ಬಿಸಿಯೂಟದಲ್ಲಿನ್ನು ರಾಗಿ ಮುದ್ದೆ, ಜೋಳದ ರೊಟ್ಟಿ
ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿ ಊಟದಲ್ಲಿ ಇನ್ನು ಮುಂದೆ ಬರೀ ಅನ್ನವನ್ನಷ್ಟೆ ಸೇವಿಸಬೇಕಿಲ್ಲ. ರಾಗಿ, ಮೆಕ್ಕೆಜೋಳ ಹಾಗೂ ಜೋಳದ ಆಹಾರವನ್ನೂ ಸೇವಿಸಬಹುದು.
ನವದೆಹಲಿ: ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿ ಊಟದಲ್ಲಿ ಇನ್ನು ಮುಂದೆ ಬರೀ ಅನ್ನವನ್ನಷ್ಟೆ ಸೇವಿಸಬೇಕಿಲ್ಲ. ರಾಗಿ, ಮೆಕ್ಕೆಜೋಳ ಹಾಗೂ ಜೋಳದ ಆಹಾರವನ್ನೂ ಸೇವಿಸಬಹುದು.
ಪ್ರಾದೇಶಿಕ ಬೆಳೆ ಮತ್ತು ಪೌಷ್ಟಿಕಾಂಶಗಳ ಅಗತ್ಯಕ್ಕನುಗುಣವಾಗಿ ರಾಗಿ, ಜೋಳ ಮತ್ತು ಮೆಕ್ಕೆ ಜೋಳವನ್ನು ಬಳಸಲು ಮಾನವ ಸಂಪನ್ಮೂಲ ಸಚಿವ ಪಲ್ಲಂ ರಾಜು ಸೂಚಿಸಿದ್ದಾರೆ.
ಬಿಸಿಯೂಟ ಯೋಜನೆ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಪಲ್ಲಂರಾಜು, ಆಯಾ ಭಾಗದಲ್ಲಿ ಬೆಳೆಯುವ ಬೆಳೆಯನ್ನಾಧರಿಸಿ ಬಿಸಿ ಊಟದ ಒದಗಿಸುವುದು ಸೂಕ್ತ. ಇದರಿಂದ ಪೌಷ್ಟಿಕಾಂಶ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಅವರ ಸೂಚನೆ ತ್ವರಿತವಾಗಿ ಜಾರಿಯಾಗಿದ್ದೇ ಆದರೆ, ರಾಜ್ಯದ ಮೈಸೂರು ಭಾಗದಲ್ಲಿ ರಾಗಿ ಮುದ್ದೆಯೂ, ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿಯೂ ಮಕ್ಕಳಿಗೆ ದಕ್ಕಬಹುದು.
ಲೋಪಗಳನ್ನು ಬಿಡಿಸಿಟ್ಟ ಸಕ್ಸೆನಾ: ಸಭೆಯಲ್ಲಿ ಪಾಲ್ಗೊಂಡಿದ್ದ ಸುಪ್ರೀಂ ಕೋರ್ಟ್ ನೇಮಿಸಿರುವ ಕಮಿಷನರ್ ಪ್ರೊ.ಎನ್.ಸಿ. ಸಕ್ಸೆನಾ ಬಿಸಿಯೂಟದ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಿಡಿಸಿಟ್ಟರು. ಸಕಾಲದಲ್ಲಿ ಆಹಾರ ಧಾನ್ಯ ಪೂರೈಕೆ ಆಗುತ್ತಿಲ್ಲ, ಆಹಾರ ನಿಗಮ ಕಳಪೆ ಮಟ್ಟದ ಆಹಾರಧಾನ್ಯ ನೀಡುತ್ತಿದೆ, ಶಾಲಾ ಸಮಿತಿಗಳಿಗೆ ಸಕಾಲದಲ್ಲಿ ಹಣಪಾವತಿಸದೇ ಇರುವುದು ಅಷ್ಟೆ ಅಲ್ಲ, ಅಡಿಗೆಯವರಿಗೂ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕು ಎಂದರು.
ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಕಾಯ್ದುಕೊಳ್ಳಲು ದೇಶದಲ್ಲಿರುವ 8 ಲಕ್ಷ ಆಶಾ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಕೆ. ದೇಸಿರಾಜು ಸಲಹೆ ನೀಡಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎ) ಮಾನ್ಯತೆ ಪಡೆದ 300 ಪ್ರಯೋಗಾಲಯಗಳು ದೇಶಾದ್ಯಂತ ಇದ್ದು ಅವುಗಳನ್ನು ಗುಣಮಟ್ಟ ಪರಿಶೀಲನೆಗೆ ಬಳಸಿಕೊಳ್ಳಬಹುದು ಎಂದು ಎಫ್‌ಎಸ್‌ಎಸ್‌ಎ ಅಧ್ಯಕ್ಷರು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಕಾರ್ಯದರ್ಶಿ ಆರ್. ಭಟ್ಟಾಚಾರ್ಯ ಅವರು ಕೇರಳ ಮಾದರಿಯಲ್ಲಿ ಇ-ಪಾವತಿ ವ್ಯವಸ್ಥೆ ಜಾರಿಗೆ ತರಲು ಯತ್ನಿಸಲಾಗುತ್ತಿದೆ. ಇದರಿಂದ ಸಕಾಲದಲ್ಲಿ ಶಾಲಾ ಸಮಿತಿಗಳಿಗೆ ಹಣ ಒದಗಿಸಲು ಸಾಧ್ಯ ಎಂದು ತಿಳಿಸಿದರು.
ಸಭೆಯಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಯುವಜನ ಇಲಾಖೆ, ಅಸ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳ ಭಾಗವಹಿಸಿದ್ದರು.