ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೈಲಿಗೆ 37 ಬಲಿ

ಹಳಿಯಲ್ಲಿ ರೈಲು ನಿಲ್ಲಿಸಲು ಹೋಗಿ 37 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

Srinivasa Murthy VN
Updated On : 20 Aug 2013, 2:13 am

ಹಳಿಯಲ್ಲಿ ರೈಲು ನಿಲ್ಲಿಸಲು ಹೋಗಿ 37 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಸುನೀಗಿದವರಲ್ಲಿ ನಾಲ್ವರು ಮಕ್ಕಳು, 13 ಮಹಿಳೆಯರೂ ಸೇರಿದ್ದಾರೆ. ಬಿಹಾರದ ಧಮಾರ್ ಘಾಟ್ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಪ್ರಯಾಣಿಕರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಖಗಾರಿಯಾ: ಎಕ್ಸ್‌ಪ್ರೆಸ್ ರೈಲೊಂದು ಹಳಿಗೆ ಅಡ್ಡವಾಗಿ ನಿಂತಿದ್ದ ಯಾತ್ರಾರ್ಥಿಗಳ ಮೇಲೆ ಹರಿದು 37 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬಿಹಾರದ ಧಮಾರಘಾಟ್ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ. ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 13 ಮಹಿಳೆಯರು, ನಾಲ್ಕು ಮಕ್ಕಳು ಸೇರಿದ್ದಾರೆ.

ಇವರು ಪ್ಯಾಸೆಂಜರ್ ರೈಲೊಂದರಿಂದ ಇಳಿದು ಎಕ್ಸ್‌ಪ್ರೆಸ್ ರೈಲು ನಿಲ್ಲಿಸಲು ಹಳಿಗೆ ಅಡ್ಡ ನಿಂತಿದ್ದರು. ಈ ವೇಳೆ 80 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದ ರೈಲು ಯಾತ್ರಾರ್ಥಿಗಳ ಮೇಲೆ ಹರಿದಿದೆ. ಘಟನೆಯಿಂದ ರೊಚ್ಚಿಗೆದ್ದ ಇತರೆ ಯಾತ್ರಾರ್ಥಿಗಳು ರೈಲು ಚಾಲಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಬಳಿಕ ಆರು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದೇ ವೇಳೆ, ರೇಲ್ವೆ ನಿಯಂತ್ರಣ ಕೊಠಡಿಗೆ ನುಗ್ಗಿ ದಾಂದಲೆ ನಡೆಸಿದ ಗುಂಪು, ಅಲ್ಲಿದ್ದ ಅಧಿಕಾರಿಗಳನ್ನು ಕೆಲಕಾಲ ಒತ್ತೆಯಾಗಿರಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ.

ಹೇಗೆ ನಡೆಯಿತು?: ಧಮಾರ ಘಾಟ್ ಸಮೀಪದ ಹೆಸರಾಂತ ಕತ್ಯಾನಿ ಸ್ಥಾನ್ ದೇವಸ್ಥ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಈಶ್ವರನಿಗೆ ಜಲಾಭಿಷೇಕ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಪೂಜೆ ಬಳಿಕ ಭಕ್ತರು ಪ್ಯಾಸೆಂಜರ್ ರೈಲಿನ ಮೂಲಕ ಧಮಾರ ಘಾಟ್ ನಿಲ್ದಾಣದಲ್ಲಿ ಬಂದಿಳಿದರು. ಇದೇ ವೇಳೆ, ಇನ್ನೊಂದು ಮಾರ್ಗದಲ್ಲಿ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲು ಪಟನಾ ಕಡೆಗೆ ಸಾಗುತ್ತಿತ್ತು. ಇದನ್ನು ಅರಿತ ಯಾತ್ರಾರ್ಥಿಗಳು ತಕ್ಷಣ ಹಳಿಗೆ ಅಡ್ಡವಾಗಿ ನಿಂತರು. ಹಳಿಗೆ ಅಡ್ಡ ನಿಂತರೆ ರೈಲು ನಿಲ್ಲುತ್ತದೆ ಎನ್ನುವುದು ಅವರ ಊಹೆಯಾಗಿತ್ತು. ಆದರೆ, ಎಕ್ಸ್‌ಪ್ರೆಸ್ ರೈಲಾದ ಕಾರಣ ಧಮಾರ ಘಾಟ್ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ಹಾಗಾಗಿ ರೈಲಿಗೆ ಮುಂದೆ ಸಾಗಲು ಅನುಮತಿ ನೀಡಲಾಗಿತ್ತು. ಈ ವೇಳೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ರೈಲು ಚಲಿಸುತ್ತಿತ್ತು. ಯಾತ್ರಾರ್ಥಿಗಳನ್ನು ಕಂಡ ಚಾಲಕರು ತಕ್ಷಣ ಬ್ರೇಕ್ ಹಾಕಿದರೂ ಅಷ್ಟರಲ್ಲಾಗಲೇ ತಡವಾಗಿತ್ತು.

ಏಕಾಏಕಿ ದಾಂದಲೆ: ಘಟನೆಗೆ ಸಾಕ್ಷಿಯಾದ ಇತರೆ ಯಾತ್ರಾರ್ಥಿಗಳು ಏಕಾಏಕಿ ದಾಂದಲೆಗಿಳಿದರು. ರೈಲ್ವೆ ಚಾಲಕನ ಮೇಲೆ ಹಲ್ಲೆ ನಡೆಸಿದರು. ನಂತರ ಎಸಿ ಕೋಚ್ ಸೇರಿ ರೈಲಿನ ಆರು ಬೋಗಿಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಸ್ಥಳದಲ್ಲೇ ಇದ್ದ ಸಮಸ್ತಿಪುರ- ಸಹರ್ಸಾ ಪ್ಯಾಸೆಂಜರ್ ರೈಲಿನ ಎಂಜಿನ್‌ಗೂ ಬೆಂಕಿ ತಗುಲಿದೆ. ಘಟನೆ ಕುರಿತು ಇಲಾಖೆಯು ಆಂತರಿಕ ತನಿಖೆಗೆ ಆದೇಶಿಸಿದೆ.

ರೇಲ್ವೆ ಅಧಿಕಾರಿಗಳ ಒತ್ತೆ: ಘಟನೆಯಿಂದ ಆಕ್ರೋಶಗೊಂಡ ಯಾತ್ರಾರ್ಥಿಗಳು ನಿಲ್ದಾಣದಲ್ಲಿದ್ದ ರೇಲ್ವೆ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದರು. ನಂತರ ಅವರನ್ನು ಕೆಲಕಾಲ ಒತ್ತೆಯಾಗಿ ಇರಿಸಿಕೊಂಡಿದ್ದರು. ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಪರಿಹಾರ ಘೋಷಣೆ
ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ 1.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

5 ಲಕ್ಷ ನೆರವು: ಖರ್ಗೆ
ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಘೋಷಿಸಿದರು. ದುರಂತಕ್ಕೆ ಸಂಬಂಧಿಸಿ ಸಿಎಂ ನಿತೀಶ್ ಜತೆ ಮಾತನಾಡಿದ್ದೇನೆ ಎಂದರು.

ಎಲ್ಲಿ?
ಬಿಹಾರದ ಧಮಾರ್ ಘಾಟ್ ನಿಲ್ದಾಣದಲ್ಲಿ

ಸಮಯ?
ಬೆಳಗ್ಗೆ 8.45ರ ಸುಮಾರಿಗೆ

ರೈಲು?
ಸಹರ್ಸಾ- ಪಟನಾ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲು

ಎಷ್ಟು ಸಾವು ?
37 ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಹೇಗಾಯ್ತು ?
ರೈಲು ನಿಲ್ಲಿಸಲು ಅಡ್ಡ ನಿಂತಿದ್ದರಿಂದ ದುರಂತ

ಇದು ಅಪರೂಪದಲ್ಲಿ ಅಪರೂಪದ ದುರಂತವಾಗಿದೆ. ಯಾತ್ರಾರ್ಥಿಗಳ ಸಾವಿನಿಂದ ನೋವಾಗಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ನಿತೀಶ್ ಕುಮಾರ್, ಬಿಹಾರ ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments