ಹೊಸ ಟೆಂಡರ್ ಸುಸೂತ್ರ
ಕಸ ವಿಲೇವಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ಮುಂದುವರೆಸದಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂಬ ಹಳೆ ಗುತ್ತಿಗೆದಾರರ...
ನವದೆಹಲಿ: ಕಸ ವಿಲೇವಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ಮುಂದುವರೆಸದಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂಬ ಹಳೆ ಗುತ್ತಿಗೆದಾರರ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ವಜಾ ಮಾಡಿದೆ.
ತಕ್ಷಣವೇ ಹೊಸದಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಸ ವಿಲೇವಾರಿ ಮಾಡುವಂತೆ ಬಿಬಿಎಂಪಿಗೆ ತ್ರಿಸದಸ್ಯ ಪೀಠವು ಸೂಚಿಸಿದೆ. ಇದರೊಂದಿಗೆ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಅಡ್ಡಿ ಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ ಹಳೆ ಗುತ್ತಿಗೆದಾರರ ತಕರಾರು ಕೊನೆಗೊಂಡಂತಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಲಬೀರ್ಸಿಂಗ್ ಚೌಹ್ವಾಣ್, ನ್ಯಾಯಮೂರ್ತಿ ಎಸ್.ಜೆ. ಮುಖ್ಯೋಪಾಧ್ಯಾಯ ಹಾಗೂ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಹಳೆಗುತ್ತಿಗೆದಾರರ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿತು.
ಕಸ ವಿಲೇವಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆಸದಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂಬ ಹಳೆ ಗುತ್ತಿಗೆದಾರರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಕೂಡಾ ವಜಾ ಗೊಳಿಸಿತ್ತು. ಅಲ್ಲದೇ ದುರುದ್ದೇಶದಿಂದ ಹೊಸದಾಗಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು.
ಗುತ್ತಿಗೆ ಅವಧಿ 2010 ಮಾರ್ಚ್ 14ಕ್ಕೆ ಕೊನೆಗೊಂಡಿದ್ದರೂ ಒಂದಿಲ್ಲೊಂದು ತಾಂತ್ರಿಕ ನೆಪ ತೆಗೆದು ಬಿಬಿಎಂಪಿ ಹೊಸ ಟೆಂಡರ್ ಪ್ರಕ್ರಿಯೆ ನಡೆಸದಂತೆ ಹಳೆಗುತ್ತಿಗೆದಾರರು ತಕರಾರು ಮಾಡುತ್ತಲೇ ಬಂದಿದ್ದರು. ಹೀಗಾಗಿ ಕರ್ನಾಟಕ ಹೈಕೋರ್ಟ್ ಹಳೆ ಗುತ್ತಿಗೆದಾರರ ಅರ್ಜಿಯನ್ನು ವಜಾಗೊಳಿಸಿತ್ತು. ಈಗ ಸುಪ್ರೀಂ ಕೋರ್ಟ್ ಕೂಡಾ ಹಳೆ ಗುತ್ತಿಗೆದಾರರ ಅರ್ಜಿಯನ್ನು ವಜಾಗೊಳಿಸಿದ್ದು, ಹೈಕೋರ್ಟ್ನ ಸೂಚನೆಯಂತೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ತಿಳಿಸಿದೆ. ಬಿಬಿಎಂಪಿ ಪರವಾಗಿ ಹಿರಿಯ ವಕೀಲರಾದ ಕೆ.ಕೆ. ವೇಣುಗೋಪಾಲ್ ಹಾಗೂ ವಿದ್ಯಾಸಾಗರ್ ಅವರು ವಾದ ಮಾಡಿದರು.
- ಕನ್ನಡಪ್ರಭ ಪ್ರತಿನಿಧಿಯಿಂದ