ಯುವಜನ/ಮಕ್ಕಳು

ಛಂ ಛಂ ಛಡಿ...

ಭಾನುವಾರ ಎಲ್ಲರೂ ಸೋಮಾರಿಯಾಗುವ ದಿನ. ಹಾಗೇ ಒಂದು ಭಾನುವಾರ ಬೆಳಗ್ಗೆ ಹಾಸಿಗೆಯಲ್ಲಿ ಉರುಳಾಡುವಾಗ ಮೈಕ್‌ನ ಶಬ್ದ ...

ಭಾನುವಾರ ಎಲ್ಲರೂ ಸೋಮಾರಿಯಾಗುವ ದಿನ. ಹಾಗೇ ಒಂದು ಭಾನುವಾರ ಬೆಳಗ್ಗೆ ಹಾಸಿಗೆಯಲ್ಲಿ ಉರುಳಾಡುವಾಗ ಮೈಕ್‌ನ ಶಬ್ದ ರಪ್ ಅಂತ ಕಿವಿಗೆ ರಾಚಿತು. ಈ ಅನಪೇಕ್ಷಿತ ಅತಿಥಿಯ ಮೂಲ ಹುಡುಕಿದರೆ ಅದು ನನ್ನ ಕೋಣೆಯ ಪಕ್ಕದಲ್ಲೇ ಇರುವ ಶಾಲೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವಕ್ಕಾಗಿ ಕಟ್ಟಿರುವ ಮೈಕ್ ಎಂದು ತಿಳಿಯಿತು. ಎಲ್ಲ ಬೆಂಗಳೂರಿನ ಶಾಲೆಗಳಂತೆ ಅಲ್ಲೊಂದು ಶಾಲೆಯಿದೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಹಾಸಿಗೆಯಲ್ಲಿ ಬಿದ್ದುಕೊಂಡೇ ಇದ್ದೆ. ಎದುರಿನ ಗೋಡೆಯಲ್ಲಿ ಶಾಲಾ ದಿನಗಳ ಸ್ಲೈಡ್‌ಶೋ ಆರಂಭವಾಯಿತು.
ನನ್ನ ತಂದೆ ತಮ್ಮ ಹೊಟೇಲ್ ಉದ್ಯಮದ ಲಾಭ ಕೈಗೆ ಹತ್ತದೆ ಒಂದು ಊರಿನಿಂದ ಇನ್ನೊಂದು ಊರಿಗೆ, ಕುಟುಂಬ ಸಮೇತರಾಗಿ ಅಲೆಯುತ್ತಿದ್ದುದರಿಂದ ನಾನು ಒಂದರಿಂದ ಹತ್ತನೆ ತರಗತಿವರೆಗಿನ ವಿದ್ಯಾಭ್ಯಾಸವನ್ನು ನಾಲ್ಕು ಶಾಲೆಗಳಲ್ಲಿ ಮಾಡಬೇಕಾಯಿತು. ಪ್ರತಿ ಶಾಲೆ ತನ್ನ ಮುಂದೆ ಸುಂದರವಾದ ವಿಶಾಲ ಮೈದಾನ ಹಾಸಿಕೊಂಡು ನಗುತ್ತಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಖೋಖೋ ಪಂದ್ಯಾವಳಿ ಇಡೀ ಶಾಲೆಗೆ ಯುದ್ಧದ ರಂಗು ಕೊಡುತ್ತಿತ್ತು. ಬೇರೆಬೇರೆ ಊರಿನಿಂದ ಬಂದ ಶಾಲೆಯ ತಂಡಗಳೊಂದಿಗೆ ಆಡಿ ಗೆದ್ದರೆ ಹೆಮ್ಮೆ, ಸೋತರೂ ವೀರಾವೇಶದಿಂದ ಹೋರಾಡಿದೆವೆಂಬ ಸಮಾಧಾನ. ಅದರಲ್ಲೂ ನಮ್ಮ ಪಿಟಿ ಮಾಸ್ಟರ್ ಕಿಟ್ಟಣ್ಣ ಸರ್ ಮೈದಾನದಲ್ಲಿ ಅಂಪೈರ್ ಆಗಿದ್ದರೆ ಆಟಕ್ಕೆ ಬರುತ್ತಿದ್ದ ಕಳೆಯೇ ಬೇರೆ. ಅವರು ತಮ್ಮ ಕೊರಳಿಗೆ ಹಾಕಿದ ದಾರದ ತುದಿಯಲ್ಲಿ ಕಟ್ಟಿದ ವಿಸಿಲನ್ನು ಊದುತ್ತ, ಒಂದು ಕಾಲನ್ನು ನೆಲಕ್ಕೆ ತೀಡಿ ಧೂಳು ಹಾರಿಸುತ್ತ ತೀರ್ಪು ಕೊಡುತ್ತಿದ್ದರೆ ಯಾವ ಸಿನಿಮಾ ಹೀರೋಗೂ ಕಮ್ಮಿ ಅನ್ನಿಸುತ್ತಿರಲಿಲ್ಲ.
ನಮ್ಮ ಕಿಟ್ಟಣ್ಣ ಸರ್ ಕೇವಲ ಪಿಟಿ ಮಾಸ್ಟರ್ ಆಗಿರದೆ ಗಣಿತ ಟ್ಯೂಶನ್ ಕೂಡ ಹೇಳಿ ಕೊಡುತ್ತಿದ್ದರು. ನಾನು ಮತ್ತು ತಂಗಿ ದಿನವೂ ಬೆಳಿಗ್ಗೆ ಅವರ ಮನೆಗೆ ಟ್ಯೂಶನ್‌ಗೆ ಹೋಗುತ್ತಿದ್ದೆವು. ಗಣಿತ ನಾನು ಅತಿ ದ್ವೇಷಿಸುತ್ತಿದ್ದ ವಿಷಯ. ನನಗೂ, ಅಂಕಿಅಂಶಗಳಿಗೂ ಜಾತಕ ಕೂಡಿ ಬಂದದ್ದೇ ಇಲ್ಲ. ಬಹುಶಃ ಇದೇ ಕಾರಣಕ್ಕೋ ಏನೋ ಒಂದು ದಿನ ನನ್ನ ಐನ್‌ಸ್ಟೈನ್ ತಲೆ ಓಡಿ ಅದ್ಭುತವಾದ ಉಪಾಯ ಹೊಳೆದಿತ್ತು. ಅದೇನೆಂದರೆ, ಟ್ಯೂಶನ್ ತಪ್ಪಿಸಿ ಆ ಸಮಯದಲ್ಲಿ ದೇವಸ್ಥಾನದಲ್ಲಿ ಕುಳಿತುಕೊಳ್ಳುವುದು. ನನ್ನ ತಂಗಿಯೂ ಸಾಥ್ ನೀಡಿದ್ದರಿಂದ ಸಿಕ್ಕಿ ಬೀಳುವ ಭಯವಿರಲಿಲ್ಲ. ನಮ್ಮ ಈ ಸಾಹಸ ಕೆಲವು ವಾರ ನಡೆಯಿತು. ಆದರೆ ಆಟಟ ್ಜ್ಟ್ಟಜ ಝ್ಝಿಟ್ಜಿಡ ಢ್ಝಿಟಟ ್ಛ್ಟಟಜ ಡ್ಟಿ ಛಟಿ ಜಟಿಜ ಎಂಬ ಹಾಗೆ ನಮ್ಮ ಸುಖಿ ದಿನಗಳಿಗೆ ತೆರೆ ಬೀಳುವ ದಿನ ಬಂದೇ ಬಿಟ್ಟಿತು. ನಮ್ಮ ಹೊಟೇಲ್‌ಗೆ ಒಂದು ದಿನ ಕಿಟ್ಟಣ್ಣ ಸರ್ ತಿಂಡಿ ತಿನ್ನಲಿಕ್ಕೆ ಅಂತ ಬಂದರು. ವಾಸ್ತವದಲ್ಲಿ ಅವರು ಬಂದಿದ್ದ ವಿಷಯ ಟ್ಯೂಶನ್‌ಗೆ ನಮ್ಮ ಗೈರು ಹಾಜರಿಯ ಬಗ್ಗೆ ತಂದೆಯವರಲ್ಲಿ ಪ್ರಶ್ನಿಸುವುದೇ ಅಗಿತ್ತು. ಅಪ್ಪ, ಸರ್ ಬಂದ ತಕ್ಷಣ ಅವರಿಗೆ ವಿಶೇಷ ಆತಿಥ್ಯ ನೀಡಿ, ಅವರ ತಿಂಡಿ ಮುಗಿದ ಮೇಲೆ ಲೋಕಾರೂಢಿ ಎಂಬಂತೆ 'ಹೇಗೆ ಓದುತ್ತಿದ್ದಾರೆ ಮಕ್ಕಳು' ಎಂದು ಪ್ರಶ್ನಿಸಿದ್ದಾರೆ. ಇದನ್ನೇ ಕಾಯುತ್ತಿರುವಂತೆ ನಮ್ಮ ಸರ್, 'ಶಾಲೆಯಲ್ಲಿ ಪರವಾಗಿಲ್ಲ, ಆದರೆ ಟ್ಯೂಶನ್‌ಗೆ ಬರುತ್ತಿಲ್ಲ. ಯಾಕೆ ಟ್ಯೂಶನ್‌ನಿಂದ ಬಿಡಿಸಿದ್ದೀರೇನು' ಅಂದರು. ಇದಿಷ್ಟು ಆದ ಮೇಲೆ ನಮ್ಮ ಅವಸ್ಥೆಯನ್ನ ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಬಿಡಿ. ನನ್ನನ್ನೂ, ನನ್ನ ತಂಗಿಯನ್ನೂ ಕೂಡಲೇ ಹೊಟೇಲ್‌ಗೆ ಕರೆಸಿ, ಸರ್ ಮುಂದೆಯೇ ಸಪೂರ ಕರೆಂಟ್ ವಯರ್‌ನಿಂದ ಏಟುಗಳ ಅರ್ಚನೆಯಾಯ್ತು. ಅದೇ ಕೊನೆ, ಮತ್ತೆ ಅಂಥ ಸಾಹಸಕ್ಕೆ ಕೈ ಹಾಕಲಿಲ್ಲ.
ಶಾಲೆಯಲ್ಲಿ ಪ್ರತಿ ದಿವಸ ಬೆಳಗ್ಗೆ ಪ್ರಾರ್ಥನೆ ಆದ ತಕ್ಷಣ ಯಾರಾದರೂ ವಿದ್ಯಾರ್ಥಿ ಅವತ್ತಿನ ದಿನಪತ್ರಿಕೆ ಹಿಡಿದುಕೊಂಡು ಅದರಲ್ಲಿರುವ ಮುಖ್ಯಾಂಶಗಳನ್ನು ಇಡಿ ವಿದ್ಯಾರ್ಥಿವೃಂದದ ಮುಂದೆ ಗಟ್ಟಿಯಾಗಿ ಓದಬೇಕಿತ್ತು. ಅದಾದ ನಂತರ ಆ ದಿನದ ನಕ್ಷತ್ರ, ತಿಥಿ, ಮಾಸ, ಸಂವತ್ಸರಗಳ ಬಗ್ಗೆ ಹೇಳಬೇಕಿತ್ತು. ನಂತರ ಮತ್ತಿನ್ನಾರಾದರೂ ವಿದ್ಯಾರ್ಥಿ ಸುಭಾಷಿತ ಹೇಳಬೇಕಿತ್ತು. ಇವೆಲ್ಲವೂ ನನ್ನಲ್ಲಿ ಅಂದೇ ಸುತ್ತಮುತ್ತಲಿನ ಜಗತ್ತಿನಲ್ಲಾಗುವ ಆಗು ಹೋಗುಗಳ ಕುತೂಹಲ, ಒಳ್ಳೆಯ ವಿಚಾರಗಳ ಬಗ್ಗೆ ಯೋಚಿಸುವ ಬೀಜ ಬಿತ್ತಿದ್ದು ಮಾತ್ರ ಸುಳ್ಳಲ್ಲ. ಹಾಗೆಯೆ ಪ್ರತಿ ಶನಿವಾರ ಬೆಳಗ್ಗೆ ಪ್ರಾರ್ಥನೆ ಆದ ನಂತರ ಮೈದಾನದಲ್ಲಿ ಡ್ರಿಲ್ ಮಾಡಿಸುತ್ತಿದ್ದರು. ನಮಗೋ ಶನಿವಾರ ಬಂತೆಂದರೆ ಗಂಟಲಿನಲ್ಲಿ ಮುಳ್ಳು ಸಿಕ್ಕಿಕೊಂಡ ಅನುಭವ. ಡ್ರಿಲ್ ಮಾಡುವಾಗ ಮೈಗಳ್ಳತನ ಮಾಡುತ್ತಿದ್ದೆವು. ನಮ್ಮಂಥ ಸಾವಿರ ಸಾವಿರ ವಿದ್ಯಾರ್ಥಿಗಳನ್ನು ನೋಡಿ ಪಳಗಿರುವ ಶಿಕ್ಷಕರೇನು ಸಾಮಾನ್ಯದವರೇ? ನಮಗೆ ಅಭಿಮುಖವಾದ ಎತ್ತರದ ಜಾಗದಲ್ಲಿ ನಿಂತು ಎಲ್ಲರನ್ನು ಗಮನಿಸುತ್ತಿದ್ದರು. ಯಾರಾದರೂ ಸರಿಯಾಗಿ ಮಾಡದೆ ಹೋದರೆ ಅಲ್ಲಿಂದಲೇ ಬೈಗುಳಗಳ ದೈವವಾಣಿ ಬಿತ್ತರವಾಗುತ್ತಿತ್ತು. ನನಗೆ ಬೈಯ್ಯುವ ಪರಿಯಂತೂ ಬೇರೆಯದೇ ರೀತಿ. ನಾನೇನಾದರೂ ಮೈಗಳ್ಳತನ ಮಾಡುತ್ತಿದ್ದರೆ - ಏಯ್ ಇಡ್ಲಿ - ವಡ, ಸರಿಯಾಗಿ ಕೈ ಎತ್ತೋ ಎಂಬ ವಾಗ್ಬಾಣ ಕೂಡಲೇ ತೂರಿ ಬರುತ್ತಿತ್ತು. ನಮ್ಮ ಹೋಟೆಲ್‌ನ ಇಡ್ಲಿ - ವಡಕ್ಕೆ ಬಿಟ್ಟಿ ಪ್ರಚಾರ ಸಿಕ್ಕಿದ್ದಷ್ಟೆ ಲಾಭ.
ಎಂಟನೆ ತರಗತಿಯಲ್ಲಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಗಳಂದು ನಮಗೆಲ್ಲ ಇಡೀ ಶಾಲಾ ಆವರಣಕ್ಕೆ ಹೊಸ ಕಳೆ ಕೊಡುವ ಹುಮ್ಮಸ್ಸು. ಶಾಲೆ, ಮೈದಾನದ, ಕಳೆ ಕಸವನ್ನೆಲ್ಲಾ ತೆಗೆದು, ಧ್ವಜ ಕಂಬದ ಮೆಟ್ಟಿಲುಗಳನ್ನು ಸ್ವಚ್ಛ ಮಾಡಿ, ಬಣ್ಣಬಣ್ಣದ ಪುಡಿಗಳಿಂದ, ಭಾರತ ನಕಾಶೆಯನ್ನು ಚಿತ್ರಿಸಿ, ಅದರ ಮಧ್ಯೆ ಹೂವುಗಳನ್ನ ತುಂಬಿಸಿ, ಜೈ ಹಿಂದ್ ಎಂದೋ, ವಂದೇ ಮಾತರಂ ಎಂದೋ ಬರೆದು ಮುಗಿಸಿದರೆ ಮನಸ್ಸಿನ ಪೂರ್ತಿ ಧನ್ಯತಾ ಭಾವ.
ನಮ್ಮ ಹಿಂದಿ ಗುರುಗಳು ಒಂದು ಸಲ ಸ್ವಾತಂತ್ರ್ಯ ದಿನಕ್ಕೆ ಹಿಂದಿಯಲ್ಲಿ ಭಾಷಣ ಬರೆದು ಕೊಟ್ಟು, ಆ ಭಾಷಣ ಮಾಡುವಂತೆ ಹೇಳಿದ್ದರು. ನಾನು ಎದ್ದೂ ಬಿದ್ದೂ ಅದನ್ನು ಉರು ಹೊಡೆದು, ಏರಿಳಿತಗಳಿಲ್ಲದೆ ಶತಾಬ್ದಿ ಎಕ್ಸ್‌ಪ್ರೆಸ್‌ನ ಹಾಗೆ ಪೂರ್ತಿ ಭಾಷಣವನ್ನು ಸಭೆಯ ಮುಂದೆ ನೋಡದೇ ವಾಚಿಸಿದ್ದೆ. ವಿದ್ಯಾರ್ಥಿಗಳಿಗೆ ಅದು ಎಷ್ಟು ಅರ್ಥವಾಯಿತೋ ದೇವರೇ ಬಲ್ಲ. ಆದರೂ ಭಾಷಣ ಮುಗಿದ ಮೇಲೆ ಗೆಳೆಯರ ಗುಂಪಿನಲ್ಲಿ ನಾನು ಹೀರೋ ಆಗಿದ್ದೆ. ಈ ವಿಶೇಷ ದಿನಗಳಲ್ಲಿ ವಿದ್ಯಾರ್ಥಿಗಳು ಇಡೀ ಊರಿಗೆ ಪ್ರದಕ್ಷಿಣೆ ಹಾಕುತ್ತಿದ್ದುದೂ ಉಂಟು. ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಸಾಲು ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ಪ್ರದಕ್ಷಿಣೆ ಮುಗಿದ ಮೇಲೆ ಆ ದಿನದ ಅತಿ ಮುಖ್ಯ ಹಾಗೂ ಕಾತರತೆಯಿಂದ ಕಾಯುವ ಕಾರ್ಯಕ್ರಮ- ಸಿಹಿ ಹಂಚಿಕೆ. ಕೊಡುತ್ತಿದ್ದುದು ಇಪ್ಪತ್ತೈದು ಪೈಸೆಯ ನಾಲಕ್ಕೋ ಐದೋ ಲಿಂಬೂ ಮಿಠಾಯಿ. ಅದರೂ ಅದಕ್ಕೋಸ್ಕರ ಕಾದು, ಇಸಿದುಕೊಂಡು ಬಾಯಿಗೆ ಹಾಕಿ ಚಪ್ಪರಿಸಿದಾಗಲೇ ಮನಸ್ಸಿಗೆ ನೆಮ್ಮದಿ.
ಹೀಗೆ ದೇಶಪ್ರೇಮ, ಶಿಸ್ತು, ಏಟುಗಳು, ಪ್ರೀತಿಯನ್ನು, ಎಲ್ಲಕ್ಕಿಂತಲೂ ಹೆಚ್ಚಾಗಿ ನೆನಪುಗಳನ್ನು ಕಟ್ಟಿಕೊಟ್ಟಂಥ ಶಾಲೆಯ ಪ್ರತಿಬಿಂಬ ನನ್ನ ಕೋಣೆಯ ಬದಿಯ ಶಾಲೆಯಲ್ಲೇಕೋ ಮಸುಕಾಗಿ ಕಂಡಂತೆ ಭಾಸವಾಯಿತು.

- ಪದ್ಮಪ್ರಸಾದ್ ಜೈನ್, ಮೂಡುಬಿದಿರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ