ರಾಜಿನಾಮೆ ಪರ್ವ
ಆಂಧ್ರಪ್ರದೇಶ ವಿಭಜನೆ ಆಡಳಿತಾರೂಢ ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ಸರ್ಕಾರದ ಪತನಕ್ಕೆ ಪರೋಕ್ಷವಾಗಿ ದಾರಿ...
ಹೈದರಾಬಾದ್: ಆಂಧ್ರಪ್ರದೇಶ ವಿಭಜನೆ ಆಡಳಿತಾರೂಢ ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ಸರ್ಕಾರದ ಪತನಕ್ಕೆ ಪರೋಕ್ಷವಾಗಿ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ರಾಜ್ಯವಿಭಜನೆ ಖಂಡಿಸಿ ಗುರುವಾರ ಮತ್ತೊಬ್ಬ ಸಚಿವ ಘಂಟಾ ಶ್ರೀನಿವಾಸ ಗುರುವಾರ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ತೆಲಂಗಾಣ ರಾಜ್ಯ ವಿರೋಧಿಸಿ ರೆಡ್ಡಿ ಸಂಪುಟದಿಂದ ಈವರೆಗೆ ಇಬ್ಬರು ಸಚಿವರು ರಾಜಿನಾಮೆ ನೀಡಿದಂತಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ನ 14 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇನ್ನೂ 14 ಸಚಿವರು ಹಾಗೂ 15 ಶಾಸಕರು ರಾಜಿನಾಮೆ ನೀಡುವ ಸಾಧ್ಯತೆ ಇದೆ. ಇದರಿಂದ ರೆಡ್ಡಿ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಿಸುತ್ತಿದೆ.
ಈ ನಡುವೆ, ಕೇಂದ್ರ ಸರ್ಕಾರ ಮಾತ್ರ ತೆಲಂಗಾಣ ರಾಜ್ಯ ರಚನೆ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಪಪಡಿಸಿದೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆ ಆ.5ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡನೆಯಾಗುವುದಿಲ್ಲ. ಆದರೆ, ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಕೇಂದ್ರ ತನ್ನ ನಿರ್ಧಾರ ಬದಲಿಸುವುದಿಲ್ಲ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ತಿಳಿಸಿದ್ದಾರೆ. ನೂತನ ರಾಜ್ಯ ಆರು ತಿಂಗಳೊಳಗೆ ಅಸ್ತಿತ್ವಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.
2ನೇ ದಿನವೂ ಪ್ರತಿಭಟನೆ
ತೆಲಂಗಾಣ ರಾಜ್ಯ ರಚನೆ ವಿರುದ್ಧ ಸೀಮಾಂಧ್ರದಲ್ಲಿ ಸಿಡಿದ ಆಕ್ರೋಶದ ಕಿಡಿ ಎರಡನೇ ದಿನವಾದ ಗುರುವಾರವೂ ತಣ್ಣಗಾಗಿಲ್ಲ. ರಾಯಲಸೀಮಾ ಮತ್ತು ಕರಾವಳಿಯಲ್ಲಿ ಸಂಯುಕ್ತ ಆಂಧ್ರದ ಪರ ವಿವಿಧ ಸಂಘಟನೆಗಳು ಪ್ರತಿಭಟನೆ, ರ್ಯಾಲಿ ನಡೆಸಿವೆ. ಸರ್ಕಾರಿ ಬಸ್ಸುಗಳಿಗೆ ಅಲ್ಲಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿವೆ. ಕರ್ನೂಲ್ನಲ್ಲಿ ಕಾಂಗ್ರೆಸ್ ನಾಯಕರಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದ್ದು, ಸರ್ಕಾರಿ ಕಚೇರಿಗಳ ಮೇಲೆ ಕಲ್ಲುತೂರಲಾಗಿದೆ. ಅನಂತಪುರದಲ್ಲಿ ನಡೆದ ಕಲ್ಲುತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.