮನ್ನೆಂದಿಗೂ ಕೈಬಿಡುವುದಿಲ್ಲ' ಎಂದು ಹೇಳಿ ಕೆಲಸದಲ್ಲಿ ತೊಡಗಿಕೊಂಡ.
ಭೂಲೋಕದ ಜೀವಿಗಳ ಕರ್ತವ್ಯನಿಷ್ಠೆಯನ್ನು ಕಂಡ ದೇವೇಂದ್ರ ನಿಬ್ಬೆರಗಾಗಿಹೋದ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಸರ್ವಶಕ್ತನಾದ ದೇವನನ್ನು ನಂಬಿ ಈ ಜೀವಿಗಳು ಬದುಕುತ್ತಿದ್ದಾರೆ. ಅವರಿಗೆ ಅನ್ಯಾಯ ಮಾಡಬಾರದು ಎಂದರಿತ ದೇವೇಂದ್ರ ಮಳೆ ಮಾರುತಕ್ಕೆ ತಕ್ಷಣದಿಂದಲೇ ಮಳೆ ಸುರಿಸುವಂತೆ ಆದೇಶ ನೀಡಿದ. ಆಕಾಶದಲ್ಲಿ ದಟ್ಟ ಮೋಡ ಆವರಿಸಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಸೃಷ್ಟಿಯ ಜೀವಿಗಳೆಲ್ಲ ಸಂತೋಷದಿಂದ ಕುಣಿದಾಡಿದರು.
- ಎಂ.ಬಿ. ನಾಯಕ, ಹಾಸನ