ಕೆಲಸಗಳ್ಳರಿದ್ದಾರೆ ಎಚ್ಚರಿಕೆ!
'ನಿದ್ದೆ ಬಂದವರನ್ನು ಎಬ್ಬಿಸಬಹುದು, ಆದರೆ, ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲು ಕಷ್ಟ'
ಗುಂಪಿನಲ್ಲಿ ಗೋವಿಂದರಾಗಿ, ಆಲಸಿಗಳಾಗಿ, ತಾವು ತಟಸ್ಥರಾಗುವುದಲ್ಲದೆ, ಸುತ್ತಮುತ್ತಲಿನವರನ್ನೂ ದಾರಿ ತಪ್ಪಿಸಿ ಖುಷಿ ಪಡುವ ಧೋರಣೆಗೆ ಇದು ಉತ್ತಮ ಉಪಮೆ ಎನಿಸುತ್ತದೆ.
ಹೌದಲ್ವೆ... ಕಾಲೇಜಿನಲ್ಲಿ ಸೀಟು ಪಡೆಯಲು ಮಾಡುವ ಹರಸಾಹಸ, ಕಲಿತ ಮೇಲೆ ಕೆಲಸ ಕಲಿಯಲು ಮಾಡುವ ಸರ್ಕಸ್ ಅನ್ನು, ಕಷ್ಟವನ್ನು ಸೀಟೋ, ಕೆಲಸವೋ ಸಿಕ್ಕಿದ ಮೇಲೆ ಮರೆಯುವುದು, ಅಂಡರ್ ಎಸ್ಟಿಮೇಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಎಂಟ್ರಿ ಪಡೆಯುವವರೆಗೆ ಇರುವ ಉತ್ಸಾಹ ನಂತರವೂ ಮುಂದುವರಿಯದೆ ಆಲಸ್ಯವಾಗಿ ಬದಲಾದರೆ, ಅದು ಭವಿಷ್ಯಕ್ಕೆ ದೂರಗಾಮಿಯಾಗಿ ಕಲ್ಲು ಹಾಕುವುದರಲ್ಲಿ ಸಂಶಯವಿಲ್ಲ. ಕೆಲಸ ಕದಿಯುವುದು, ಕಾಲೇಜಿನಲ್ಲಿ ಕ್ಲಾಸ್‌ಗೆ ಬಂಕ್ ಹಾಕುವುದು ಮೊದ ಮೊದಲು ತಮಾಷೆಯಾಗಿ ಆರಂಭವಾಗುತ್ತದೆ. ಲೆಕ್ಚರರನ್ನೋ, ನಮ್ಮ ಬಾಸನ್ನೋ ಕಣ್ಣು ತಪ್ಪಿಸಿ ಮೂರ್ಖರನ್ನಾಗಿಸುವ ವಿಚಿತ್ರ ತೃಪ್ತಿ ಸಿಗಬಹುದು. ಹೋಗ್ತಾ ಹೋಗ್ತಾ ಆಲಸ್ಯ ಅಥವಾ ಉಡಾಫೆ ಚಟವಾಗಿ ಬದಲಾಗುತ್ತದೆ. 20-30 ಮಂದಿ ಕೆಲಸ ಮಾಡುವ ಕಚೇರಿಯಲ್ಲೋ, 50-60 ಮಂದಿ ವಿದ್ಯಾರ್ಥಿಗಳಿರುವ ತರಗತಿಯಲ್ಲೋ ಇಂಥ ಇಬ್ಬರು, ಮೂವರು ನಡುವೆಯೆಲ್ಲೋ ಕುಳಿತು ಮೊಬೈಲ್‌ನಲ್ಲಿ ಮೆಸೇಜ್ ಮಾಡುತ್ತಲೋ, ಚಾಟ್ ಮಾಡುತ್ತಲೋ, ಅಥವಾ ಚೀಟಿ ಪಾಸ್ ಮಾಡುತ್ತಲೋ, ಯಾರನ್ನೋ ದೂರುತ್ತಲೋ, ಹರಟೆ ಹೊಡೆಯುತ್ತಲೋ ಕುಳಿತು ಆ ಕ್ಷಣಕ್ಕೆ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು.
ಗುಂಪಿನಲ್ಲಿ ಕೆಲಸ ನಡೆಯುತ್ತಿರಬೇಕಾದರೆ, ಯಾರೋ ಒಬ್ಬಿಬ್ಬರು ಕೆಲಸಗಳ್ಳತನ ಮಾಡುತ್ತಿದ್ದರೆ ಆ ಕ್ಷಣಕ್ಕೆ ಅದು ಗೊತ್ತಾಗಲಾರದು. ಆದರೆ, ಸಂದರ್ಭ ಅದೇ ಥರ ಇರಬೇಕಾಗಿಲ್ಲ. ಬದಲಾಗುವ ಪರಿಸ್ಥಿತಿಯಲ್ಲಿ ಒಬ್ಬರೇ ಎಲ್ಲವನ್ನೂ ನಿಭಾಯಿಸುವ ಸಂದರ್ಭ ಬಂದರೆ, ಆಗ ಕೆಲಸ ಕದಿಯುವ ಚಟ ಸುಲಭವಾಗಿ ಬೆಳಕಿಗೆ ಬರಬಹುದು.
ಕಾಲೇಜಿನಲ್ಲೂ ಅಷ್ಟೇ, ಯಾರೋ ಹೇಳುತ್ತಾರೆಂದು ಕಾರಣವೇ ಇಲ್ಲದೆ, ಕ್ಲಾಸ್ ಬಂಕ್ ಮಾಡಿದರೆ, ನಾಳೆ ಹಾಜರಿ ಕೊರತೆಯಾಗಿ ಪರೀಕ್ಷೆಗೆ ಕೂರಲಾಗದಿದ್ದರೆ, ಅದನ್ನು ಅನುಭವಿಸುವವರು ಯಾರು? ಒಂದು ವರ್ಷವೇ ಹಾಳಾಗುವುದಿಲ್ಲವೇ? ಸಂಸ್ಥೆಗಳ ಕೆಲಸಗಾರರೂ ಅಷ್ಟೇ, ಈ ಕ್ಷಣಕ್ಕೆ ನಾನು ಕೆಲಸ ಮಾಡದಿರುವುದು ಯಾರಿಗೂ ಗೊತ್ತಾಗದು ಎಂದು ಕಣ್ಣು ತಪ್ಪಿಸಿ ಬಚಾವಾದರೂ ನಾಳೆ ನಿಮ್ಮನ್ನು ನೀವು ನಿರೂಪಿಸುವಂಥ
ಚಾಲೆಂಜಿಂಗ್ ಸಂದರ್ಭಗಳಲ್ಲಿ ಕೆಲಸ ಕದಿಯುವ ಚಟ ಕೈಕೊಟ್ಟೇ ಕೊಡುವುದು ಖಚಿತ. ಮಾತ್ರವಲ್ಲ, ವೈಯಕ್ತಿಕವಾಗಿ ನಾವು ಬೆಳೆಯುವುದೇ ಇಲ್ಲ. ಕರ್ತವ್ಯವಿಮುಖರಾಗುವುದು ಮಾತ್ರವಲ್ಲ, ನಾಳೆ ಸಮಾಜಕ್ಕೋ, ಕೆಲಸ ಮಾಡುವ ಸಂಸ್ಥೆಗೋ ಆಸ್ತಿಯಾಗಿ ಉಳಿಯುವುದೇ ಇಲ್ಲ. <
ಕೆಲಸಗಳ್ಳರ ಮನಸ್ಥಿತಿ ಒಂಥರಾ ಪ್ರೇಮಿಗಳ ಹಾಗೆ. ಪ್ರೇಮಿಗಳು ಮೊದ ಮೊದಲು, ತಮ್ಮ ಚಲನವಲನವನ್ನು ಯಾರೂ ಗಮನಿಸ್ತಾ ಇಲ್ಲ ಅಂದ್ಕೋತಾರೆ. ಆದರೆ, ಹೋಗ್ತಾ ಹೋಗ್ತಾ ಓಡಾಟ ಜೋರಾಗಿ ಎಲ್ಲರಿಗೂ ಬಹಿರಂಗವಾದ್ರೂ ಮತ್ತೆ ಅವರು ತಲೆ ಕೆಡಿಸಿಕೊಳ್ಳೋದಿಲ್ಲ.
= ಕ್ಲಾಸ್‌ಗೆ ಚಕ್ಕರ್ ಹಾಕುವವರು, ಕೆಲಸ ಕದಿಯೋರು ತಾವು ಮಾತ್ರ ಹಾಳಾಗುವುದಲ್ಲ. ಅಕ್ಕಪಕ್ಕದೋರನ್ನು ಕ್ಯಾಂಟಿನ್‌ಗೋ, ಸಿನಿಮಾಗೋ ಕರೆದೊಯ್ದು, ಲೆಕ್ಚರರ್ ವಿರುದ್ಧ ಎತ್ತಿ ಕಟ್ಟಿ, ಸೀರಿಯಸ್ ಆಗಿ ಕೆಲಸ ಮಾಡ್ತ ಇರೋ ಸಹೋದ್ಯೋಗಿ ಜೊತೆಗೂ ಪಟ್ಟಾಂಗ ಶುರು ಮಾಡಿ, ಅವರನ್ನೂ ಹೊಂಡಕ್ಕೆ ಬೀಳಿಸ್ತಾರೆ. ಇಂಥವರ ಬಗ್ಗೆ ಎಚ್ಚರ ಇರಲಿ.
= ಬದುಕಿನಲ್ಲಿ ಅಪರೂಪಕ್ಕೆ ಅವಕಾಶಗಳು ಸಿಗ್ತವೆ. ಅವನ್ನು ಸದುಪಯೋಗ ಮಾಡಿ, ನಮ್ಮನ್ನು ನಾವು ನಿರೂಪಿಸಲು ಸಿಕ್ಕ ಅವಕಾಶಗಳನ್ನು ಆಲಸ್ಯದ ಕೈಗೆ ಕೊಟ್ಟು ಹಾಳು ಮಾಡಬಾರದು ಎಂಬ ಪ್ರಜ್ಞೆ ಅಗತ್ಯ. ಕಾಲೇಜಿಗೆ ಸೀಟು ಸಿಕ್ಕಲು ಎಷ್ಟು ಕಷ್ಟವಾಗಿತ್ತು, ಒಂದು ಕೆಲ್ಸ ಸಿಗಲಪ್ಪಾ ಎಂದು ಎಷ್ಟು ಟೆನ್ಶನ್ ಮಾಡ್ಕೊಂಡಿದ್ದೆವು ಎಂಬುದು ನಮಗೆ ಎಂಟ್ರಿ ಸಿಕ್ಕ ಬಳಿಕವೂ ನೆನಪಿನಲ್ಲಿರಬೇಕು.
= ನಮ್ಮ ಅಸಹಜ ನಡುವಳಿಕೆ ಯಾರಿಗೂ ಗೊತ್ತಾಗೋದಿಲ್ಲ. ನಾನು ಯಾರ ಕಣ್ಣಿಗೂ ಮಂಕುಬೂದಿ ಎರಚಬಲ್ಲೆ ಎಂಬ ಮೊಂಡು ಧೈರ್ಯ ಬೇಡ. ನಮ್ಮನ್ನೂ ಸದಾ ಗಮನಿಸಲು ಎಲ್ಲ ಕಡೆ ವ್ಯವಸ್ಥೆಗಳಿರುತ್ತವೆ. ಇದು ಸ್ಪರ್ಧಾತ್ಮಕ ಯುಗ, ನೀನಲ್ಲದಿದ್ದರೆ ಇನ್ನೊಬ್ಬ ಎಂಬ ಸ್ಪರ್ಧೆ ಇರುವಾಗ, ಅಂತಿಮವಾಗಿ ಇಂಥ ಆಲಸ್ಯಕ್ಕೆ ಬಲಿಯಾಗುವವರು ನಾವೇ ಎಂಬ ಸಣ್ಣದೊಂದು ಭಯವೂ ಅಗತ್ಯ.
-ಕೃಷ್ಣಮೋಹನ ತಲೆಂಗಳ
kmohant.gmail.com