ಅಮೆರಿಕದ ನಾಯಿಗಳು ಹುಲಿಗಳಂತೆ, ಝೀಬ್ರಾಗಳಂತೆ ಮೈತಳೆಯುತ್ತಿವೆ. ಕೆಲವು ಚಿತ್ರ ವಿಚಿತ್ರದ ಕಲಾಕೃತಿಗಳಿಗೆ ರೂಪಾಂತರಗೊಂಡಿವೆ. ಕೆಲವು ನಾಯಿಗಳು ಸಂದೇಶಗಳನ್ನು ಹೊತ್ತು ತಿರುಗುತ್ತಿವೆ. ಎಲ್ಲಾ ಪೆಟ್ ಪೇಂಟ್ ಪ್ರಭಾವ!
ಪೆಟ್ ಪೇಂಟ್ ಬಳಕೆಗೆ ತಂದಿದ್ದು ಅಬೆ ಗಿಯರಿ ಎಂಬಾತ. ಈತ ಕ್ಯಾಲಿಫೋರ್ನಿಯ ಪ್ರಾಂತ್ಯದ ಕಾಪ್ರಿಂಟ್ರಿಯಾದ ಯುವ ವ್ಯಾಪಾರಿ. 2 ವರ್ಷಗಳ ಹಿಂದೆ ಆತ ಒಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೀತಿಯ ಹುಡುಗಿ ಮತ್ತು ಬಣ್ಣ ಬಣ್ಣದ ನಾಯಿಗೂ ಏನಪ್ಪಾ ಸಂಬಂಧ ಅಂತಾನಾ? ಸಂಬಂಧ ಇದೆ! ತನ್ನ ಪ್ರೇಮ ನಿವೇದನೆಗೆ ಅಬೆ ಗಿಯರಿ ನಾಯಿಯೊಂದರ ನೆರವು ಪಡೆದುಕೊಂಡ. ನಾಯಿಯ ದೇಹದ ಮೇಲೆ ಬಣ್ಣ ಬಣ್ಣದ ಅಕ್ಷರಗಳಲ್ಲಿ ತನ್ನನ್ನು ಮದುವೆಯಾಗುತ್ತೀಯ? ಎಂಬ ಸಂದೇಶ ಬರೆದು ಆಕೆಯ ಬಳಿಗೆ ಕಳುಹಿಸಿಬಿಟ್ಟ. ಆಕೆ ಸಮ್ಮತಿಸಿದಳೋ, ಸುಮ್ಮನೆ ನಕ್ಕಳೋ... ಅದಲ್ಲ ವಿಚಾರ.
ವಿಸ್ಮಯ ನೋಡಿ, ಅಬೆಗೆ ನಾಯಿ ಮೇಲೆ ಬಣ್ಣ ಬಳಿಯುವ ಹಾಬಿ ಹುಟ್ಟಿತು. ತನ್ನ ಕಲಾಪ್ರತಿಭೆಯನ್ನು ನಾಯಿಗಳ ಮೇಲೆ ಹೇರಲು ಶುರುಮಾಡಿಬಿಟ್ಟ. ಅದಕ್ಕಾಗಿ 'ಪೆಟ್ ಪೇಂಟ್' ಎಂಬ ಹೊಸ ಉತ್ಪನ್ನ ತಯಾರಿಸಿದ. ಜಗತ್ತಿನ ಮೊದಲ ಪೆಟ್ ಪೇಂಟ್ ಎಂಬ ಖ್ಯಾತಿಯೂ ದಕ್ಕಿತು.
ನೋಡನೋಡುತ್ತಿದ್ದಂತೆ ಪೆಟ್ ಪೇಂಟ್ ಸಾಕುಪ್ರಾಣಿ ಪ್ರಿಯರ ಮನಸೂರೆಗೊಂಡಿತು. ತಮ್ಮಿಷ್ಟದ ಪ್ರಾಣಿಗಳನ್ನೂ ಬಣ್ಣಬಣ್ಣದಿಂದ ನೋಡುವ ಅಭಿಲಾಶೆ ಹೆಚ್ಚಿತು. ದೊಡ್ಡ ಉದ್ಯಮವೇ ಆಯಿತು! 35 ವರ್ಷದ ಅಬೆ ಈ ಅಚ್ಚರಿಯ ಬೆಳವಣಿಗೆ ಕಂಡು 'ಅಬ್ಬಾ..!' ಎಂದು ನಿಟ್ಟುಸಿರು ಬಿಡುತ್ತಿದ್ದಾನೆ.
ಪೆಟ್ ಪೇಂಟ್ ಅನ್ನು ಸ್ಪ್ರೇ ಕ್ಯಾನುಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿದೆ. ಒಂದು ಕ್ಯಾನಿನ ಬೆಲೆ 10 ಡಾಲರ್. ನಾಯಿಗಳ ಮೈ ಮೇಲೆ ಬೇರೆ ಬೇರೆ ಚಿತ್ರ ಮೂಡಿಸಲು ಸ್ಟೆನ್ಸಿಲ್ ಪಡಿಯಚ್ಚುಗಳೂ ಲಭ್ಯ. ಮೈಗೆ ಹಚ್ಚಿದ 20 ಸೆಕೆಂಡುಗಳಲ್ಲಿ ಬಣ್ಣ ಆರುವುದರಿಂದ ಚರ್ಮಕ್ಕೆ ಹಾನಿಯಿಲ್ಲ. ನೀರಿನಿಂದ ತೊಳೆದರೆ ಅಳಿಸಿಹೋಗುತ್ತದೆ.
ಅಬೆ ತಯಾರಿಸಿದ ಪೆಟ್ ಪೇಂಟ್‌ನ ಹಬೆ ಏನಾದರೂ ಭಾರತಕ್ಕೆ ತಲುಪಿದರೆ ಬೀದಿನಾಯಿಗಳ ಮೇಲೆಲ್ಲ 'ನಿಮ್ಮ ಮತ---- ಪಕ್ಷಕ್ಕೆ!' ಎಂಬ ಪ್ರಚಾರ ಬರಹಗಳೇ ಕಾಣಬಹುದು!
- ಸುಭಾಸ ಯಾದವಾಡ