ನೆರೆ ಹೊರೆ
ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಆ.2
ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು ತುಂಗಾ, ಭದ್ರಾ, ಕೃಷ್ಣಾ, ಲಕ್ಷ್ಮಣತೀರ್ಥ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಬಂಬೂ ಬಜಾರ್, ಬಾಲರಾಜ ಘಾಟ್ಗೆ ನೀರು ನುಗ್ಗಿದ್ದರಿಂದ 60 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಮನೆ ಕುಸಿದು ಒಬ್ಬ ಹಾಗೂ ಕೊಡಗು ಜಿಲ್ಲೆ ಕಂಬಳ್ಳಿಯಲ್ಲಿ ಬರೆ ಕುಸಿದು ವೃದ್ಧನೊಬ್ಬ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನ 119 ಮನೆಗಳು ಕುಸಿದಿವೆ. ಬೆಳಗಾವಿ ಜಿಲ್ಲೆಯಲ್ಲಿ 17 ಸೇತುವೆಗಳು ಮುಳುಗಡೆಯಾಗಿವೆ. ಕೆಆರ್ಎಸ್ ಹೊರ ಹರಿವು ಹೆಚ್ಚಾಗಿದ್ದು ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಜಲಾವೃತವಾಗಿದೆ. ಶಿರಾಳಕೊಪ್ಪ- ಶಿಕಾರಿಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ತುಂಗಾ ಜಲಾಶಯದಿಂದ 63000, ಭದ್ರಾ ಜಲಾಶಯದಿಂದ 60000 ಕ್ಯುಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಸ ಸೇತುವೆ, ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿವೆ. ಅಂಬೇಡ್ಕರ್ ಕಾಲೋನಿಗೆನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದ್ದರಿಂದ ಹಾಲಪ್ಪ ವೃತ್ತದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಲಿಂಗನಮಕ್ಕಿ ಜಲಾಶಯಕ್ಕೂ 88 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 47,500 ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ಜೋಗ ಜಲಪಾತ ಅಬ್ಬರಿಸಿ ಧುಮುಕುತ್ತಿದೆ. ಶಿವಮೊಗ್ಗ ಜಿಲ್ಲೆಯ ಆಯನೂರಿನ ಕೋಹಳ್ಳಿ ಕೆರೆ ಭರ್ತಿಯಾಗಿ 20 ಎಕರೆ ಜಲಾವೃತವಾಗಿದೆ. ಗೌರಿ ಹಳ್ಳ ಉಕ್ಕಿ ಹರಿಯುತ್ತಿದ್ದು ಶಿವಮೊಗ್ಗ- ಶಿಕಾರಿಪುರ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸೋಂಪುರದ 50 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ತುಂಗಭದ್ರಾ ನದಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊನ್ನಾಳಿ ಪಟ್ಟಣದ ಬಂಬೂ ಬಜಾರ್, ಬಾಲರಾಜ ಘಾಟ್ ಪ್ರದೇಶದ 60 ಜನರನ್ನು ಟಿ.ಬಿ. ಸರ್ಕಲ್ ಬಳಿ ನಿರ್ಮಿಸಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ದಾವಣಗೆರೆ- ಹಾವೇರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಉಕ್ಕಡಗಾತ್ರಿ, ತುಮ್ಮಿನಟ್ಟೆ ಮಾರ್ಗ ಬಂದ್ ಆಗಿದೆ. ಹರಿಹರ ತಾಲೂಕಿನ ಸಾರಥಿ- ಚಿಕ್ಕಬಿದರಿ, ಗರ್ಭಗುಡು ಸಂಪರ್ಕ ಕಡಿತಗೊಂಡಿದೆ. ಸಾಗರ ತಾಲೂಕಿನಲ್ಲಿ ಗಾಳಿ, ಮಳೆಗೆ 1.50 ಕೋಟಿ ಮೌಲ್ಯದ ಹಾನಿಯಾಗಿದೆ. ಟಿಬಿ ಡ್ಯಾಂನಿಂದ 1.10 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಇಬ್ಬರು ಬಲಿ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪಾಪಯ್ಯ (57) ಮನೆ ಗೋಡೆ ಕುಸಿದು ಮೃತಪಟ್ಟಿದ್ದರೆ, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕಂಬಳ್ಳಿಯಲ್ಲಿ ಬರೆ ಕುಸಿದು ಮಂಜು (58) ಅಸುನೀಗಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುತ್ತಿರುವುದರಿಂದ ಕೊಯ್ನಾ, ವಾರಣಾ, ಕಣೇರ, ಧೂಮ ಜಲಾಶಯಗಳಿಂದ, ರಾಜಾರಾಮ ಮತ್ತು ರಾಜಾಪುರ ಬ್ಯಾರೇಜ್ ಮೂಲಕ 1.47 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಯಬಿಡಲಾಗುತ್ತಿದ್ದು 17 ಸೇತುವೆ, ರಸ್ತೆ ಇನ್ನೂ ನೀರಿನಲ್ಲಿ ಮುಳುಗಿವೆ. ಘಟಪ್ರಭಾ ನದಿಯ ನೀರಿನಿಂದಾಗಿ ಗೋಕಾಕ ತಾಲೂಕಿನ ಗೋಕಾಕ-ಶಿಂಗಳಾಪುರ ಸೇತುವೆ ಹಾಗೂ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಸೇತುವೆ ಜಲಾವೃತಗೊಂಡಿವೆ. ರಾಯಬಾಗ ತಾಲೂಕಿನ ಸಿದ್ದಾಪುರ-ಖೇಮಲಾಪುರ ರಸ್ತೆ, ಖೇಮಲಾಪುರ- ಶಿರಗೂರ ರಸ್ತೆ ಹಾಗೂ ತಂಗಡಿ- ಐನಾಪುರ ರಸ್ತೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ 29 ಮನೆಗಳು ಕುಸಿದಿವೆ.
ಹಳಿ ಮೇಲಿನ ಮಣ್ಣು ತೆರವು: ಹಾಸನ ತಾಲೂಕಿನ ಕೆಂದನ ಮನೆ ಸಮೀಪ ಗುರುವಾರ ರೇಲ್ವೆ ಹಳಿ ಮೇಲೆ ಬಿದ್ದಿದ್ದ ಮಣ್ಣು ತೆರವುಗೊಳಿಸಲಾಗಿದ್ದು ಸಂಚಾರ ಸುಗಮವಾಗಿದೆ. ಗುರುವಾರ ಮಧ್ಯಾಹ್ನ 1ಕ್ಕೆ ಆಗಮಿಸಿದ ಯಶವಂತಪುರ- ಮಂಗಳೂರು ರೈಲು 2 ಗಂಟೆ ಮಾತ್ರ ವಿಳಂಬವಾಗಿ ಹೊರಟಿತು. ಉಳಿದಂತೆ ಯಾವುದೇ ತೊಂದರೆಯಾಗಿಲ್ಲ. ಮಣ್ಣು ಕುಸಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಕಲೇಶಪುರ ರೈಲ್ವೆ ಘಟಕ ಎಂಜಿನಿಯರ್ ನಾಯ್ಡು ತಿಳಿಸಿದ್ದಾರೆ.
ಒಂದೇ ದಿನ 119 ಮನೆ ಕುಸಿತ!
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಶುಕ್ರವಾರ ಒಂದೇ ದಿನ 119 ಮನೆಗಳು ಕುಸಿದಿವೆ. ತುಂಗಭದ್ರಾ, ವರದಾ, ಕುಮುದ್ವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಿರೇಕೆರೂರು ತಾಲೂಕಿನ ತಿಪ್ಪಾಯಿಕೊಪ್ಪ ಸೇತುವೆ ಮುಳುಗಡೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗೇರಸೊಪ್ಪ ಅಣೆಕಟ್ಟೆಯಿಂದ 43000 ಕ್ಯುಸೆಕ್ ನೀರು ಶರಾವತಿ ನದಿಗೆ ಬಿಡಲಾಗುತ್ತಿದ್ದು ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಹೇಮಾವತಿ ಜಲಾಶಯಕ್ಕೆ 52000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೇಮಾವತಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅರಕಲಗೂಡಿನಲ್ಲಿ 7 ಮನೆಗಳು ಕುಸಿದಿವೆ.
ಕಾವೇರಿ ತೀರದಲ್ಲಿ ಪ್ರವಾಹ
ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ 88000 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಶ್ರೀರಂಗಪಟ್ಟಣ ಹೊರವಲಯದ ಕಾವೇರಿ ಕನ್ಯಾ ಗುರುಕುಲ ಧಾಮ, ರಂಗನತಿಟ್ಟು ಪಕ್ಷಿಧಾಮ, ವೆಲ್ಲಸ್ಲಿ ಸೇತುವೆ, ಶ್ರೀನಿಮಿಷಾಂಬ ದೇವಾಲಯ, ಕಾವೇರಿ ಸಂಗಮ, ಗೋಷಾಯಿಘಾಟ್, ಗೂಳಿತಿಟ್ಟು ಸೇರಿದಂತೆ ಇತರ ಪ್ರದೇಶಗಳು ಜಲಾವೃತವಾಗಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದರಿಂದ ಲಕ್ಷ್ಮಣತೀರ್ಥ, ಕಾವೇರಿ ನದಿ ಉಕ್ಕಿ ಹರಿಯುತ್ತಿವೆ. ಭಾಗಮಂಡಲ- ಮಡಿಕೇರಿ, ಭಾಗಮಂಡಲ- ಅಯ್ಯಂಗೇರಿಗಳ ಸಂಪರ್ಕ ರಸ್ತೆ ಕಡಿತಗೊಂಡಿದೆ. ಲಕ್ಷ್ಮಣ ತೀರ್ಥ ನದಿ ಸಮೀಪದ ಕಾನೂರು, ಕೋತೂರು, ನಿಟ್ಟೂರು, ಮಲ್ಲೂರು, ಜಾಗಲೆ, ತಟ್ಟೆಕೆರೆ, ನಿಡುಗುಂಬ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿಡುಗುಂಬ ವ್ಯಾಪ್ತಿಯಲ್ಲಿ ಸುಮಾರು 20 ಕುಟುಂಬಗಳು ದ್ವೀಪ ಪ್ರದೇಶದಲ್ಲಿ ಸಿಲುಕಿ ಸಾರ್ವಜನಿಕ ಸಂಪರ್ಕ ಕಡಿದುಕೊಂಡಿದ್ದಾರೆ. ಮೂರ್ನಾಡು-ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಪಾಲೂರು ಹರಿಶ್ಚಂದ್ರ ದೇವಾಲಯ ಜಲಾವೃತವಾಗಿದೆ.
ಕೊಚ್ಚಿಹೋದ ದೇಗುಲ
ನವದೆಹಲಿ: ನೆರೆಯ ಅಬ್ಬರಕ್ಕೆ ಕೇದಾರನಾಥ ದೇಗುಲ ಹಾನಿಗೀಡಾದ ನೆನಪು ಮಾಸುವ ಮೊದಲೇ ಉತ್ತರಕಾಶಿಯ ಮತ್ತೊಂದು ಪ್ರಸಿದ್ಧ ಮಣಿಕರ್ಣಿಕಾ ದೇವಸ್ಥಾನ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಭಾಗೀರಥಿ ನದಿಯಲ್ಲಿ ಕಾಣಿಸಿಕೊಂಡ ಪ್ರವಾಹಕ್ಕೆ ದೇಗುಲ ನೀರುಪಾಲಾಗಿದೆ. 1991ರಂದು ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಈ ದೇಗುಲವನ್ನು ನಿರ್ಮಿಸಲಾಗಿತ್ತು. ಶ್ರಾವಣ ಮಾಸದಲ್ಲಿ ಈ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತದೆ. ಆದರೆ, ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಭಕ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ, ಕೇದಾರನಾಥದಿಂದ ಹಿಂತಿರುಗುತ್ತಿದ್ದ ಉಪವಿಭಾಗಾಧಿಕಾರಿ ಅಜಯ್ ಅರೋರಾ ಅವರು ಮಂದಾಕಿನಿ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಅವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.
ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಮೇಘಸ್ಫೋಟ: ಮಳೆ, ಪ್ರವಾಹದ ಅಬ್ಬರಕ್ಕೆ ಉತ್ತರಾಖಂಡದ ನೆರೆಯ ರಾಜ್ಯ ಹಿಮಾಚಲ ಪ್ರದೇಶ ಕೂಡ ತತ್ತರಿಸಿದೆ. ಮೇಘಸ್ಫೋಟದಿಂದಾಗಿ ಚನ್ಗುಟ್ನಲ್ಲಿ ಅನೇಕ ರಸ್ತೆ, ಸೇತುವೆ, ಜಾನುವಾರುಗಳು ಕೊಚ್ಚಿಹೋಗಿವೆ. ಹಿಮಾಲಯ ತಪ್ಪಲಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾ ಮತ್ತು ಯಮುನಾ ನದಿ ನೀರಿನಮಟ್ಟ ಏರಿಕೆಯಾಗಿದ್ದು, ಉತ್ತರಪ್ರದೇಶದಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ನದಿತಟದ ನೂರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾಶ್ಮೀರದಲ್ಲೂ ಉತ್ತಮ ಮಳೆಯಾಗುತ್ತಿದ್ದು, ನೆರೆ ಭೀತಿ ಕಾಣಿಸಿಕೊಂಡಿದೆ.
ಉತ್ತರಭಾರತದಲ್ಲಿ ಭೂಕಂಪನ: ಪ್ರವಾಹದ ಅಬ್ಬರದ ನಡುವೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಪಂಜಾಬ್, ಹರ್ಯಾಣ ಮತ್ತು ಹಿಮಾಲಚಲ ಪ್ರದೇಶದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ವಾಡಿಕೆಗಿಂತ ಉತ್ತಮ ಮಳೆ: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಮುಂಗಾರು ಅವಧಿ ಮುಕ್ತಾಯಗೊಳ್ಳಲು ಇನ್ನೂ ಎರಡು ತಿಂಗಳು ಬಾಕಿ ಇದೆ. ಅಷ್ಟರಲ್ಲೇ ದೇಶಾದ್ಯಂತ ಉತ್ತಮ ಮಳೆಯಾಗಿದೆ. ಇದು ಮತ್ತೊಂದು ಬರದ ಭೀತಿ ಎದುರಿಸುತ್ತಿದ್ದ ಸರ್ಕಾರದ ಪಾಲಿಗೆ ನೆಮ್ಮದಿ ನೀಡಿದೆ.
ಸೆ.11ರಿಂದ ಕೇದಾರನಾಥದಲ್ಲಿ ನಿತ್ಯಪೂಜೆ ಆರಂಭ
ಮಹಾಪ್ರವಾಹದಿಂದಾಗಿ ಹಾನಿಗೀಡಾಗಿದ್ದ ಐತಿಹಾಸಿಕ ಕೇದಾರನಾಥ ದೇವಸ್ಥಾನದಲ್ಲಿ ಸ್ಥಗಿತಗೊಂಡಿದ್ದ ನಿತ್ಯಪೂಜೆ ಸೆ.11ರಿಂದ ಆರಂಭವಾಗಲಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಕೇದಾರನಾಥ ದೇವಸ್ಥಾನ ಹಾನಿಗೀಡಾಗಿತ್ತು. ಹಾಗಾಗಿ ದೇವಸ್ಥಾನದಲ್ಲಿ ನಿತ್ಯಪೂಜೆಯನ್ನು ಸ್ಥಗಿತಗೊಳಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.