ಕ್ರೀಡಾ ಕೂಟಗಳಲ್ಲಿ ಪಾರಿವಾಳಗಳನ್ನು ಹಾರಿ ಬಿಡುವುದನ್ನು ನೋಡಿರುತ್ತೀರಿ ಅಲ್ಲವಾ? ಅವುಗಳನ್ನು ಶಾಂತಿಯ ಪ್ರತೀಕ ಎಂದು ಪರಿಗಣಿಸಿ, ಶಾಂತಿದೂತರು ಎಂದು ಕರೆಯಲಾಗುತ್ತವೆ. ಇವು ಕೊಲಂಬಿಫೋರ್ಮೆಸ್ ಪ್ರಭೇದದ, ಕೊಲಂಬಿಡೇ ಕುಟುಂಬಕ್ಕೆ ಸೇರಿದವು. ಪುಟ್ಟ ದೇಹ, ಗಿಡ್ಡ ಕುತ್ತಿಗೆ, ಗಿಡ್ಡ ಮತ್ತು ತೆಳುವಾದ ಕೊಕ್ಕು ಇವುಗಳ ವಿಶೇಷ. ಜಗತ್ತಿನಲ್ಲಿ 308 ತಳಿಯ ಪಾರಿವಾಳಗಳನ್ನು ಗುರುತಿಸಲಾಗಿದೆ. ಆ ಪೈಕಿ ಭಾರತದಲ್ಲಿ 28 ಮತ್ತು ಕರ್ನಾಟಕದಲ್ಲಿ 15 ತಳಿಗಳಿವೆ. ಬೇಸಿಗೆ ಸಂತಾನಾಭಿವೃದ್ಧಿ ಸಮಯ. ಹೆಣ್ಣು ಪಾರಿವಾಳ ಎರಡು ಮೊಟ್ಟೆ ಇಡುತ್ತದೆ; ಅವು 17-20 ದಿನಗಳಲ್ಲಿ ಮರಿಗಳಾಗುತ್ತವೆ. ಪಾರಿವಾಳಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಬೀಜ, ಕಾಳು, ಹಣ್ಣು, ಎಲೆ ಪ್ರಮುಖ ಆಹಾರ. ಪಾರಿವಾಳಗಳು 1,800 ಕಿ.ಮೀ.ವರೆಗೆ ಹಾರಾಟ ನಡೆಸಿದ ದಾಖಲೆ ಇದೆ. ಗಂಟೆಗೆ 177 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲವು. ಕೆಲವು ಪಾರಿವಾಳಗಳು ಮನುಷ್ಯನಿಗೆ ಹತ್ತಿರ. ಅವುಗಳನ್ನು ಸಂದೇಶ ವಾಹಕ (ಹೋಮಿಂಗ್ ಪೀಜನ್) ಎಂದೂ ಕರೆಯುತ್ತಾರೆ.