ಬಿಸಿಸಿಐ ಅಧ್ಯಕ್ಷ ಗಾದಿ ಶ್ರೀನಿಗೆ ಮುಖಭಂಗ
ಬಾಂಬೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಭೆಯಿಂದ ಹಿಂದಕ್ಕೆ ಸರಿದ ಶ್ರೀನಿವಾಸನ್, ದಾಲ್ಮಿಯಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದಾರೆ.
ನವದೆಹಲಿ: ಮತ್ತೆ ಬಿಸಿಸಿಐ ಗಾದಿ ಅಲಂಕರಿಸಲು ಬಂದಿದ್ದ ಎನ್. ಶ್ರೀನಿವಾಸನ್‌ಗೆ ಮುಖಭಂಗವಾಗಿದೆ. ಬಾಂಬೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಭೆಯಿಂದ ಹಿಂದಕ್ಕೆ ಸರಿದ ಶ್ರೀನಿವಾಸನ್, ಜಗನ್‌ಮೋಹನ್ ದಾಲ್ಮಿಯಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದಾರೆ.
ಶುಕ್ರವಾರದ ಕಾರ್ಯಕಾರಿ ಸಭೆಗೆ ಶ್ರೀನಿವಾಸನ್ ಬರಲಿದ್ದಾರೆ, ಅವರೇ ಅಧ್ಯಕ್ಷರಾಗಿ ಮತ್ತೆ ಅಲಂಕರಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಅದರಂತೆ ಶುಕ್ರವಾರ ಬಿಸಿಸಿಐ ಮುಖ್ಯ ಕಚೇರಿ ಬಳಿ ಶ್ರೀನಿವಾಸನ್ ಕಾಣಿಸಿಕೊಂಡಾಗಲೂ ಇದೇ ಅಭಿಪ್ರಾಯ ಮೂಡಿತ್ತು. ಆದರೆ ಮೊದಲಿಗೆ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆದಿದೆ. ಇದರಲ್ಲಿ ಬಿಸಿಸಿಐ ಉಪಾಧ್ಯಕ್ಷ ಅರುಣ್ ಜೇಟ್ಲಿ ಅವರು ಬಾಂಬೆ ಹೈಕೋರ್ಟ್‌ನ ತೀರ್ಪಿನ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬೆಳವಣಿಗೆಗಳ ನಂತರ ಕಾರ್ಯಕಾರಿ ಸಮಿತಿ ಸಭೆಯನ್ನು ರದ್ದುಗೊಳಿಸಲಾಗಿದೆ. ಕಾನೂನು ಅಡೆತಡೆ ಬರುವ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಅಲ್ಲದೆ ಕಾನೂನಿನ ಅಡ್ಡಿ ಬರುತ್ತದೆ ಎಂಬ ಕಾರಣದಿಂದಾಗಿ ಶ್ರೀನಿವಾಸನ್ ಅವರೇ ಸಭೆಯಿಂದ ಹಿಂದಕ್ಕೆ ನಡೆದಿದ್ದಾರೆ.