ಇವಳು ಜಾರ್ಜಿಯಾ ಹ್ಯಾಡ್ಲಿ. 6 ವರ್ಷದ ಬಾಲೆ. ಇವಳ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ? ಡೇರಿಯಸ್. ತನ್ನಷ್ಟೇ ಎತ್ತರದ ಡೆರಿಯಸ್‌ನನ್ನು ಎತ್ತಿ ಮುದ್ದಾಡಬೇಕೆಂಬ ಆಸೆ. ಆದರೆ ಆಕೆಯ ಪುಟ್ಟ ಕೈಗಳಿಂದ ಸಲೀಸಾಗಿ ಎತ್ತಿ ಮುದ್ದಾಡುವುದು ಕಷ್ಟದ ಕೆಲಸ. ನಾಯಿಗಿಂತಲೂ ದೊಡ್ಡ ಗಾತ್ರ ಹೊಂದಿರುವ ಡೇರಿಯಸ್ ಎಂದರೆ ಹ್ಯಾಡ್ಲಿಗಷ್ಟೇ ಅಲ್ಲ, ಮನೆ ಮಂದಿಗೆಲ್ಲ ಪ್ರೀತಿ. ಜಗತ್ತಿನ ಅತಿ ದೊಡ್ಡ ಮೊಲ ಎಂಬ ಖ್ಯಾತಿ ಹೊಂದಿರುವ ಡೇರಿಯಸ್‌ಗೆ ತಿನ್ನುವುದೆಂದರೆ ಎಲ್ಲಿಲ್ಲದ ಉತ್ಸಾಹ.
ಡೇರಿಯಸ್ 5ನೇ ವಯಸ್ಸಿಗೆ ಗಿನ್ನೆಸ್ ಬುಕ್‌ನಲ್ಲಿ ಹೆಸರು ದಾಖಲಿಸಿತು. ಡೆರಿಯಸ್ ಒಂದು ವರ್ಷದಲ್ಲೇ ಡಜನ್ ಕ್ಯಾರೆಟ್ ತಿನ್ನುವ ಮಟ್ಟಿಗೆ ಬೆಳೆದುಬಿಟ್ಟಿತು. ತಿಂಗಳಿಗೆ 360 ಕ್ಯಾರೆಟ್, 30 ಸೇಬು, 15 ಕ್ಯಾಬೇಜ್ ಬೇಕೇ ಬೇಕು. ಅಂದರೆ, ವರ್ಷದಲ್ಲಿ 4000ಕ್ಕೂ ಹೆಚ್ಚು ಕ್ಯಾರೆಟ್‌ಗಳನ್ನು ತಿನ್ನುತ್ತದೆ. ಗಾತ್ರದಲ್ಲಿ ನಾಯಿಯನ್ನೂ ಮೀರಿಸುತ್ತದೆ.
ಮನೆಮಂದಿಯಂತೆ ಮನೆ ತುಂಬಾ ಓಡಾಡಿಕೊಂಡಿರುತ್ತದೆ. ಸೋಫಾದಲ್ಲಿ ಕುಳಿತು ಟಿವಿ ನೋಡುತ್ತದೆ. ದಿನವಿಡೀ ಏನಾದರೊಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತದೆ. ತಿನ್ನಲು ಹವಣಿಸುವುದೇ ಹೆಚ್ಚು. ಡೇರಿಯಸ್‌ನ ಒಡೆಯ ಎನ್ನಟ್ ಎಡ್ವರ್ಸ್ ಹೇಳುವಂತೆ ವರ್ಷಕ್ಕೆ ಇದಕ್ಕಾಗಿ 2000 ಡಾಲರ್ ಖರ್ಚು ಮಾಡುತ್ತಾನಂತೆ. ಅಷ್ಟು ಖರ್ಚಾದರೂ ಎಡ್ವರ್ಸ್ ಬೇಸರಿಸಿಕೊಂಡಿಲ್ಲ. ಸದಾ ಚಟುವಟಿಕೆಯಿಂದಿರುವ ಡೆರಿಯಸ್‌ನನ್ನು ಹ್ಯಾಡ್ಲಿಯಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಡೆರಿಯಸ್‌ನನ್ನು ನೋಡಲು ಬರುವ ಅಭಿಮಾನಿಗಳು ಹೆಚ್ಚಿದ್ದು ಅತಿಥಿ ಸತ್ಕಾರಕ್ಕೇ ಹೆಚ್ಚಿನ ಖರ್ಚು ಬೀಳುತ್ತಿರುವುದು ಸುಳ್ಳಲ್ಲ!