ಕಾ.. ಟೀ..ಟರ್...ಟೀ ಟರ್...
ಇದು ನಮ್ಮ ಕವಜುಗ ಹಕ್ಕಿ ಕೂಗುವ ರೀತಿ. ದಕ್ಷಿಣ ಏಷ್ಯದ ಬಯಲು ಮತ್ತು ಒಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹಕ್ಕಿಗಳನ್ನು ಅವುಗಳ ವಿಶಿಷ್ಟ ಧ್ವನಿಯಿಂದಾಗಿ 'ಟೀಟರ್ ಪಕ್ಷಿ' ಎಂದೂ ಕರೆಯುವುದುಂಟು. ಇವುಗಳ ಕಲರವ ಬೆಳಗಿನ ಹೊತ್ತು ಹೆಚ್ಚು. ಜೋಡಿ ಪಕ್ಷಿಗಳ ಪ್ರೇಮಗೀತೆ ಕೇಳುವುದೇ ಸೊಗಸು. ಹೆಣ್ಣು ಟೀ..ಟೀ..ಟೀ.. ಎಂದು ಕೂಗುತ್ತದೆ. ಕಿಲ..ಕಿಲ..ಕಿಲ.. ಅಥವಾ ಕಟೀಲ..ಕಟೀಲ..ಕಟೀಲ.. ಎಂದು ಕೂಗುತ್ತಿದ್ದರೆ ಪ್ರಣಯಕ್ಕೆ ಆಹ್ವಾನಿಸುತ್ತಿದೆ ಎಂದೇ ಅರ್ಥ.
ಕವಜುಗಗಳಿಗೆ ಇಂಗ್ಲಿಷ್‌ನಲ್ಲಿ ಗ್ರೆ ಫ್ರಾಂಕೋಲಿನ್ ಅನ್ನುತ್ತಾರೆ. ಫ್ರಾಂಕೋಲಿನಸ್ ಪಾಂಡಿಸೆರಿಯನ್ಸ್ ಜಾತಿಗೆ ಸೇರಿದ ಪಕ್ಷಿಗಳಿವು. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಬೀಜಗಳು, ಕಾಳುಗಳು, ಸಣ್ಣಪುಟ್ಟ ಕೀಟಗಳು ಇವುಗಳ ಆಹಾರ. ಅಪರೂಪಕ್ಕೆ ಹಾವುಗಳನ್ನೂ ತಿನ್ನುತ್ತವೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಸಂತಾನಾಭಿವೃದ್ಧಿ ಸಮಯ. ಹೆಣ್ಣು ಕವಜುಗ ಒಮ್ಮೆ ಆರರಿಂದ ಎಂಟು ಮೊಟ್ಟೆ ಇಡುತ್ತದೆ.