ಬಣ್ಣದ ಕೊಡೆಯನು ಹಿಡಿದು ಕೈಯಲಿ
ಬೇಬಿಯು ಬಂದಳು ಜಂಭದಲಿ
ಚಿಣ್ಣರು ಕೊಡೆಯನೆ ನೋಡುತ ನಿಂತರು
ಆ ಕಾಮನಬಿಲ್ಲೆ ಅದು ಎಂದು
ಕೊಡೆಯನು ಮುಟ್ಟಲು ಬಂದವರ
ದರ್ಪದಿ ದೂರಕೆ ದೂರಿದಳು
ನನ್ನದು ಸುಂದರ ಕೊಡೆಯಿದು
ಎನ್ನುತ ತಾನೇ ಬೀಗಿದಳು
ಬಣ್ಣದ ಕೊಡೆಯನು ಗರಗರ ತಿರುಗಿಸಿ
ಚಿಣ್ಣರ ಕಣ್ಣಿಗೆ ಹಬ್ಬವ ನೀಡುವಳು
ಛತ್ರಿಯಂತೆಯೆ ತಾನು ಗಿರಗಿರ ತಿರುಗಿದಳು
ಜಿಗಿದು ಕುಣಿದು ನಲಿದಾಡಿದಳು
ಗಾಳಿಯು ರಭಸದಿ ಬೀಸಲು
ಬಾನಿಗೆ ಒಮ್ಮೆಲೆ ಹಾರಿದಳು
ಅಯ್ಯೋ ನನ್ನನು ಹಿಡಿಯಿರಿ ಗೆಳೆಯರೆ
ಎನ್ನುತ ಬೇಬಿಯು ಚೀರಿದಳು
ಹಾರುತ ಏರುತ ತೇಲಿದಳು
ಗಾಳಿಯ ರಭಸಕೆ ಓಲಾಡಿದಳು
ಗೆಳೆಯರೆಲ್ಲರು ಮರವೇರಿದರು
ಹಾಗೋ ಹೀಗೋ ಬೇಬಿಯ ಹಿಡಿದರು
ವಿದ್ಯಾ ಅರಮನೆ