ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಹಿರಂಗ ಪ್ರಚಾರಕ್ಕೆ ಬಿತ್ತು ತೆರೆ

'ಮಾತ್ಸಮರ'ಕ್ಕೆ ವೇದಿಕೆಯಾಗಿದ್ದ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಬಹಿರಂಗ...

Srinivasa Murthy VN
Updated On : 20 Aug 2013, 12:42 pm

ರಾಮನಗರ/ಮಂಡ್ಯ: 'ಮಾತ್ಸಮರ'ಕ್ಕೆ ವೇದಿಕೆಯಾಗಿದ್ದ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮಂಗಳವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾತ್ರ ಬಾಕಿ ಇದೆ.
ಬೆಂಗಳೂರು ಗ್ರಾಮಾಂತರದಿಂದ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಂಡ್ಯದಿಂದ ಚುನಾಯಿತರಾಗಿದ್ದ ಚಲುವರಾಯಸ್ವಾಮಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಆ.21ರಂದು ಮತದಾನ ನಡೆಯಲಿದ್ದು ಆ.25ರಂದು ಮತ ಏಣಿಕೆ ನಡೆಯಲಿದೆ.
ಉಭಯ ಕ್ಷೇತ್ರಗಳಲ್ಲಿ ಗೆಲವಿಗಾಗಿ ಕಾಂಗ್ರೆಸ್, ಜೆಡಿಎಸ್ ತುರುಸಿನ ಪ್ರಚಾರ ನಡೆಸಿದ್ದು ಮತದಾರನ ಚಿತ್ತ ಯಾರತ್ತ ಎಂಬುದು ನಿಗೂಢವಾಗಿದೆ.
ಸೋಮವಾರ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಸ್.ಎಂ. ಕೃಷ್ಣ ಏನು ಮಹಾಭಾರತದ ಶ್ರೀಕೃಷ್ಣ ಅಲ್ಲ. ಅವರ ಹತ್ತಿರ ಯಾವುದೇ ಸುದರ್ಶನ ಚಕ್ರವೂ ಇಲ್ಲ.

ಚುನಾವಣೆ ಕಳೆದ ಮೇಲೆ ಎಸ್.ಎಂ. ಕೃಷ್ಣನ ಅವತಾರ ಏನು ಎಂಬುದು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಧರ್ಮಸಿಂಗ್ ಸರ್ಕಾರದಲ್ಲಿ ಇವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆದರೆ ಕರ್ನಾಟಕಕ್ಕೆ 10 ಬಾರಿ ಏಕೆ ಬಂದರು ಎಂಬುದು ನನಗೆ ತಿಳಿದಿದೆ. ಸಿದ್ದರಾಮಯ್ಯ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಅದೆಲ್ಲದರ ದಾಖಲೆಗಳಿವೆ. ಚುನಾವಣೆ ಕಳೆದ ಬಳಿಕ ದೇವೇಗೌಡ ಎಲ್ಲದಕ್ಕೂ ಉತ್ತರ ಕೊಡುತ್ತಾನೆ. ನಾನು ಹುಟ್ಟು ಹೋರಾಟದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಮುಗಿಸುವ ಹೊರತು ನಾನು ವಿರಮಿಸುವುದಿಲ್ಲ ಎಂದರು.
ಮಂಡ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕಾಗಿ ಹುಟ್ಟಿಕೊಂಡಿರುವ ಪಕ್ಷಗಳು. ಅಧಿಕಾರಕ್ಕಾಗಿ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಬದುಕಿನ ಕೊನೆ ಉಸಿರು ಇರುವವರೆಗೂ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ದೇವೇಗೌಡರು ಅಲ್ಪಸಂಖ್ಯಾತರಿಗೆ ಆಶ್ವಾಸನೆ ನೀಡಿದ್ದರು. ಈಗ ಉಪಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಒಂದುಗೂಡಿದ್ದಾರೆ. ಪರಸ್ಪರ ಕತ್ತಿ ಮಸಿಯುತ್ತಿದ್ದವರು ಈಗ ಸ್ನೇಹಿತರಾಗಿದ್ದಾರೆ. ಆದರೂ ದೇವೇಗೌಡರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ಲ ಎನ್ನುತ್ತಿದ್ದಾರೆ. ಇಂಥ ಸುಳ್ಳಿನ ಸರದಾರನನ್ನು ನಾನು ನೋಡೇ ಇಲ್ಲ ಎಂದರು. ರಾಮನಗರದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ದೇವೇಗೌಡ ಅವರು ಅಂದು ಪುತ್ರ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕಾಗಿ, ಇಂದು ಸೊಸೆಯನ್ನು ಗೆಲ್ಲಿಸಬೇಕೆನ್ನುವ ಹಠ ಸಾಧನೆಗಾಗಿ ಬಿಜೆಪಿ ಜತೆ ಕೈ ಜೋಡಿಸುವ ಮೂಲಕ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದರು. ಮಾಜಿ ಸಚಿವ ದಿ. ವೈ.ಕೆ. ರಾಮಯ್ಯ ಅವರ ಪತ್ನಿ ಅನಸೂಯಮ್ಮ ಕುಣಿಗಲ್‌ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ರಮ್ಯಾ ರಾಣಿ ಚೆನ್ನಮ್ಮ: ಕೇಂದ್ರ ಸಚಿವ ಮೊಯ್ಲಿ
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರಲ್ಲಿ ಹೋರಾಟದ ಕಿಚ್ಚನ್ನು ಕಂಡಿದ್ದೇವೆ. ಜಿಲ್ಲೆ ಮತ್ತು ನಾಡಿನ ಸಮಸ್ಯೆಗಳಿಗೆ ಸಂಸತ್‌ನಲ್ಲಿ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಮನೆ ಮಗಳಾದ ರಮ್ಯಾ ಅವರನ್ನು ಮತದಾರರು ಬೆಂಬಲಿಸಿದರೆ ಈ ಭಾಗದ ರಾಣಿ ಚೆನ್ನಮ್ಮ ಆಗುತ್ತಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಜಾತ್ಯತೀತ ನಿಲುವುಗಳನ್ನು ಪ್ರತಿಪಾದಿಸುತ್ತಾ ಬಂದಿದ್ದ ಜೆಡಿಎಸ್‌ಗೆ ಇದೀಗ ನರೇಂದ್ರ ಮೋದಿ ಮೇಲೆ ಮಮತೆ ಮತ್ತು ಪ್ರೀತಿ ಬಂದಿದೆ. ಜಾತಿ- ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವ ಬಿಜೆಪಿಯೊಂದಿಗೆ ಸೇರಿದರೆ ಏನಾಗುತ್ತದೆ ಎಂಬುದು ಶೀಘ್ರದಲ್ಲಿಯೇ ಜೆಡಿಎಸ್ ನಾಯಕರಿಗೆ ಅರಿವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement