ಯುವಜನ/ಮಕ್ಕಳು

ಸ್ನೇಹ ರಾಶಿ

ಈ ಸ್ನೇಹವೆಂಬುದೇ ಹಾಗೆ. ಎಲ್ಲರೊಂದಿಗೂ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ.

ಈ ಸ್ನೇಹವೆಂಬುದೇ ಹಾಗೆ. ಎಲ್ಲರೊಂದಿಗೂ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಆದ್ದರಿಂದಲೇ ಕಾಲೇಜು, ಆಫೀಸುಗಳಲ್ಲಿ ಎಲ್ಲರೂ ಎಲ್ಲರಿಗೂ ಸ್ನೇಹಿತರೆನಿಸಿಕೊಳ್ಳುವುದಿಲ್ಲ. ಹಲವರ ಸ್ನೇಹ ಕೆಲವೇ ದಿನಗಳಲ್ಲಿ ಮುರಿದು ಬೀಳುವುದೂ ಉಂಟು. ಕೆಲವರ ಆತ್ಮೀಯ ಸ್ನೇಹ ಹಲವು ದಿನಗಳವರೆಗೆ ಮುಂದುವರಿಯುವುದೂ ಉಂಟು. ಈ ನಿಟ್ಟಿನಲ್ಲಿ ಅವರವರ ರಾಶಿಯ ಆಧಾರದ ಮೇಲೆ ಯಾರು ಯಾರಿಗೆ ಯಾವ ಪ್ರಮಾಣದಲ್ಲಿ ಪ್ರಾಣ ಸ್ನೇಹಿತರಾಗಬಹುದು ಎಂಬುದನ್ನು ತಿಳಿಯೋಣ.

ಮೇಷ

ಬೆಂಕಿಯಂತೆ ನೇರ ಸ್ವಭಾವ ಇರುವ ಈ ರಾಶಿಯವರು ಉತ್ತಮ ನಾಯಕತ್ವ ಗುಣ ಹೊಂದಿರುತ್ತಾರೆ. ಆದರೆ ಶೀಘ್ರ ಕೋಪಿಷ್ಠರು. ಹಾಗಾಗಿ ತಪ್ಪೆಸಗುವುದು ಜಾಸ್ತಿ. ಯಾವುದೇ ಸಮಯದಲ್ಲಿ ತಮ್ಮ ಸ್ನೇಹಿತರಿಗೆ ನಿಷ್ಕಲ್ಮಷ ಮನಸ್ಸಿನಿಂದ ಸಹಾಯ ಮಾಡುವವರಾಗಿದ್ದರೂ, ಇಂತಹವರ ಸ್ನೇಹ ಸಂಪಾದಿಸುವಾಗ ಅತಿ ಎಚ್ಚರಿಕೆ ಅಗತ್ಯ. ಇವರೊಂದಿಗೆ ಮಿಥುನ, ಕುಂಭ, ಸಿಂಹ, ಧನು ರಾಶಿಯವರ ಸ್ನೇಹ ಹೊಂದಾಣಿಕೆಯಾಗುತ್ತದೆ.

ವೃಷಭ
ಸಂಘಟನಾ ಚತುರರಾಗಿರುವ ವೃಷಭ ರಾಶಿಯವರು ತಮ್ಮ ಕೌಶಲ್ಯಗಳಿಂದಾಗಿ ಸ್ನೇಹಿತರ ಬಳಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ. ಬಳಗದ ಎಲ್ಲರನ್ನೂ ಸಮಾನರಾಗಿ ಕಾಣುವ ಇವರು ಸ್ನೇಹಿತರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅದಕ್ಕೊಂದು ಉತ್ತಮ ಪರಿಹಾರ ನೀಡುವಲ್ಲಿ ಎತ್ತಿದ ಕೈ. ಆದ್ದರಿಂದ ಇಂತಹವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಯಾವುದೇ ದಾಕ್ಷಿಣ್ಯ ಮಾಡಿಕೊಳ್ಳಬೇಕಿಲ್ಲ. ಮೀನ, ಕಟಕ, ಕನ್ಯಾ, ಮಕರ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

ಮಿಥುನ

ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಮಿಥುನ ರಾಶಿಯವರು ಉತ್ತಮ ಸ್ನೇಹಜೀವಿಗಳೂ ಹೌದು. ಹಲವು ಸ್ನೇಹಿತರನ್ನು ಹೊಂದಿರುವ ಇವರು ಉತ್ತಮ ಕೇಳುಗರೂ ಆಗಿರುತ್ತಾರೆ. ಇವರ ಸ್ನೇಹಿತ ವರ್ಗ ನಿಜಕ್ಕೂ ವಿಭಿನ್ನ. ಎಲ್ಲರೊಂದಿಗೆ ಆರೋಗ್ಯಕರವಾಗಿ ಸಂಬಂಧ ಕಾಪಾಡಿಕೊಳ್ಳುವವರಾಗಿರುತ್ತಾರೆ. ಮೇಷ, ಸಿಂಹ, ತುಲಾ, ಕುಂಭ ರಾಶಿಯವರೊಂದಿಗೆ ಇವರ ಸ್ನೇಹ ಹೊಂದಾಣಿಕೆಯಾಗುತ್ತದೆ.

ಕಟಕ

ಕಟಕ ರಾಶಿಯವರು ನೀರಿನಂತೆ ಎಲ್ಲರೊಂದಿಗೆ ಬೆರೆಯುವವರು. ಸ್ನೇಹಿತರ ಹಲವು ರಹಸ್ಯ ಮಾಹಿತಿಯನ್ನು ಹೊಂದಿದವರಾಗಿರುವ ಇವರು ಕಲ್ಲನ್ನೂ ಮಾತನಾಡಿಸಬಲ್ಲರು. ಎಷ್ಟೇ ಕಠಿಣ ವ್ಯಕ್ತಿತ್ವದವರೊಂದಿಗೂ ಸುಲಭವಾಗಿ ಸಂವಹನ ಮಾಡುವ ಕಲೆ ಇವರಿಗೆ ಕರಗತ. ಉತ್ತಮ ಸ್ನೇಹವನ್ನು ಬಯಸುವವರು. ಕನ್ಯಾ, ವೃಷಭ, ವಶ್ಚಿಕ, ಮೀನ ರಾಶಿಯವರೊಂದಿಗೆ ಇವರ ಸ್ನೇಹ ಹೊಂದಾಣಿಕೆಯಾಗುತ್ತದೆ.

ಸಿಂಹ
ಆಕ್ರಮಣಕಾರಿ ಮನೋಭಾವ ಉಳ್ಳವರು. ಬೆಂಕಿಯಂಥ ಮಾತನ್ನು ಆಡುವವರು. ಸದಾ ಕ್ರಿಯಾಶೀಲರಾಗಿರುವ ಇವರು ಆದರ್ಶವಾದಿಗಳೂ ಹೌದು. ಉತ್ತಮ ಕೌಶಲ್ಯ ನಿರ್ವಹಣೆಯೊಂದಿಗೆ ಸಂಘಟನಕಾರರೂ ಆಗಿರುತ್ತಾರೆ. ಇವರು ಸುಲಭವಾಗಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲಾರರು. ಬಹಳ ಸೂಕ್ಷ್ಮಮತಿಗಳಾಗಿದ್ದರೂ ಸುಲಭವಾಗಿ ತಪ್ಪೆಸುಗುವಂತಹವರಾಗಿದ್ದಾರೆ. ಮಿಥುನ, ಮೇಷ, ತುಲಾ, ಧನು ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆ ಸಾಧ್ಯ.

ಕನ್ಯಾ

ನಿಗೂಢ ನಡೆ ಹೊಂದಿರುವ ಇವರು ತಾವು ಮಾಡುವ ಕಾರ್ಯವನ್ನು ಆದಷ್ಟು ಗುಪ್ತವಾಗಿ ಮಾಡುವವರು. ಕೆಲಸವಾದ ನಂತರವೇ ಅದನ್ನು ತೋರ್ಪಡಿಸಿಕೊಳ್ಳಲು ಇಚ್ಛಿಸುತ್ತಾರೆ. ಉತ್ತಮ ಸಂವಹನ ಕೌಶಲ್ಯ ಮಾತ್ರವಲ್ಲದೆ ನಿಧಾನವಾಗಿ ಮಾತಿನಲ್ಲೇ ಮೋಡಿ ಮಾಡುವವರು. ಆದರೆ, ಆತ್ಮವಿಶ್ವಾಸ ಕಡಿಮೆ. ಯಾವುದೇ ವಿಷಯಕ್ಕೆ ಸಂಕೋಚ ಮಾಡಿಕೊಳ್ಳುವವರಲ್ಲ. ಕಟಕ, ವೃಶ್ಚಿಕ, ವೃಷಭ, ಮಕರ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

ತುಲಾ

ನಾಯಕತ್ವ ಗುಣ ಹೊಂದಿರುವ ಇವರು ಅದ್ಭುತ ಕಲ್ಪನಾಶೀಲರು. ಸಲಹೆಗಾರರು. ಜನಾಕರ್ಷಕರಾಗಿರುವ ತುಲಾ ರಾಶಿಯವರು ಸಮಾಜದಲ್ಲಿ ಕ್ರಿಯಾಶೀಲರೂ ಆಗಿರುತ್ತಾರೆ. ಸ್ನೇಹಿತರು ಸಂಕಷ್ಟದಲ್ಲಿರುವಾಗ ಅವರಿಗೆ ಮನೋಸ್ಥೈರ್ಯ ತುಂಬಿ ಸಮಾಜದ ಮುಖ್ಯವಾಹಿನಿಗೆ ತರುವ ಸಾಮರ್ಥ್ಯ ಹೊಂದಿದ್ದಾರೆ. ಸಿಂಹ, ಧನು, ಮಿಥುನ, ಕುಂಭ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

ವೃಶ್ಚಿಕ
ನಿಗೂಢ ಮನಸ್ಥಿತಿಯವರು. ಉತ್ತಮ ಕಾರ್ಯ ನಿರ್ವಹಣೆ ಇವರಲ್ಲಿರುವ ಗುಣಗಳಲ್ಲೊಂದು. ಇವರು ಕೆಲವೇ ಆತ್ಮೀಯ ಸ್ನೇಹಿತರನ್ನು ಬಯಸುವವರು. ತಮ್ಮ ಬುದ್ಧಿವಂತಿಕೆಯಿಂದ ಇನ್ನೊಬ್ಬರನ್ನು ಆಕರ್ಷಿಸುವವರು. ಇವರೊಂದಿಗೆ ಅತಿ ಎಚ್ಚರಿಕೆಯ ಮಾತುಕತೆ ಅಗತ್ಯ. ಇವರು ಗಾಢ ಸ್ನೇಹಿತರನ್ನು ಹೊಂದಿರುತ್ತಾರೆ. ಇವರೊಂದಿಗಿನ ಸ್ನೇಹ ಬಿರುಕು ಬೀಳುವ ಸಂಭವ ಕಡಿಮೆ. ಕನ್ಯಾ, ಮಕರ, ವೃಶ್ಚಿಕ, ಮತ್ತು ಮೀನ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

ಧನು
ಉತ್ತಮ ಸಂವಹನಕಾರರಾಗಿರುವ ಇವರು ಒಳ್ಳೆಯ ಸ್ನೇಹಿತರನ್ನು ಹೊಂದಿರುತ್ತಾರೆ. ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುವ ಧನು ರಾಶಿಯವರು ಮುಚ್ಚುಮರೆ ಇಲ್ಲದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.  ಆಸುಪಾಸಿನವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಮಾನವೀಯ ಗುಣಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ತುಲಾ, ಕುಂಭ, ಮೇಷ ಹಾಗೂ ಸಿಂಹ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

ಮಕರ

ಇವರ ಸ್ನೇಹ ಪಾರದರ್ಶಕ. ಆದರೂ ಗೌಪ್ಯತೆ ಕಾಪಾಡುವವರು. ಉತ್ತಮ ನಾಯಕತ್ವ ಗುಣವಿರುತ್ತದೆ. ಒಮ್ಮೆ ಇವರೊಂದಿಗೆ ಸ್ನೇಹ ಸಂಪಾದಿಸಿದರೆ ದೀರ್ಘಕಾಲ ನೆನಪಿಟ್ಟುಕೊಳ್ಳುವವರು. ಸ್ನೇಹಿತರನ್ನು ಅವರ ಪೋಷಕರು ಪ್ರೀತಿಸುವುದಕ್ಕಿಂತಲೂ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ವೃಶ್ಚಿಕ, ಮೀನ, ವೃಷಭ, ಕನ್ಯಾ ರಾಶಿಯವರೊಂದಿಗೆ ಇವರ ಸ್ನೇಹ ಹೊಂದಾಣಿಕೆಯಾಗುತ್ತದೆ.

ಕುಂಭ
ಹಲವು ಸ್ನೇಹಿತರನ್ನು ಹೊಂದಿರುವ ಇವರು ಎಲ್ಲರೊಂದಿಗೂ ಸಮಾನವಾಗಿ ಇರಲು ಹೋಗಿ ಸೋಲುವವರು. ಆದ್ದರಿಂದ ಹೆಚ್ಚಿನವರನ್ನು ಆತ್ಮೀಯರನ್ನಾಗಿ ಮಾಡಿಕೊಳ್ಳುವುದು ಇವರಿಗೆ ಕಷ್ಟವೇ ಸರಿ. ಆದರೂ ಬೆರಳೆಣಿಕೆಯ ಗೆಳೆಯರೊಂದಿಗೆ ಗಾಢ ಸ್ನೇಹ ಬೆಳೆಸಿ, ಅವರ ಕಷ್ಟ, ನಷ್ಟದಲ್ಲಿ ಪಾಲ್ಗೊಳ್ಳುತ್ತಾರೆ. ಧನು, ಮಿಥುನ, ಮೇಷ, ತುಲಾ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆ ಸಾಧ್ಯ.

ಮೀನ
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವವರು. ಉತ್ತಮ ಸಂವಹನ ಕೌಶಲ್ಯ ಹೊಂದಿದವರಾಗಿದ್ದು, ಸ್ನೇಹಿತರಿಗೆ ಸಹಾಯ ಮಾಡುವಲ್ಲಿ ಎತ್ತಿದ ಕೈ. ಇವರು ಶಾಂತಿ ಬಯಸುತ್ತಾರೆ. ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅನುಕಂಪ ತೋರುವವರಾಗಿದ್ದು, ಸ್ನೇಹಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ. ಮಕರ, ವೃಷಭ, ಕಟಕ, ವೃಶ್ಚಿಕ ರಾಶಿಯವರೊಂದಿಗೆ ಸ್ನೇಹ ಹೊಂದಾಣಿಕೆಯಾಗುತ್ತದೆ.

- ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video