ಬೆಂಗಳೂರಿನಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರ ಸಾವು
ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು: ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿ ಬಳಿ ಇರುವ ಮೇಲ್ಸೇತುವೆ ಬಳಿ ಈ ಅಪಘಾತ ಸಂಭವಿಸಿದ್ದು, ಕೆ.ಎಂ.ದೊಡ್ಡಿಯ ಸಿದ್ದರಾಜು ಮತ್ತು ಅವರ ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಹೂವಿನ ಅಲಂಕಾರದ ಕೆಲಸ ಮಾಡಿಕೊಂಡಿದ್ದ ಸಿದ್ಧರಾಜು ಅವರು ಪತ್ನಿ ಸಮೇತ ಇಬ್ಬರು ಮಕ್ಕಳೊಂದಿಗೆ ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ನಲ್ಲಿ ತೆರಳುತ್ತಿದ್ದರು. ನಾಯಂಡಹಳ್ಳಿ ಜಂಕ್ಷನ್ ಸಿಗ್ನಲ್ ಬಳಿ ಬೈಕ್ ನಿಂತಿದ್ದಾಗ ಹಿಂದಿನಿಂದ ರಭಸವಾಗಿ ಬಂದ ಕ್ಯಾಂಟರ್ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ನಂತರ ಬೈಕ್ ಮೇಲೆ ಹರಿದ ಕ್ಯಾಂಟರ್ ವಾಹನ ಮುಂದೆ ನಿಂತಿದ್ದ ಮಾರುತಿ ಓಮ್ನಿ ಕಾರಿಗೂ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಮತ್ತಷ್ಚು ಮುಂದೆ ಚಲಿಸಿದ ಕ್ಯಾಂಟರ್ ವಾಹನ ಪಲ್ಟಿ ಹೊಡೆದಿದೆ. ಕ್ಯಾಂಟರ್ ವಾಹನದಲ್ಲಿ ಸುಮಾರು 5ಟನ್ಗೂ ಅಧಿಕ ಕಬ್ಬಿಣದ ಪೈಪುಗಳನ್ನು ಸಾಗಿಸಲಾಗುತ್ತಿತ್ತು. ಕ್ಯಾಂಟರ್ ವಾಹನದ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಮೃತ ಸಿದ್ದರಾಜು ಕುಟುಂಬದ ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಕ್ಯಾಂಟರ್ ವಾಹನ ಚಾಲಕ ಪರಾರಿಯಾಗಿದ್ದು, ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.