ಅಕ್ರಮ ಕಟ್ಟಡ ಕುಸಿದು 2 ಸಾವು
ಕೆಂಗೇರಿ ಉಪನಗರದ ಬಳಿ ಬಂಡೇಮಠಕ್ಕೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರನ್ನು ಬಲಿತೆಗೆದುಕೊಂಡ ಘಟನೆ ..
ಬೆಂಗಳೂರು: ಕೆಂಗೇರಿ ಉಪನಗರದ ಬಳಿ ಬಂಡೇಮಠಕ್ಕೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರನ್ನು ಬಲಿತೆಗೆದುಕೊಂಡ ಘಟನೆ ಇನ್ನೂ ಹಸಿಯಾಗಿರುವಾಗಲೇ ಅಂತಹುದೇ ಮತ್ತೊಂದು ದುರಂತ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಸೇರಿದ ಕೆರೆ ಇದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕುಸಿದಿದೆ. ಜಯನಗರ 1ನೇ ಹಂತ ಸೋಮೇಶ್ವರ ನಗರದ 9ನೇ ತಿರುವಿನಲ್ಲಿ ಬೆಳಗ್ಗೆ 9.05 ರ ವೇಳೆಗೆ ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಅಪಾರ್ಟ್‌ಮೆಂಟ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮತ್ತೊಬ್ಬರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದು, ಅವರೂ ಮೃತಪ್ಟಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರನ್ನು ರಾಯಚೂರು ಮಾನ್ವಿಯ ಕಂಬಳ ಹೊಸೂರಿನ ನಾಗಮ್ಮ (45), ಬಿಹಾರದ ನಿರಂಜನ್ ಮೊಹಂತೋ(22) ಎಂದು ಶಂಕಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಕಾಲು ಕಾಣುತ್ತಿದ್ದು, ಅವರು ಯಾರೆಂಬುದು ಮಂಗಳವಾರ ಕಾರ್ಯಾಚರಣೆ ನಡೆಸಿ ಹೊರತೆಗೆದ ಬಳಿಕವಷ್ಟೇ ತಿಳಿಯಬಹುದಾಗಿದೆ.
ಗಾಯಗೊಂಡಿರುವ 14 ಕ್ಕೂ ಅಧಿಕ ಮಂದಿಗೆ ನಿಮ್ಹಾನ್ಸ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಲ್‌ಕುಮಾರ್ (18), ಲೋಬೋ, ಟಫೀಕ್, ಮಣಿ, ಅಮುಲ್ ಬರ್ಮನ್, ಅಜಯ್, ಲಕ್ಷ್ಮಣ್ ಪಾಸ್ವಾನ್ (45), ಸುಶಾಂತ್ ಬರ್ಮನ್ (18), ಗೋವಿಗೋ ಪಾಸ್ವಾನ್ (18), ಗೋಪಾಲ್ ಪಾಸ್ವಾನ್ (19), ಮೋಹನ್ ಮೆಹ್ತಾ (20), ಮನೋಜ್, ಪ್ರದೀಪ್, ಸಂಜಯ್ (17) ಗಾಯಾಳುಗಳು. ಇವರಿಗೆ ಕೈಕಾಲು, ತಲೆಗೆ ಗಾಯಗಳಾಗಿವೆ. ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿರುವ ಕಾರ್ಮಿಕರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮೊದಲ ಪುಟದಿಂದ ಎಲ್ಲರೂ ಹೊರಗೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.
ತಿಂಡಿ ತಿನ್ನುತ್ತಿದ್ದರು: ಬೆಳಗ್ಗೆ ಕಾರ್ಮಿಕರೆಲ್ಲ ಎಂದಿನಂತೆ ಕೆಲಸಕ್ಕೆ ಸಿದ್ಧತೆ ನಡೆಸಿದ್ದರು. ಕೆಲವರು ಕೆಲಸ ಆರಂಭಿಸಿದ್ದರು.ಇನ್ನೂ ಕೆಲವರು ತಿಂಡಿ ತಿನ್ನುತ್ತಿದ್ದರು. ಹಲವರು ಮುಖ ತೊಳೆದು, ಸ್ನಾನ ಮಾಡಿ ಕೆಲಸಕ್ಕೆ ಸಜ್ಜಾಗುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಕೇಳಿಸಿತು. ಏನಾಗುತ್ತಿದೆ ಎಂದು ನೋಡುವುದರೊಳಗೆ ಕಟ್ಟಡ ಕುಸಿದಿದೆ. ಮೊದಲು ಹಾಗೂ 2ನೇ ಮಹಡಿಯಲ್ಲಿದ್ದವರು ಜಿಗಿದು ಪರಾರಿಯಾದರು. ಆದರೆ, ಕಟ್ಟಡದ 1 ಮತ್ತು 2ನೇ ಅಂತಸ್ತುಗಳು ನೆಲಮಹಡಿಗೆ ಕುಸಿದಿರುವುದರಿಂದ ಅಲ್ಲಿದ್ದವರು ಮೇಲೆ ಬರಲು ಸಾಧ್ಯವಾಗದೆ ಅವಶೇಷಗಳ ಅಡಿ ಸಿಲುಕಿದ್ದಾರೆ. ಸ್ಥಳೀಯ ನಿವಾಸಿ ಉಸ್ಮಾನ್ ಎಂಬುವವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಮಾಲೀಕ ನಾಪತ್ತೆ: ಅಪಾರ್ಟ್‌ಮೆಂಟ್ ಲಕ್ಕಸಂದ್ರ ನಿವಾಸಿ ಸಲೀಂ ಎಂಬುವವರಿಗೆ ಸೇರಿದ್ದಾಗಿದ್ದು, ಘಟನೆ ನಡೆದ ನಂತರ ಆತ ನಾಪತ್ತೆಯಾಗಿದ್ದಾನೆ. ಸೋಮೇಶ್ವರ ದೇವಾಲಯಕ್ಕೆ ಸೇರಿದ ಆ ಸ್ಥಳದಲ್ಲಿ ಈ ಹಿಂದೆ ಕೆರೆ ಇತ್ತು. ಆ ಜಾಗ ಆಂಜನಪ್ಪ ಅವರಿಗೆ ಸೇರಿದ್ದೆಂದು 1992ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಆಂಜನಪ್ಪ ಅವರಿಂದ ಸುಮಾರು 16 ಸಾವಿರ ಚದರ ಅಡಿ ಜಾಗ ಖರೀದಿಸಿದ ಸಲೀಂಬಾಯಿ ಕಳೆದ ಒಂಭತ್ತು ತಿಂಗಳಿಂದ ಕಟ್ಟಡ ಕಾಮಗಾರಿ ಆರಂಭಿಸಿದ್ದರು. ಆದರೆ, ಜಾಗ ಇನ್ನೂ ಆಂಜನಪ್ಪ ಅವರ ಹೆಸರಿನಲ್ಲೇ ಇತ್ತು. ಈ ನಡುವೆ 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಒಪ್ಪಿಗೆಯೂ ಸಿಕ್ಕಿತ್ತು.
ಪರದಾಟ: ಸುಮಾರು 9.20ಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಬಂದಿದ್ದು, ಕರೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದವರನ್ನು ಮೇಲೆತ್ತಲು ಹರಸಾಹಸ ಮಾಡಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಐಜಿಪಿ ಕೆ.ಎಲ್. ಸುಧೀರ್, ಕುಸಿದಿರುವ ಕಟ್ಟಡದ ಪಕ್ಕದಲ್ಲಿ ಮನೆಗಳು, ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್ ಇರುವ ಕಾರಣ ಅಲ್ಲಿಗೆ ವಾಹನಗಳು ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ಜೆಸಿಬಿಯಿಂದ ಮೂಲಕ ಜಾಗ ಮಾಡಿಕೊಂಡು ನಂತರ ರಂದ್ರ ಕೊರೆಯುತ್ತಾ ಹೋಗಿ ರಾತ್ರಿ ವೇಳೆಗೆ ನೆಲಮಹಡಿಯಲ್ಲಿದ್ದ ಮೃತದೇಹಗಳನ್ನು ಮೇಲೆತ್ತಿದರು.
ಅಧಿಕಾರಿಗಳ ಅಮಾನತು: ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದ ಬಿಬಿಎಂಪಿ ಎಂಜಿನಿಯರ್‌ಗಳಾದ ಪಂಚಾಕ್ಷರಯ್ಯ ಹಾಗೂ ಸಂತೋಷ್‌ಕುಮಾರ್ ಎಂಬುವವರನ್ನು ಅಮಾನತುಗೊಳ್ಳಿಸಿ ಬಿಬಿಎಂಪಿ ಆಯುಕ್ತರು ಲಕ್ಷ್ಮಿನಾರಾಯಣ ಅವರು ಆದೇಶಿಸಿದ್ದಾರೆ. ಸ್ಥಳಕ್ಕೆ ಗೃಹಸಚಿವ ಕೆ.ಜೆ.ಜಾರ್ಜ್, ಶಾಸಕ ಆರ್.ವಿ.ದೇವರಾಜ್, ಪಾಲಿಕೆ ಸದಸ್ಯ ಉದಯಶಂಕರ್ ಸೇರಿದಂತೆ ಸ್ಥಳೀಯ ಮುಖಂಡರು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಕ್ಕದ್ದೂ ಅಕ್ರಮ
ಕುಸಿದ ಕಟ್ಟಡದ ಪಕ್ಕದಲ್ಲೇ ಮತ್ತೊಂದು ಬಹುಮಹಡಿ ಕಟ್ಟಡ ಅಕ್ರಮವಾಗಿ ನಿರ್ಮಾಣಗೊಂಡಿದ್ದು, ಅದರ ಮಾಲೀಕರು ಕೂಡ ಸಲೀಂ ಅವರೇ ಆಗಿದ್ದಾರೆ. ಕುಸಿದ ಕಟ್ಟಡ ನಿರ್ಮಾಣ 9 ತಿಂಗಳ ಹಿಂದೆ ಆರಂಭಗೊಂಡಿದ್ದು, ಒಂದೆರಡು ತಿಂಗಳು ಸ್ಥಗಿತಗೊಂಡಿತ್ತು. ಬಳಿಕ ಆರು ತಿಂಗಳ ಹಿಂದೆ ಮತ್ತೆ ಆರಂಭವಾದ ನಿರ್ಮಾಣ ಕಾಮಗಾರಿ ತರಾತುರಿಯಲ್ಲಿ ನಡೆದಿದ್ದು, 6 ಮಹಡಿ ಕಟ್ಟಡ ತಲೆ ಎತ್ತಿದೆ. ಅಷ್ಟೇ ಅಲ್ಲ, ಆ ಪ್ರದೇಶದಲ್ಲಿ ಸಲೀಂ ಅವರಿಗೆ ಸೇರಿದ ಸುಮಾರು ಹತ್ತು ಕಟ್ಟಡಗಳಿವೆ. ಎಲ್ಲವೂ ತರಾತುರಿಯಲ್ಲಿ ನಿರ್ಮಾಣಗೊಂಡವು ಎಂದು ಸ್ಥಳೀಯರು ಆರೋಪಿಸಿದ್ದಾರೆ.