ಸರ್ಕಾರಿ ಶಾಲೆ ಎಂದಾಕ್ಷಣ ಬಹುತೇಕರು ಅಸಡ್ಡೆ ತೋರುತ್ತಾರೆ, 'ಗೌರ್ಮೆಂಟ್ ಸ್ಕೂಲಾ?' ಅಂತ. ಗುಣಮಟ್ಟದ ಶಿಕ್ಷಣ ಸಿಗದು. ಕಂಪ್ಯೂಟರ್, ಲ್ಯಾಬ್ ಮತ್ತಿತರ ಮೂಲ ಸೌಲಭ್ಯವಿರದು... ಹೀಗೆ ನಾನಾ ಕೊರತೆಗಳನ್ನು ಮುಂದಿಡುತ್ತಾರೆ. ಇದು ನಿಜ ಕೂಡ. ಆದರೆ, ಸಮುದಾಯ ಹಾಗೂ ಶಿಕ್ಷಕರು ಪರಸ್ಪರ ಕೈಜೋಡಿಸಿದರೆ ಸರ್ಕಾರಿ ಶಾಲೆಯೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಗುರುಮಠಕಲ್ ಪಟ್ಟಣದ ಬಾಲಕಿಯರ ಸರ್ಕಾರಿ ಉರ್ದು ಪ್ರೌಢಶಾಲೆ ಸಾಕ್ಷಿ. ಇದು ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಆತ್ಯಾಧುನಿಕ ಬೋಧನೋಪಕರಣಗಳನ್ನು ಹೊಂದಿ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆಯ ಮುಖ್ಯ ಶಿಕ್ಷಕ ಹಣಮಂತ್ರಾವ್ ಗೋಗ್ಲೆ ಅವರ ಆಸಕ್ತಿ ಹಾಗೂ ಎಸ್‌ಡಿಎಂಸಿ, ಸಾರ್ವಜನಿಕರ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ.
ಏನು ವಿಶೇಷ?
ಅತ್ಯಾಧುನಿಕ ಶೈಕ್ಷಣಿಕ ತಂತ್ರಜ್ಞಾನವಾದ ಅಲ್ಟ್ರಾಶಾರ್ಟ್ ಥ್ರೂ ಪ್ರೊಜೆಕ್ಟರ್ ಅನ್ನು ಈ ಶಾಲೆಯಲ್ಲಿ ಅಳವಡಿಸಲಾಗಿದೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದ್ದು, ಉಳಿದ ಅಗತ್ಯ ಸಲಕರಣೆಗಳನ್ನು ಬೆಂಗಳೂರು ಹಾಗೂ ಹೈದರಾಬಾದ್‌ನಿಂದ ತರಿಸಿಕೊಳ್ಳಲಾಗಿದೆ. ಇದರಿಂದಾಗಿ ಶಾಲೆಯ ಎಲ್ಲ ಮಕ್ಕಳು ಸ್ಮಾರ್ಟ್ ಶಿಕ್ಷಣ ಪಡೆಯುತ್ತಿದ್ದಾರೆ. ಕಪ್ಪು ಹಲಗೆ ಮೇಲೆ ಚಾಕ್ ಪೀಸ್‌ನಿಂದ ಬರೆಯುವ ಅಗತ್ಯ ಇಲ್ಲಿಲ್ಲ. ತರಗತಿಗಳ ಪಠ್ಯ ಆಧರಿಸಿ ಸುಮಾರು 3500 ಫೈಲ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಟಚ್‌ಸ್ಕ್ರೀನ್ ಪರದೆಯಲ್ಲಿ ಆಯ್ಕೆ ಮಾಡಿದ ಕೂಡಲೇ ಆ ಫೈಲ್‌ಗಳು ತೆರೆದುಕೊಳ್ಳುತ್ತವೆ. ಕಂಪ್ಯೂಟರ್ ಇದ್ದಲ್ಲಿಗೆ ಹೋಗುವ ಅಗತ್ಯವೂ ಇರುವುದಿಲ್ಲ. ಮಲ್ಟಿ ಮೀಡಿಯಾ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನೂ ಪರದೆಯಲ್ಲಿ ನೋಡುವುದು ಸಾಧ್ಯವಿದೆ.
ದಾನಿಗಳಿಂದ ಹಣ ಸಂಗ್ರಹ
ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಮುಖ್ಯಶಿಕ್ಷಕ ಹಣಮಂತ್ರಾವ ಗೋಗ್ಲೆ ಅವರ ವಿಶೇಷ ಆಸಕ್ತಿ ಫಲವಾಗಿ ಈ ಸ್ಮಾರ್ಟ್ ತರಗತಿ ಆರಂಭವಾಗಿದೆ. ಇಂಥ ಒಂದು ಯೋಜನೆ ಸಿದ್ಧವಾದಾಗ ಹಣ ಸಂಗ್ರಹಿಸುವುದೇ ಚಿಂತೆಯಾಗಿತ್ತು. ಯಾಕೆಂದರೆ, ಈ ಯೋಜನೆಗೆ ತಗಲುವ ವೆಚ್ಚ ರು. 2.25 ಲಕ್ಷ. ಆದರೆ, ಎಸ್‌ಡಿಎಂಸಿ ಅಧ್ಯಕ್ಷ ಮೊಹ್ಮದ್ ಸೈಯದುದ್ದೀನ್ ಹಾಗೂ ವಿಜ್ಞಾನ ಶಿಕ್ಷಕ ಜಾಹಿರೊದ್ದೀನ್ ಅವರು ಬೆನ್ನೆಲುಬಾಗಿ ನಿಂತು ಕೇವಲ ಮೂರು ತಿಂಗಳಲ್ಲಿ ಅಗತ್ಯ ಸಂಪನ್ಮೂಲಗಳನ್ನು ದಾನಿಗಳಿಂದ ಸಂಗ್ರಹಿಸಿದರು. ಅದರ ಫಲವಾಗಿ ಇಂದು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲೇ ಪ್ರಥಮ ಪ್ರಯತ್ನವಾಗಿ ಇಲ್ಲಿ ಸ್ಮಾರ್ಟ್ ಕ್ಲಾಸ್ ತಲೆಯೆತ್ತಿ ನಿಂತಿದೆ.
ಕಲಿಕೆಯಲ್ಲಿ ಆಸಕ್ತಿ
ಸ್ಮಾರ್ಟ್ ತರಗತಿ ನಡೆಸಲು ಶಾಲೆಯ ಎಲ್ಲಾ ಶಿಕ್ಷಕರು ತರಬೇತಿ ಪಡೆದುಕೊಂಡಿದ್ದಾರೆ. 8ರಿಂದ 10ನೇ ತರಗತಿವರೆಗೆ 144 ವಿದ್ಯಾರ್ಥಿನಿಯರಿದ್ದು, 8 ಶಿಕ್ಷಕರಿದ್ದಾರೆ. ಮೂರೂ ತರಗತಿಗಳಿಗೆ ಸತತ 7 ಅವಧಿಗಳನ್ನು ನಡೆಸಲು ವೇಳಾಪಟ್ಟಿ ಸಿದ್ಧ ಮಾಡಿಕೊಳ್ಳಲಾಗಿದೆ. ಇದಕ್ಕೆ ಅನುಗುಣವಾಗಿ ತರಗತಿ ನಡೆಸಲಾಗುತ್ತಿದೆ. ಸ್ಮಾರ್ಟ್ ತರಗತಿ ಆರಂಭವಾದಾಗಿನಿಂದ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಹಾಜರಾತಿ ಸಂಖ್ಯೆಯೂ ಈ ವರ್ಷ ಗಣನೀಯವಾಗಿ ಹೆಚ್ಚಿದೆ.
ಪೂರಕ ವಾತಾವರಣ
ಇಂದಿನ ಮಕ್ಕಳಿಗೆ ತಂತ್ರಜ್ಞಾನದ ಕುರಿತು ಹೆಚ್ಚಿನ ಕುತೂಹಲವಿದೆ. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಕಲ್ಪಿಸಿದಾಗ ಅವರಲ್ಲಿ ಕಲಿಕೆ ಕುರಿತು ಆಸಕ್ತಿ ಮೂಡುತ್ತದೆ.
- ಹಣಮಂತ್ರಾವ್, ಮುಖ್ಯಶಿಕ್ಷಕ
- ನಾರಾಯಣ ಹೆಗಡೆ