ಒಂದು ಅಡವಿಯಲ್ಲಿ ಪುಟ್ಟ ಮೊಲವೊಂದು ವಾಸವಾಗಿತ್ತು. ಅದಕ್ಕೆ ಇಬ್ಬರು ಗೆಳೆಯರಿದ್ದರು. ಒಂದು ಕೋತಿ ಮತ್ತು ಒಂದು ನರಿ. ಅವೆರಡು ಪ್ರಾಣಿಗಳಿಗೂ ಮೊಲದ ಮೇಲೆ ತುಂಬಾ ಪ್ರೀತಿ ಮತ್ತು ಭಕ್ತಿ ಇತ್ತು. ಅದನ್ನು ತಮ್ಮ ಗುರುವಾಗಿ ಒಪ್ಪಿಕೊಂಡು, ಅದನ್ನು ಅನುಸರಿಸಿ ನಡೆಯುತ್ತಿದ್ದವು.
ಒಂದು ಹುಣ್ಣಿಮೆಯ ದಿನ ಮೊಲ ತನ್ನ ಗೆಳೆಯರನ್ನು ಕುರಿತು, 'ನೋಡಿ, ಇವತ್ತು ಹುಣ್ಣಿಮೆ. ಪ್ರಶಸ್ತವಾದ ದಿನ. ನಾವೆಲ್ಲ ಇವತ್ತು ಉಪವಾಸ ಆಚರಿಸೋಣ. ನಾಳೆ ಪಾರಣೆ. ಯಾರೇ ಆಹಾರ ಬೇಡಲು ಬಂದರೂ ನಾವು ನಮಗೆ ಲಭಿಸಿದ ಆಹಾರವನ್ನು ಅವರಿಗೆ ದಾನ ಮಾಡೋಣ. ಇದರಿಂದ ನಮ್ಮ ಪಾಪಗಳು ಕಳೆದು ಪುಣ್ಯ ಲಭಿಸುತ್ತೆ, ಏನಂತೀರಿ?' ಎಂದಿತು. ಎರಡು ಪ್ರಾಣಿಗಳೂ ಸಂತೋಷದಿಂದ ಒಪ್ಪಿ ದಾನ ಕೊಡಲು ತಮ್ಮ ತಮ್ಮ ಆಹಾರಗಳನ್ನು ಸಂಪಾದಿಸಿ ಇಟ್ಟುಕೊಂಡವು. ಮೊಲದ ಆಹಾರವೆಂದರೆ ಎರಡು ಹಸಿರು ಗರಿಕೆ ಎಸಳು! ಅದು ಸುಮ್ಮನಿತ್ತು.
ಮಾರನೆಯ ದಿನ ಈ ಪ್ರಾಣಿಗಳನ್ನು ಪರೀಕ್ಷಿಸಬೇಕೆಂದು ದೇವೇಂದ್ರನೇ ಒಬ್ಬ ಮುದುಕನ ವೇಷದಲ್ಲಿ ಬಂದು ಆಹಾರ ಬೇಡಿದನು. ಕೋತಿ ಮತ್ತು ನರಿ ದಾನ ಕೊಡಲು ಸಿದ್ಧವಾದವು. ಆದರೆ ಮೊಲ 'ಏನೆಂದು ದಾನ ಕೊಡುವುದು? ಆದರೆ ಪಾರಣೆಯ ದಿನ ಯಾಚಕನನ್ನು ತೃಪ್ತಿಪಡಿಸುವುದು ನನ್ನ ಧರ್ಮ' ಎಂದು ತನ್ನ ಮೃದುವಾದ ಮೈಯ ಮಾಂಸವನ್ನೇ ಅರ್ಪಿಸಲು ಮುಂದಾಯಿತು. ಒಣ ಕಟ್ಟಿಗೆಯ ತುಂಡುಗಳನ್ನು ರಾಶಿ ಮಾಡಿ, ಯಾಚಕನು ಬೆಂಕಿ ಹತ್ತಿಸುವಂತೆ ಮಾಡಿ, 'ನಾನು ಉರಿಯುವ ಅಗ್ನಿಗೆ ಹಾರುತ್ತೇನೆ. ನನ್ನ ಮೈಯ ಮಾಂಸ ಬೆಂದ ಬಳಿಕ ಅದನ್ನು ಉಂಡು ನೀನು ತೃಪ್ತಿ ಪಡಬೇಕು' ಎಂದು ಮುದುಕನಿಗೆ ಹೇಳಿ, ಬೆಂಕಿಗೆ ಹಾರಿತು. ಹಾರುವ ಮುನ್ನ ತನ್ನ ಮೈ ಮೇಲೆ ಇರಬಹುದಾದ ಕ್ರಿಮಿಕೀಟಗಳು ವೃಥಾ ಪ್ರಾಣ ಕಳೆದುಕೊಳ್ಳಬಾರದೆಂದು ಚೆನ್ನಾಗಿ ಮೈ ಕೊಡವಿಕೊಂಡು ಹಾರಿತು. ಮೊಲದ ಸ್ನೇಹಿತರು ಕೂಡ ಆಹಾರವನ್ನು ದಾನ ಮಾಡಿದರೂ ಅತಿಥಿಗೆ ತನ್ನನ್ನೇ ಅರ್ಪಿಸಿಕೊಂಡ ಮೊಲದ ದಾನಕ್ಕೆ ಸಮ ಬರಲಿಲ್ಲ. ಆ ಪುಟ್ಟ ಮೊಲದ ತ್ಯಾಗಬುದ್ಧಿಯನ್ನು ಕಂಡು ಸುಪ್ರೀತನಾದ ದೇವೇಂದ್ರನು ಅದನ್ನು ಬೆಂಕಿ ಸುಡದಂತೆ ಮಾಡಿ ಪಾರುಮಾಡಿದನು. ಕೈಗೆ ಸಿಕ್ಕಿದ ಗುಡ್ಡದ ಗಿಡಮರಗಳನ್ನು ಹಿಂಡಿ ರಸ ತೆಗೆದು, ಚಂದ್ರನ ಮೇಲೆ ಮೊಲದ ಆಕಾರ ಬರುವಂತೆ ಬಳಿದು, ಮೊಲದ ಕೀರ್ತಿ ಅಮರವಾಗುವಂತೆ ಮಾಡಿದನು. ಅದೇ ನಾವಿಂದು ಚಂದ್ರನ ಮೇಲೆ ಕಾಣುವ ಮೊಲದ ನೆರಳು.
-ಬ್ರಹ್ಮಣಿ ಪಿ. ರಾವ್
(ಸಂಗ್ರಹ- ಜಾತಕ ಕಥೆಗಳು)