ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಯುವಜನ/ಮಕ್ಕಳು

....ಲೈಕ್ಡ್ ಯುರ್ ಫೋಟೋ

Vishwanath S
Updated On : 30 May 2014, 3:58 am

- ಎಲ್ಲೋ ಓದಿದ್ದು.
ಹೌದಲ್ವೇ? ಸಂಪರ್ಕ ಮಾಧ್ಯಮಗಳು ಸುಧಾರಣೆಗೊಂಡು ಅಂಗೈ ಅಗಲದ ಮೊಬೈಲ್ ಹಿಡ್ಕೊಂಡು ಪ್ರಧಾನಿಯಿಂದ ಹಿಡಿದು ಪೆಟ್ಟಿಗೆ ಅಂಗಡಿ ವ್ಯಾಪಾರಿ ತನಕ ಯಾರಿಗೆ ಬೇಕಾದರೂ ಮೆಸೇಜ್ ಕಳುಹಿಸಬಲ್ಲ, ತಕ್ಷಣ ಪ್ರತಿಕ್ರಿಯೆಯನ್ನು ಚಿತ್ರ/ವಿಡಿಯೋ ಸಹಿತ ಪಡೆಯಬಲ್ಲ ಕಾಲದಲ್ಲಿದ್ದೇವೆ.
ವಾಟ್ಸಾಪ್, ಫೇಸ್‌ಬುಕ್, ಹ್ಯಾಂಗೌಟ್‌ಗಳೆಲ್ಲಾ ಸಂವಹನ ಸಾಧ್ಯತೆಯನ್ನು ವೇಗವಾಗಿಸಿವೆ. ಆದರೆ ಸಂವಹನದ ಹಿಂದಿನ ನೈಜ ಕಾಳಜಿಯನ್ನೋ, ನೈಜ ಭಾವನೆಯನ್ನು ಪ್ರತಿನಿಧಿಸಲು ವೇದಿಕೆ ಆಗಿದೆ ಅನಿಸುತ್ತಿದೆಯೇ? 'ಕಾಲ ಕಳೆಯುವ' ಸಾಧನವಾಗಿಯೇ ಬಹುತೇಕ ಬಳಕೆಯಾಗುತ್ತಿರುವ ಆ್ಯಪ್‌ಗಳೆಲ್ಲಾ ಯಾಂತ್ರಿಕ ಭಾವನೆಗಳು, ಭ್ರಮೆ ಹುಟ್ಟಿಸುವ ಜನಪ್ರಿಯತೆ ಹರಡಲು ವಾಹಕವಾಗುತ್ತಿವೆ.
ಇಲ್ಲವಾದರೆ, ಸಂವಹನ ಎಷ್ಟೇ ಮುಂದುವರಿದರೂ ಮನಸ್ಸುಗಳ ನಡುವಿನ ಕಂದರಗಳನ್ನು ಜೋಡಿಸುವಲ್ಲಿ ಈ ಆ್ಯಪ್‌ಗಳು ಸೋಲುತ್ತಿವೆ.
ಸ್ವಲ್ಪ ಯೋಚಿಸಿ... ನಿಮ್ಮ ಅಕ್ಕ-ಪಕ್ಕ ಹೋಗುವವರು, ಕೂರುವವರು, ದಿನಾ ನಿಮ್ಮೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವವರು, ಕೈಕೊಟ್ಟು, ಬೆನ್ನುತಟ್ಟಿ ಮಾತನಾಡುವವರು, ಬೈಟೂ ಕಾಫಿಗೆ ಕಂಪನಿ ಕೊಡುವವರು ಕೂಡಾ ಎಷ್ಟೋ ದಿನದ ಬಳಿಕವೂ ನಿಮ್ಮ ಪಾಲಿಗೆ ಒಗಟಾಗಿ, ಒಂದು ಅಂತರ ಇಟ್ಕೊಂಟು ವ್ಯವಹರಿಸುವವರ ಹಾಗೆ, ಅಥವಾ ದಿಢೀರ್ ಅಂತ ಒಂದು ದಿನ ನಿಮ್ಮಿಂದ ಮಾನಸಿಕವಾಗಿ ತುಂಬಾ ದೂರ ಹೋಗಿ ವ್ಯವಹರಿಸುವವರ ಥರ ಕಾಣುವುದು ಯಾಕೆ?
ಅದಕ್ಕೇ ಹೇಳಿದ್ದು... ಈ ಸಂಪರ್ಕ ಜಾಲಗಳು ಸಂವಹವನ್ನು ವೇಗವಾಗಿ ದಾಟಿಸಬಹುದು. ಆದರೆ, ಮನಸ್ಸನ್ನು ಬಗೆದು ಅಲ್ಲಿರುವ ಕಾಳಜಿಯೋ, ಪ್ರೀತಿಯೋ, ವಿಶ್ವಾಸವನ್ನೋ ದಾಟಿಸಲು ಅವೆಲ್ಲಾ ಬೇಕಾಗಿಲ್ಲ. ಅರ್ಥೈಸಿಕೊಳ್ಳುವ ಮನಸ್ಸಿದ್ದರೆ ಸಾಕಾಗುತ್ತದೆ.
ಎಷ್ಟೋ ಬಾರಿ, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರಕ್ಕೆ ಎಷ್ಟು ಲೈಕ್ಸ್ ಬರುತ್ತದೆ, ಎಷ್ಟು ಕಮೆಂಟ್ಸ್ ಹಾಕುತ್ತಾರೆ ಎಂದು ಕಾಯುವುದರಲ್ಲೇ ದಿನವಿಡಿ ಕಳೆದು ಹೋಗುತ್ತಿದೆ. ಫೇಸ್‌ಬುಕ್ ಬ್ರೌಸ್ ಮಾಡುವ ಮನಸ್ಸುಗಳ (ಅರ್ಥಾತ್ ಫ್ರೆಂಡ್ಸ್) ಪೈಕಿ ಎಷ್ಟು ಮಂದಿ ಚಿತ್ರಗಳನ್ನು ನಿಜವಾಗಿ, ನೋಡಿ ಅಳೆದು-ತೂಗಿ ಲೈಕ್ ಮಾಡುತ್ತಾರೆ? ಅಲ್ಲಿ ಕಾಣುವ ಲೈಕ್‌ಗಳ ಹಿಂದೆ ಎಷ್ಟರ ಮಟ್ಟಿಗೆ ಮೆಚ್ಚುವ ಗುಣವಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಮನಸ್ಸು ಯಾಕೋ ಲೈಕ್‌ಗಳ ಸಂಖ್ಯೆಯ ಮೇಲೆ ಆ ಪೋಸ್ಟ್ ಗೆದ್ದಿತೋ, ಸೋತಿತೋ ಎಂಬ ಪ್ರಶ್ನೆಯನ್ನು ಹುಡುಕುತ್ತಿರುತ್ತದೆ. ಒಳಮನಸ್ಸಿಗೆ ಗೊತ್ತಿರುತ್ತದೆ, ಎಲ್ರೂ ಮನಸ್ಸಿಟ್ಟು ಪೋಸ್ಟ್‌ಗಳನ್ನು ನೋಡಿಯೇ ಲೈಕ್ ಮಾಡಿರುವುದಲ್ಲ, ಯಾಂತ್ರಿಕವಾಗಿ ಬೆರಳುಗಳು ಲೈಕ್ ಪ್ರೆಸ್ ಮಾಡುತ್ತಿರುತ್ತವೆ ಅಂತ. ಆದರೂ...
ವಾಟ್ಸ್‌ಆ್ಯಪ್‌ಗಳಲ್ಲಿ ಬರುವ ತರಲೆ ಪೋಸ್ಟ್‌ಗಳನ್ನು ಬೇಕೆಂದೋ, ಬೇಡವೆಂದೋ ಫಾರ್ವರ್ಡ್ ಮಾಡುತ್ತಲೇ ಇರುತ್ತೇವೆ. ಎಷ್ಟು ಮಂದಿ ಅವನ್ನೆಲ್ಲಾ ಸಾವಧಾನವಾಗಿ ಓದಿ ಖುಷಿ ಪಡುತ್ತಾರೆ ಹೇಳಿ? ಅಲ್ಲಿನ ವ್ಯಂಗ್ಯದಿಂದಲೋ, ಟೀಕೆಗಳಿಂದಲೋ ಎಷ್ಟು ಮಂದಿ ಸುಧಾರಿಸುತ್ತಾರೆ ಹೇಳಿ? ಆದರೂ ನಾವೊಂದು 'ವ್ಯಸ್ತ ಪ್ರಪಂಚವನ್ನು' ಸೃಷ್ಟಿಸಿ, ಅದರೊಳಗೆ ಪಾತ್ರವಾಗಿ, ಪುಟಗಳನ್ನು ಬೆರಳುಗಳಿಂದ ತೀಡುತ್ತಲೇ ಇರುತ್ತೇವೆ.
ಎಂದೋ ಸಿಕ್ಕುವ ಗೆಳೆಯನ ಜೊತೆ ಗಂಟೆಗಟ್ಟಲೆ ಹರಟುತ್ತಾ ಕಾಫಿ ಕುಡಿಯುವುದಕ್ಕೂ, ಬಿಡುವು ಮಾಡಿ ನಿಮ್ಮ ಸ್ನೇಹಿತೆಗೆ ಐದಾರು ಪುಟ ಪತ್ರ ಬರೆಯುವುದರಲ್ಲೂ ಇರುವ ತೊಡಗಿಸಿಕೊಳ್ಳುವಿಕೆ ಈ ಆ್ಯಪ್‌ಗಳಲ್ಲಿದೆ ಎಂದು ಅನಿಸುತ್ತಾ?
ಇವುಗಳ ನಡುವೆ ವ್ಯಸ್ತರಾಗುವ ನಮಗೆ ಯಾವುದಕ್ಕೂ ಪುರುಸೊತ್ತಿಲ್ಲ ಎಂಬ ನೆಪ ಬೇರೆ. ಈಗಲೂ ದಿನಕ್ಕೆ 24 ಗಂಟೆಗಳೇ ಇವೆ. ನಮ್ಮ ಕೆಲಸಗಳನ್ನು ಹಗುರಗೊಳಿಸಲು ಸಾಕಷ್ಟು ತಂತ್ರಜ್ಞಾನವೂ ಎದುರಿಗಿವೆ. ಆದರೂ, ನಮಗೊಂದು ಪತ್ರ ಬರೆಯಲು, ಸ್ನೇಹಿತರೊಂದಿಗೆ ಆರಾಮವಾಗಿ ಕೂತು ಮಾತನಾಡಲು ಟೈಂ ಇಲ್ಲ ಎಂದಾದರೆ, ಅದಕ್ಕೆ 'ಕಾಲ' ಕಾರಣವೋ, ಕಾಲಪುರುಷರಂತಿರುವ ನಮ್ಮ ಮನಸ್ಥಿತಿ ಕಾರಣವೋ ಯೋಚಿಸಬೇಕು.
ವರ್ತಮಾನ ಬದಲಾಗುತ್ತಿರುತ್ತವಂತೆ ವಾಹಕಗಳ ಬದಲಾವಣೆ ಸರ್ವೇ ಸಾಮಾನ್ಯ. ಆದರೆ, ಸಂದೇಶಗಳನ್ನು ಮನಸ್ಸಿನಿಂದ ಮನಸ್ಸಿಗೆ ನಾಟುವಂತೆ ಮುಟ್ಟಿಸಲು ವಾಹಕ ಬದಲಾದರೆ ಸಾಲದು, ವಾಹಕ ಬಳಸುವ ಮನಸ್ಸುಗಳ ಕಾಳಜಿ ಬದಲಾಗಬೇಕು. ತಂತ್ರಜ್ಞಾನ ಬಳಕೆಯ ಪ್ರಸ್ತುತತೆ ಅರಿತು ಬಳಸಿದರೆ, ಬಳಸುವುದಕ್ಕೂ ಅರ್ಥ ಬಂದೀತು. ಇಲ್ಲವಾದಲ್ಲಿ 'ಸ್ಪಂದಿಸುವ', ನಂಬುವ, ವಿಶ್ವಾಸ ಇರಿಸುವ ಸ್ನೇಹಿತರಾಗುವ ಬದಲು ನಮಗೆ ಬಂದಿದ್ದನ್ನು 'ಫಾರ್ವರ್ಡ್‌' ಮಾಡುವಲ್ಲಿಗೆ ಸೀಮಿತರಾಗುವ ಅಪಾಯವಿದೆ!


-ಕೃಷ್ಣಮೋಹನ ತಲೆಂಗಳ.
 kmohant@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement