ಕವಿ ಹಾಸಿಗೆಯ ಮೇಲೆ ಒರಗಿದ್ದ. ನಿದ್ರೆ ಬರಲಿಲ್ಲ. ಹೊರಗೇನೋ ಸದ್ದಾದಂತಾಯಿತು. ಮೆಲ್ಲನೆ ಕಣ್ತೆರೆದು ಹೊದಿಕೆಯನ್ನು ಸರಿಸಿ ಅತ್ತಿತ್ತ ನೋಡಿದ. ರಾತ್ರಿ ಗಾಢವಾಗಿತ್ತು.
ಒಬ್ಬ ಕಳ್ಳ ಅವನ ಮನೆಯನ್ನು ಹೊಕ್ಕು ಸಾಮಾನುಗಳನ್ನು ಒಟ್ಟುಗೂಡಿಸಿ ಮೂಟೆ ಕಟ್ಟುತ್ತಿದ್ದ. ಬಹಳ ಸಾಮಾನುಗಳು ಇದ್ದಿದ್ದರಿಂದ ಅವನಿಗೆ ಒಂದೇ ಮೂಟೆಯಲ್ಲಿ ಎಲ್ಲವನ್ನೂ ಸೇರಿಸಿ ಗಂಟು ಕಟ್ಟಲಾಗುತ್ತಿರಲಿಲ್ಲ. ಹೀಗಾಗಿ, ಬೇರೆ ಮೂಟೆ ಕಟ್ಟಲು ಬಟ್ಟೆಗಾಗಿ ಹುಡುಕಾಡುತ್ತಿದ್ದ.
ಅದೆಲ್ಲವನ್ನೂ ಗಮನಿಸುತ್ತಿದ್ದ ಕವಿ ಮಹಾಶಯ ಹಾಸಿಗೆಯಿಂದ ಮೇಲೆದ್ದು ಕುಳಿತು ಹೀಗೆ ನುಡಿದ. 'ನೀನು ನಿರಾಶೆ ಹೊಂದುವ ಅಗತ್ಯವಿಲ್ಲ. ಇಚ್ಛಿಸಿದಲ್ಲಿ ನಾನು ಸಹಾಯ ಮಾಡುತ್ತೇನೆ'. ಇದನ್ನು ಊಹಿಸದಿದ್ದ ಕಳ್ಳನು ಅಂಜಿ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಲು ಪ್ರಯತ್ನಿಸಿದ. ಅದಕ್ಕೆ ಕವಿಯು 'ಮಹಾಶಯನೇ, ಇವುಗಳನ್ನು ನೀನು ಕೊಂಡೊಯ್ಯಲೇ ಬೇಕು. ಮನೆಯಲ್ಲಿ ಅನಗತ್ಯ ಸಾಮಾನುಗಳು ತುಂಬಿವೆ'. ಹೀಗೆ ನುಡಿದು ತಾನು ಹೊದ್ದಿದ್ದ ಹೊದಿಕೆಯನ್ನೇ ಅವನಿಗೆ ಗಂಟು ಕಟ್ಟಲು ನೀಡಿದ. ಬೇಡವೆಂದರೂ ಒತ್ತಾಯಿಸಿ ಸಾಮಾನುಗಳ ಮೂಟೆಗಳನ್ನು ಕಟ್ಟಲು ಸಹಕರಿಸಿದ. ನಂತರ ಅವೆಲ್ಲವನ್ನೂ ಕಳ್ಳನ ತಲೆಯ ಮೇಲೆ ಹೊರಿಸಿದ. ಕಳ್ಳನು ಬೇರೆ ದಾರಿ ತಿಳಿಯದೆ ಮೂಟೆಗಳನ್ನು ಹೊತ್ತುಕೊಂಡು ತನ್ನ ಮನೆಯ ಕಡೆ ನಡೆದ. ಮನೆಗೆ ಬಂದು ತಾಯಿಯ ಬಳಿ ಎಲ್ಲ ವಿಷಯವನ್ನೂ ವಿವರಿಸಿದ. ಎಲ್ಲವನ್ನೂ ಕೇಳಿದ ತಾಯಿಯು 'ಮಗನೇ ನೀನು ಯಾರ ಮನೆಯಿಂದ ಇವನ್ನೆಲ್ಲ ಕದ್ದು ತಂದಿರುವೆಯೋ ಅವರು ಸಾಮಾನ್ಯ ಮನುಷ್ಯರಾಗಿರಲಿಕ್ಕಿಲ್ಲ. ಉತ್ತಮ ಮಾರ್ಗದರ್ಶಕರಾಗಿರುವಂತಿದೆ' ಎಂದು ತಮ್ಮ ಮಗನ ತಪ್ಪನ್ನು ಮನವರಿಕೆ ಮಾಡುತ್ತಾ ಹಿಗ್ಗಾಮುಗ್ಗ ಬಯ್ದಳು. ಕಳ್ಳತನದಂಥ ದುರ್ಮಾರ್ಗವನ್ನು ಹಿಡಿದಿರುವುದು ತಿಳಿದು ಮನಸೋ ಇಚ್ಛೆ ಥಳಿಸಿದಳು. ಇಂಥ ಮಗ ತನಗೆ ಇರುವನಲ್ಲ ಎಂದು ತನ್ನನ್ನೇ ತಾನು ಹಳಿದುಕೊಂಡು ಗೋಳಾಡಿದಳು. 'ಈ ನಿನ್ನ ಕದಿಯುವ ಕೆಲಸದಿಂದ ಯಾರಿಗೂ ಒಳ್ಳೆಯದಲ್ಲ. ನೀನು ಈಗಲೇ ಆ ಮಹಾನುಭಾವರಲ್ಲಿ ಹೋಗಿ ಅವರ ಅಮೂಲ್ಯವಸ್ತುಗಳನ್ನು ಅವರಿಗೆ ಹಿಂದಿರುಗಿಸಿ ಕ್ಷಮೆಯನ್ನು ಬೇಡು. ಅವರಲ್ಲಿಯೇ ಇದ್ದು ಅವರ ಸೇವೆಯನ್ನು ಮಾಡುತ್ತಾ ಸದ್ಬುದ್ಧಿಯನ್ನು ಹೊಂದು, ಸಮಾಜದಲ್ಲಿ ಉತ್ತಮ ಪ್ರಜೆಯಾಗು' ಎಂದು ಮಗನನ್ನು ಮನೆಯಿಂದ ಹೊರಗಟ್ಟಿದಳು. ಕಳ್ಳನು ತಾಯಿಯು ಹೇಳಿದಂತೆ ಕೇಳಿದನು. ಅಲ್ಲದೆ ದುಡಿದು ಉಣ್ಣಲು ಕಲಿತನು.
- ಗುರುರಾಜ ಬೆಣಕಲ್