ಕಳೆಯದಿರಲಿ ಗೆಳೆತನ ಮರೆಯದಿರಿ ಒಳ್ಳೆತನ
Friends are the family you choose...
ಹೌದು. ವಾಸ್ತವದಲ್ಲಿ ಗೆಳೆಯರೇ ನಮ್ಮ ಎರಡನೇ ಕುಟುಂಬ. ವೈಯಕ್ತಿಕ ಕಷ್ಟ- ಸುಖದ ವೇಳೆ ನೆರವಿಗೆ ಬರುವವರು ಆಪ್ತ ಸ್ನೇಹಿತರಷ್ಟೇ. ಹೆಗಲ ಮೇಲೆ ಕೈ ಹಾಕಿ ಅಡ್ಡಾಡಿದಾಕ್ಷಣ ಎಲ್ಲರೂ ನಮ್ಮ ಹೃದಯಕ್ಕೆ ಹತ್ತಿರದವರು, ಜೀವದ ಗೆಳೆಯರಲ್ಲ. ಹೆಗಲ ಮೇಲಿರುವ ದುಃಖದ ಹೊರೆ ಕಡಿಮೆ ಮಾಡುವವರೇ ನಿಜವಾದ ಗೆಳೆಯರು. ಅಂಥ ಗೆಳೆತನವನ್ನು ನಾವು ಗಳಿಸಬೇಕು, ಉಳಿಸಿಕೊಳ್ಳಬೇಕು. ಅದೇನೇ ಇದ್ದರೂ ಕೆಲವೊಂದು ಪರಿಸ್ಥಿತಿಯಲ್ಲಿ ಗಾಢ ಗೆಳೆತನದಲ್ಲೂ ಬಿರುಕು ಮೂಡಬಹುದು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು, ಗೆಳೆತನವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವ ಕುರಿತು ಇಲ್ಲಿದೆ ಒಂದಷ್ಟು ಸಲಹೆಗಳು...
ಆಂತರಿಕ ವಿಚಾರ ಕೆದಕದಿರಿ
ಅಪ್ರಿಯ ಸತ್ಯಗಳನ್ನು ಸ್ನೇಹಿತರ ಮುಂದೆ ಪ್ರಸ್ತಾಪಿಸದಿರಿ. ಅವು ನಿಮ್ಮ ಮನಸ್ಸಿಗೆ ಮಾತ್ರವಲ್ಲ, ಸ್ನೇಹಿತರ ಮನಸ್ಸಿಗೂ ಗೊಂದಲ ಹುಟ್ಟಿಸುತ್ತವೆ. ಅಂಥ ವಿಚಾರಗಳನ್ನು ಮುಚ್ಚಿಟ್ಟುಕೊಳ್ಳುವುದೇ ಒಳಿತು.
ವಾದ ಬೇಡ
ವಾದದಿಂದ ವಿವಾದವಾಗುವುದೇ ಹೆಚ್ಚು. ಅಂಥ ವಾದದಿಂದ ದೂರ ಇರುವುದು ಒಳಿತು. ವಾದವು ಸಂಬಂಧಗಟ್ಟಿಗೊಳಿಸುವಂತಿದ್ದರೆ ಒಳಿತು.
ನಿರೀಕ್ಷೆ ಅತಿಯಾಗದಿರಲಿ
ಮಾಡುವ ಸಹಾಯ ಮತ್ತು ಬೇಡಿಕೆಗಳಿಗೆ ಸಂಬಂಧಿಸಿ ಗೆಳೆಯನ ಮೇಲೆ ನಿರೀಕ್ಷೆಗಳು ಬೇಡ. ಅತಿಯಾದ ನಂಬಿಕೆ ನಿರೀಕ್ಷೆಗಳು ಬಯಕೆಯನ್ನು ಹೆಚ್ಚಿಸಬಹುದು. ನಂಬಿಕೆ ಇರಲಿ, ನಿರೀಕ್ಷೆ ಬೇಡ. ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಮನಸ್ಸಿದ್ದರೂ ಕಾರ್ಯರೂಪಕ್ಕಿಳಿಸುವಲ್ಲಿ ವಿಫಲವಾದಾಗ ಗೆಳೆಯನನ್ನು ತೆಗಳದಿರಿ.
ಸಂಬಂಧಗಳ ವಿಚಾರದಿಂದ ದೂರ ಇರಿ
ಗೆಳೆಯನ ಒಡಲಾಳದ ಸತ್ಯಗಳು ಗೊತ್ತಿದ್ದರೂ ತಿಳಿಯದ ಹಾಗೇ ಇರುವುದು ಒಳ್ಳೆಯ ನಡೆ. ಮಾಡುವ ತಪ್ಪುಗಳಿಗೆ ಅವರ ಬಳಿಯೇ ಉತ್ತರ ಇರುತ್ತವೆ. ಅಥವಾ ಅವರೇ ಪರಿಹರಿಸಿಕೊಳ್ಳುತ್ತಾರೆ.
ದಾಂಪತ್ಯ ವಿಚಾರಗಳಿಗೆ ಕಿವಿಗೊಡದಿರಿ
ನಿಮ್ಮ ಸ್ನೇಹಿತರ ದಾಂಪತ್ಯ ವಿಚಾರಗಳಿಗೆ ಕಿವಿಗೊಡದಿರಿ. ಕೋಪದಿಂದಿರುವ ಗೆಳೆಯನಿಗೆ ತಾಳ್ಮೆಯ ಮಾತು ಹೇಳಿ. ಆದರೆ, ಅವರಾಡುವ ಹಾಗೆ ಹೆಂಡತಿ/ಪತಿಯನ್ನು ತೆಗಳುವ ಪ್ರಯತ್ನಕ್ಕೆ ಮುಂದಾಗಬೇಡಿ. ಏಕೆಂದರೆ ಗಂಡಹೆಂಡತಿ ನಡುವೆ ಜಗಳ ಸಾಮಾನ್ಯ. ಮುಂದೆ ಅವರು ಒಂದಾದಾಗ ನಿಮ್ಮನ್ನು ತಿರಸ್ಕಾರದಿಂದ ಕಾಣಬಹುದು.
ಅವಲಂಬನೆ ಕಡಿಮೆ ಇರಲಿ
ಎಲ್ಲದಕ್ಕೂ ಸ್ನೇಹಿತರ ಮೇಲೆ ಅವಲಂಬನೆಯಾಗಬೇಡಿ. ಸಾಂದಂರ್ಭಿಕ ಬಳಕೆ, ಅವಶ್ಯಕತೆಗೆ ಅವಲಂಬನೆಯೂ ಸ್ವಾರ್ಥ ಎನಿಸಬಹುದು. ಆದರೆ ಅವರಿಗೆ ಇಂಥ ಅನಿವಾರ್ಯತೆ ಬಂದಲ್ಲಿ ಸಹಾಯಕ್ಕೆ ಮುಂದಾಗಿ. ಗೊತ್ತಿದ್ದೂ ಅವರಾಗಿಯೇ ಕೇಳುವವರೆಗೆ ಸಹಾಯಕ್ಕೆ ಹೋಗದಿರುವುದು ಒಳ್ಳೆಯದಲ್ಲ.
ಸ್ವಾರ್ಥಕ್ಕೆ ಬಳಕೆ ಬೇಡ
ನಿಮ್ಮ ಸ್ವಾರ್ಥ ಸಾಧನೆಗೆ ಗೆಳೆಯರನ್ನು ಬಳಸಿಕೊಳ್ಳಬೇಡಿ. ನಿಮ್ಮ ವೈಯಕ್ತಿಕ ದ್ವೇಷಕ್ಕೆ ಗೆಳೆತನವನ್ನು ಎಳೆದು ತರಬೇಡಿ.
ಅಮೂಲ್ಯ ದಿನಗಳನ್ನು ಮರೆಯದಿರಿ
ಹುಟ್ಟು ಹಬ್ಬ, ಸಂಭ್ರಮದ ಆಚರಣೆ ದಿನಗಳಲ್ಲಿ ಶುಭಾಶಯಗಳನ್ನು ತಿಳಿಸಿ. ದುಃಖದ ವಿಚಾರಗಳ ಬಗ್ಗೆ ಗೊತ್ತಿದ್ದರೂ ಅವುಗಳನ್ನು ಪುನರಾವರ್ತಿಸದಿರಿ.
ಗಿಫ್ಟ್ ಬಳಕೆಯಲ್ಲಿ
ಗೆಳೆತನಕ್ಕೆ ನಂಬಿಕೆಯೇ ಗಿಫ್ಟ್. ಹಾಗಂತ ಗೆಳೆಯರ ನಡುವೆ ಉಡುಗೊರೆಯ ಕೊಡು- ತೆಗೆದುಕೊಳ್ಳುವಿಕೆ ಇರಬಾರದೆಂದೇನೂ ಅಲ್ಲ. ಅವು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಗೆಳೆತನವನ್ನು ಸದಾ ಹಸಿರಾಗಿರುವಂತೆ ನೋಡಿಕೊಳ್ಳುತ್ತವೆ.
ಕೇಳುವ ಸೌಜನ್ಯ ಇರಲಿ
ಗೆಳೆಯರು ಅಭಿಪ್ರಾಯ ವ್ಯಕ್ತಪಡಿಸುವಾಗ ಕೇಳುವ ಸೌಜನ್ಯ ಇರಲಿ. ಅವರು ಸಂಪೂರ್ಣ ಹೇಳಿದ ನಂತರ ನಿಮ್ಮ ಅಭಿಪ್ರಾಯ ತಿಳಿಸಿ. ಅವರು ಹೇಳುವ ಮೊದಲೇ ಬಾಯಿ ತೆರೆಯಬೇಡಿ.
ಪೂರ್ಣ ಹೇಳುವುದನ್ನು ಕೇಳಿ
ಮಧ್ಯ ಬಾಯಿ ಹಾಕುವುದರಿಂದ ಹೇಳಬೇಕಿರುವ ವಿಷಯ ಮರೆಮಾಚುವ ಸಾಧ್ಯತೆ ಉಂಟು. ಅರ್ಧ ಸತ್ಯ, ತಪ್ಪು ತಿಳಿವಳಿಕೆಯಿಂದ ಸಲಹೆ ಕೇಳುವಾಗ ತಪ್ಪಾಗುವ ಅವಕಾಶಗಳಿವೆ. ಹೀಗಾಗಿ ಅವರು ಹೇಳುವ ವಿಚಾರವನ್ನು ಪೂರ್ಣ ಕೇಳಿ. ಕೆಲವೊಮ್ಮೆ ನಿಮ್ಮ ಆಗಿನ ಸಂದರ್ಭಕ್ಕೆ ಅವು ಸರಿ ಎನಿಸಬಹುದು.
ಹಣಕಾಸು ವ್ಯವಹಾರ ಬೇಡ
ತಾಮ್ರದ ನಾಣ್ಯ ತಾಯಿ ಮಕ್ಕಳನ್ನು ಅಗಲಿಸಿತು ಎಂಬ ಮಾತೇ ಇದೆ. ಹಣಕಾಸು ವ್ಯವಹಾರಗಳು ಗೆಳೆತನದ ಆಯುಷ್ಯ ಕಡಿಮೆ ಮಾಡುತ್ತವೆ. ಗೆಳೆತನದ ನಡುವೆ ವ್ಯವಹಾರವನ್ನು ದೂರ ಇರಿಸಿದಷ್ಟೂ ಒಳಿತು.
ಸಮಾರಂಭಗಳಿಗೆ ಹಾಜರಾಗಿ
ಸ್ನೇಹಿತರ ಕುಟುಂಬ ಸಂಭ್ರಮದಲ್ಲಿ ಭಾಗಿಯಾಗಿ. ಸ್ನೇಹಿತರ ಅನುಪಸ್ಥಿತಿ ಅವರ ಮನಸ್ಸಿನ ಆಳದಲ್ಲಿ ನಿರ್ಲಕ್ಷ್ಯ ಮೂಡಿಸಬಹುದು. ಮುಂದಿನ ನಿಮ್ಮ ಖುಷಿಯ ಕ್ಷಣಗಳಲ್ಲಿ ಅವರೂ ದೂರ ಇರಬಹುದು.
ಗೊತ್ತಿರುವ ಸತ್ಯಗಳ ಕುರಿತು ಸ್ಪಷ್ಟೀಕರಣ ಬೇಡ
ಹೇಳದಿರುವ ವಿಚಾರಗಳನ್ನು ತಿಳಿದುಕೊಳ್ಳುವ ಸಾಹಸಕ್ಕೆ ಹೋಗದಿರಿ. ಅವರಾಗಿಯೇ ಹೇಳಿದರೆ ಮಾತ್ರ ಕೇಳುವ ವ್ಯವಧಾನವಿರಲಿ. ಸ್ನೇಹಿತರ ಕೆಲವು ರಹಸ್ಯ ಸಂಗತಿಗಳು ನಿಮಗೆ ಗೊತ್ತಿದ್ದರೂ, ಅವರ ಮುಂದೆ ಪ್ರಸ್ತಾಪಿಸಿ ಮುಜುಗರ ಅನುಭವಿಸುವಂತೆ ಮಾಡಬೇಡಿ.
-ಮಂಜುನಾಥ ಪ್ಯಾಟಿ