ಕದ್ದು ಮುಚ್ಚಿ ಸಿದ್ದು ವರಲಕ್ಷ್ಮೀ ಪೂಜೆ
ಭರ್ಜರಿ ಭದ್ರತೆಯಲ್ಲಿ ವರಮಹಾಲಕ್ಷ್ಮಿ ಪೂಜೆ! ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಲ್ಲಿ ನಡೆದ ಪೂಜೆ ಎಂಬ ಕಾರಣಕ್ಕೆ ಸರ್ಪಗಾವಲು.
ಕನ್ನಡಪ್ರಭ ವಾರ್ತೆ ಬೆಂಗಳೂರು ಆ.23
ಭರ್ಜರಿ ಭದ್ರತೆಯಲ್ಲಿ ವರಮಹಾಲಕ್ಷ್ಮಿ ಪೂಜೆ!
ಕಾರಣ ಭಯೋತ್ಪಾದಕರ ಬೆದರಿಕೆಯಲ್ಲ. ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಲ್ಲಿ ನಡೆದ ಪೂಜೆ ಎಂಬ ಕಾರಣಕ್ಕೆ ಸರ್ಪಗಾವಲು. ಸಿದ್ದರಾಮಯ್ಯ ಕುಟುಂಬಕ್ಕೆ ಮಾತ್ರ ಪ್ರವೇಶ. ಆದರೆ, ಹಬ್ಬದೂಟ ಮಾತ್ರ ಹಲವು ಸಚಿವರ ಅದೃಷ್ಟದಲ್ಲಿತ್ತು. ಎಷ್ಟರ ಮಟ್ಟಿಗೆ ಭದ್ರತೆಯೆಂದರೆ ಮುಖ್ಯಮಂತ್ರಿಗಳ ಅಧಿಕೃತ ಛಾಯಾಚಿತ್ರಗ್ರಾಹಕರಿಗೂ ಪ್ರವೇಶವಿರಲಿಲ್ಲ!
ಶ್ರಾವಣ ಮಾಸದ 2ನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ. ಆದರೆ, ಸಿದ್ದರಾಮಯ್ಯ ಆರಿಸಿಕೊಂಡಿದ್ದು ಶ್ರಾವಣದ 3ನೇ ಶುಕ್ರವಾರದ ಲಕ್ಷ್ಮಿ ಪೂಜೆ. ಹೀಗಾಗಿ, ಸಿಎಂ ನಿವಾಸಕ್ಕೆ ಶುಕ್ರವಾರ ಬೆಳಗ್ಗಿನಿಂದ ಯಾರಿಗೂ ಪ್ರವೇಶ ಇರಲಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ವರಲಕ್ಷ್ಮಿ ಪೂಜೆಯನ್ನು ಗೌಪ್ಯವಾಗಿ ಇಡಲಾಗಿತ್ತು. ಯಾರಿಗೂ ಆಹ್ವಾನ ಇರಲಿಲ್ಲ. ಸಿದ್ದರಾಮಯ್ಯ ಅವರು ಬೆಳಗ್ಗೆ 10 ಗಂಟೆಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು.
ಕುಟುಂಬದವರು ಪೂಜೆ ಮಾಡುತ್ತಾರೆ ತಮಗೇನು ಕೆಲಸ ಎಂಬ ಭಾವನೆ. ಆದರೆ, ಮುಖ್ಯಮಂತ್ರಿಯವರಿಗೆ ಸಚಿವ ಸಂಪುಟದ ಹೊರತಾಗಿ ಶುಕ್ರವಾರ ಯಾವುದೇ ಅಧಿಕೃತ ಕಾರ್ಯಕ್ರಮಗಳಿರಲಿಲ್ಲ.ಸಾಮಾನ್ಯ ದಿನಗಳಲ್ಲಿ ಮುಖ್ಯಮಂತ್ರಿಯವರ ನಿವಾಸದಲ್ಲಿ ಬೆಳಗ್ಗಿನಿಂದಲೇ ಸಾರ್ವಜನಿಕರ ಭೇಟಿ ಇರುತ್ತದೆ. ಇದನ್ನು ಶುಕ್ರವಾರ ನಿರ್ಬಂಧಿಸಲಾಗಿತ್ತು. ಲಕ್ಷ್ಮಿ ಪೂಜೆ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಪ್ರವೇಶ ನಿಷಿದ್ಧವಾಗಿತ್ತು. ಅದರಲ್ಲೂ ಮಾಧ್ಯಮವರನ್ನು ಸಾಕಷ್ಟು ದೂರವೇ ಉಳಿಸಲಾಗಿತ್ತು. ಮುಖ್ಯಮಂತ್ರಿಯವರ ಅಧಿಕೃತ ಛಾಯಾಗ್ರಾಹಕರಿಗೂ ನಿವಾಸಕ್ಕೆ ಪ್ರವೇಶ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಲಕ್ಷ್ಮಿ ಪೂಜೆ ಮಾಡಬಾರದು ಅಥವಾ ಆಚರಣೆ ಆಗಬಾರದು ಎಂದೇನೂ ಇಲ್ಲ. ಎಲ್ಲ ಮುಖ್ಯಮಂತ್ರಿಗಳೂ ಬಹುತೇಕ ಪೂಜೆ-ಪುನಸ್ಕಾರಗಳನ್ನು ಮಾಡಿದ್ದಾರೆ. ಆದರೆ, ಪೂಜೆ-ಪುನಸ್ಕಾರ ಅಥವಾ ಸಮಯ-ತಿಥಿ ನೋಡುವ ಅಭ್ಯಾಸವೇ ನನಗಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ ಸಾಕಷ್ಟು ಬದಲಾಗಿದ್ದಾರೆ. ರಾಹುಕಾಲ, ಮುಹೂರ್ತ ಎಲ್ಲವನ್ನೂ ನೋಡಲು ಆರಂಭಿಸಿದ್ದಾರೆ. ಅವರಿಗಾಗಿ ಅಲ್ಲದಿದ್ದರೂ ಅವರ ಸುತ್ತಮುತ್ತಲಿರುವವರಿಗಾಗಿ ಪಾಲಿಸುತ್ತಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಪ್ರಮಾಣ ವಚನ ಸಮಯ ಕೊನೆಗಳಿಗೆಯಲ್ಲಿ ಮುಂದೂಡಿದ್ದೇ ಪ್ರಥಮ ಉದಾಹರಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆ ನಡೆಸಿದರು. ಸುಮಾರು ನಾಲ್ಕೂವರೆ ಗಂಟೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಊಟದ ವ್ಯವಸ್ಥೆ ಇರಲಿಲ್ಲ. ಮನೆಯಲ್ಲಿ ಲಕ್ಷ್ಮಿಪೂಜೆ ಇರುವುದರಿಂದ ಎಲ್ಲರೂ ಊಟಕ್ಕೆ ಅಲ್ಲಿಗೆ ಆಗಮಿಸಬೇಕು ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದ್ದರು. ಹೀಗಾಗಿ, ಮುಖ್ಯಮಂತ್ರಿಯವರ ನಿವಾಸದ ಲಕ್ಷ್ಮಿಪೂಜೆಗೆ ಕೊನೆಯಲ್ಲಿ ಆಹ್ವಾನಿತರಾದವರು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಮಾತ್ರ. ಅವರಿಗೆ ಮಾತ್ರ ಹಬ್ಬದೂಟ. ಇನ್ನು ಪೂಜೆಯಲ್ಲಿ ಯಾರ್ಯಾರು ಭಾಗವಹಿಸಿದ್ದವರು ಎಂಬುದನ್ನೂ ಗೌಪ್ಯವಾಗಿಯೇ ಇಡಲಾಯಿತು. ಸಿದ್ದರಾಮಯ್ಯನವರ ಪತ್ನಿ, ಮಕ್ಕಳು, ಸೋದರರು, ಆತ್ಮೀಯ ಸಂಬಂಧಿಗಳು ಮಾತ್ರ ಪೂಜೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.