'ಸಮಯ' ಯಾರಿಗೂ ಕಾಯದು. ಯಶಸ್ವಿ ಬದುಕಿಗೆ ನಾವು ಕಾಲದೊಂದಿಗೆ ಹೆಜ್ಜೆಹಾಕುವುದು ಅತ್ಯಗತ್ಯ. ರತನ್ ಟಾಟಾ, ಬಿಲ್‌ಗೇಟ್ಸ್‌ರಂಥ ಯಶಸ್ವಿ ವ್ಯಕ್ತಿಗಳಿಗೆ ಪ್ರತಿಯೊಂದು ಸೆಕೆಂಡೂ ಅಮೂಲ್ಯ. ಬಹುತೇಕರು ಇದೇ ರೀತಿಯ ಯಶಸ್ಸಿನ ಕನಸು ಕಾಣುತ್ತಾರೆ. ಆದರೆ, ಸಮಯದ ಮಹತ್ವ ಅರಿಯುವಲ್ಲಿ ವಿಫಲರಾಗಿ ಎಡವುತ್ತಾರೆ. ಜೀವನದ ಗತಿಯನ್ನೇ ಬದಲಾಯಿಸಬಲ್ಲ ಇಂಥ ಸಮಯದ ಮಹತ್ವವನ್ನು ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಬೋಧಿಸುವುದು ಅಗತ್ಯ. ಆದರೆ, ಲೆಕ್ಕ, ವಿಜ್ಞಾನ, ಸಾಹಿತ್ಯ, ಇಂಗ್ಲಿಷ್‌ನ ಮಹತ್ವವನ್ನು ಬೋಧಿಸುವ ನಮ್ಮ ಶಿಕ್ಷಕರು ಸಮಯ ನಿರ್ವಹಣೆಯಂಥ ಮಹತ್ವದ ಪಾಠ ಹೇಳುವುದನ್ನೇ ಮರೆತುಬಿಡುತ್ತಾರೆ. ಇದೇ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಬುದ್ಧಿವಂತರಿದ್ದರೂ ಸಮಯ ನಿರ್ವಹಣೆಯ ಮಹತ್ವ ಅರಿಯದೆ ಹಿಂದೆ ಬೀಳುವುದುಂಟು. ಕಾಲೇಜು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ 5 ಗೋಲ್ಡನ್ ರೂಲ್ ಪಾಲಿಸಿನೋಡಿ.
'ನೋ' ಅನ್ನುವುದನ್ನು ಕಲಿಯಿರಿ
ವಾರಾಂತ್ಯದಲ್ಲಿ ಎಲ್ಲಾದ್ರೂ ಹೊರಗೆ ಹೋಗೋಣ ಅಂತಾರೆ ಗೆಳೆಯರು. ರಾತ್ರಿ ಕೂತು ಹರಟೆ ಹೊಡೆಯೋಣ ಅಂತ ಕರೀತಾಳೆ ಪಕ್ಕದ ಮನೆಯ ಗೆಳತಿ... ಆದರೆ, ಪ್ರತಿ ಬಾರಿಯೂ ಇನ್ನೊಬ್ಬರು ಅಂದದ್ದಕ್ಕೆಲ್ಲ 'ಎಸ್' ಎನ್ನಬೇಕೆಂದೇನೂ ಇಲ್ಲ. ಹೋಂವರ್ಕ್ ಮುಗಿದಿಲ್ವಾ, ಕಾಲೇಜಲ್ಲಿ ಕೊಟ್ಟ ಅಸೈನ್‌ಮೆಂಟ್ ಇನ್ನೂ ಬಾಕಿ ಇದ್ಯಾ...? ಹಾಗಿದ್ದರೆ ಇಂಥ ಆಹ್ವಾನಗಳಿಗೆ 'ನೋ' ಅಂದುಬಿಡಿ. ಒಮ್ಮೆ ನೀವು ಯಾವಾಗ 'ನೋ' ಎನ್ನಬೇಕು ಅನ್ನುವುದನ್ನು ಅರ್ಥಮಾಡಿಕೊಂಡರೆ ಸಮಯ ನಿರ್ವಹಣೆ ಕಷ್ಟವೇನಲ್ಲ.
ಕೊನೆಯ ಕ್ಷಣದ ಅವಸರ ಬಿಡಿ
ಕಾಲೇಜಲ್ಲಿ ಈ ಹಿಂದೆ ಯಾವುದೋ ಒಂದು ಪ್ರಾಜೆಕ್ಟ್ ಕೊಟ್ಟಿದ್ದರು. ಅದಕ್ಕಾಗಿ ತಿಂಗಳು ಸಮಯಾವಕಾಶವೂ ಇತ್ತು. ಆದರೆ, ಕೊನೇ ಕ್ಷಣದಲ್ಲಿ ಆ ಪ್ರಾಜೆಕ್ಟ್ ಪೂರ್ಣಗೊಳಿಸಿದ್ದರಿಂದ ಅದು ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ. ಹಾಗಾಗಿ ಮಾರ್ಕ್ಸ್ ಕೂಡ ಕಡಿಮೆ ಸಿಕ್ಕಿದೆ. ಇಂಥ ಹಿನ್ನಡೆ ಮುಂದೆಯೂ ಆಗುವುದು ಬೇಕೇ? ಬೇಡ ಅಂತಿದ್ದರೆ ಕೊಟ್ಟ ಕೆಲಸವನ್ನು ಮೊದಲೇ ಮುಗಿಸಿಬಿಡಿ. ಹೋಂವರ್ಕ್, ಪ್ರಾಜೆಕ್ಟ್, ಅಸೈನ್‌ಮೆಂಟ್‌ಗಳನ್ನು ಆದಷ್ಟು ಶೀಘ್ರ ಮುಗಿಸಿಬಿಟ್ಟರೆ ನೆಮ್ಮದಿಯೂ ಇರುತ್ತೆ, ತಪ್ಪಾದಲ್ಲಿ ಸರಿಪಡಿಸಿಕೊಳ್ಳಲು ಸಮಯಾವಕಾಶವೂ ಸಿಗುತ್ತದೆ.
ಓದಿಗಷ್ಟೇ ಸೀಮಿತವಾಗದಿರಿ...
ಕಾಲೇಜು ಅಂದ ಮೇಲೆ ತರಲೆ, ಹರಟೆ, ಮೋಜು- ಮಸ್ತಿ ಇದ್ದದ್ದೆ. ಕಾಲೇಜು ಕ್ಯಾಂಪಸ್‌ನಲ್ಲಿ ಗೆಳೆಯರೆಲ್ಲ ಒಟ್ಟಿಗೆ ಸೇರಿದಾಗ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಇಂಥ ಗುಂಪಿನೊಂದಿಗೆ ಕುಳಿತು ಮೋಜು ಮಾಡುವುದು ಯಾರಿಗೆ ಇಷ್ಟವಾಗಲ್ಲ ಹೇಳಿ? ಇಂಥ ಸುವರ್ಣಗಳಿಗೆ ಮತ್ತೊಮ್ಮೆ ಬರುವುದಿಲ್ಲ. ಕಾಲೇಜು ಜೀವನ ಓದಿಗಷ್ಟೇ ಸೀಮಿತವಲ್ಲ. ಅಲ್ಲಿ ಒಂದಷ್ಟು 'ಫನ್' ಕೂಡ ಇರಲೇಬೇಕು. ಅದಕ್ಕೇ ಕಾಲೇಜ್ ಲೈಫ್ ಅನ್ನು ಗೋಲ್ಡನ್ ಲೈಫ್ ಅನ್ನೋದು. ಈ ಲೈಫ್ ಮತ್ತೆ ಸಿಗುವುದಿಲ್ಲ. ಸಿಕ್ಕಾಗ ಮುಕ್ತವಾಗಿ ಎಂಜಾಯ್ ಮಾಡಿಬಿಡಿ. ಒಂದಷ್ಟು ಸಮಯ ಈ ತರ್ಲೆಗಳಿಗೂ ತೆಗೆದಿಡಿ. ಆದರೆ, ನೀವು ಕಾಲೇಜಿಗೆ ಬರುತ್ತಿರುವ ಉದ್ದೇಶವನ್ನು ಮರೆಯಬೇಡಿ.
ಆದ್ಯತೆ ಗುರುತಿಸಿ
ಬದುಕು ಒಂದೇ ರೀತಿ ಇರುವುದಿಲ್ಲ. ಏನಾದರೂ ಒಂದು ಎಡವಟ್ಟುಗಳು ಆಗುತ್ತಲೇ ಇರುತ್ತವೆ. ನಿಮ್ಮ ಕಂಪ್ಯೂಟರ್ ಕೈಕೊಡಬಹುದು. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗೆ... ಜೀವನ ಅಂದಮೇಲೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಸಮಯಪರಿಪಾಲನೆ ಕುರಿತು ಅರಿವಿದ್ದರೆ ಇಂಥ ಸಂಕಷ್ಟದ ಸಂದರ್ಭದಲ್ಲಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಿಲ್ಲ. ಸಮಯಕ್ಕೆ ಮೊದಲೇ ನಮ್ಮ ಕೆಲಸವನ್ನು ಮುಗಿಸಿಬಿಟ್ಟರೆ ಇಂಥ ಸಂದರ್ಭದಲ್ಲೂ ನಿರುಮ್ಮಳವಾಗಿರಬಹುದು.
ನಿದ್ದೆ, ವ್ಯಾಯಾಮ
ಎಷ್ಟೋ ವೇಳೆ ನಮಗೆ ದಿನದ 24 ಗಂಟೆಗಳೂ ಕಡಿಮೆ ಎನ್ನುವಂತೆ ಭಾಸವಾಗಬಹುದು. ಹಾಗಂತ ನಾವು ನಿದ್ದೆ ಬಿಟ್ಟು ಆರೋಗ್ಯ ಹಾಳುಮಾಡಿಕೊಳ್ಳುವುದು ಸರಿಯಲ್ಲ. ಸರಿಯಾದ ಸಮಯ ನಿರ್ವಹಣೆ ಅಂದರೆ ದಿನದ 24 ಗಂಟೆಗಳನ್ನು ಸಮರ್ಥವಾಗಿ ಬಳಸುವುದು. ಕನಿಷ್ಠ 8 ಗಂಟೆ ನಿದ್ರೆ, ವ್ಯಾಯಾಮ, ಆಟ, ಪಾಠಕ್ಕಾಗಿ ಇಂತಿಷ್ಟು ಸಮಯವನ್ನು ಮೀಸಲಿಡುವುದು. ಇದರ ಮಧ್ಯ ಟೀವಿ, ಇಂಟರ್ನೆಟ್, ನಿಮ್ಮ ಹವ್ಯಾಸಕ್ಕಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಈ ಮೂಲಕ ದಿನದ 24 ಗಂಟೆಯನ್ನು ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ, ಓದಿಗೆ ತೊಂದರೆಯಾಗದಂತೆ ಸಮರ್ಥವಾಗಿ ಬಳಸಿಕೊಳ್ಳಬೇಕು.
- ಮಾದ್ವಿ ಎಂ.