ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಂಪ ಪ್ರಶಸ್ತಿಗೆ ನಾಯಕತ್ವ ಯಾವಾಗ?

ಪ್ರಸಿದ್ಧ ವಿಮರ್ಶಕ ಹಾಗೂ ಪ್ರಗತಿಪರ ಚಿಂತಕ ಪ್ರೊ. ಜಿ.ಎಚ್. ನಾಯಕ ಅವರಿಗೆ ಪಂಪ ಪ್ರಶಸ್ತಿ ಬಂದಿತ್ತು. ಆದರೆ ಅದು ಪ್ರದಾನವಾದ ಸುದ್ದಿ ಬರಲಿಲ್ಲ.

Srinivasa Murthy VN
Updated On : 24 Aug 2013, 1:24 am

ಪ್ರಸಿದ್ಧ ವಿಮರ್ಶಕ ಹಾಗೂ ಪ್ರಗತಿಪರ ಚಿಂತಕ ಪ್ರೊ. ಜಿ.ಎಚ್. ನಾಯಕ ಅವರಿಗೆ ಪಂಪ ಪ್ರಶಸ್ತಿ ಬಂದಿತ್ತು. ಆದರೆ ಅದು ಪ್ರದಾನವಾದ ಸುದ್ದಿ ಬರಲಿಲ್ಲ. ಈ ಬಗ್ಗೆ ಮಾಹಿತಿ ನೀಡಿ ಎಂದು ಮೈಸೂರಿನ ಚಿನ್ನಸ್ವಾಮಿ ಕೇಳಿದ್ದರು. ಅದಕ್ಕೆ ಉತ್ತರ ಇಲ್ಲಿದೆ.

-ಅಂಶಿ ಪ್ರಸನ್ನಕುಮಾರ್
ಮೈಸೂರು: ಪಂಪ ಪ್ರಶಸ್ತಿ ವಿತರಣೆ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯವೋ, ಅಧಿಕಾರಿಗಳ ತಾತ್ಸಾರವೋ ಗೊತ್ತಿಲ್ಲ. ಆದರೆ ಇದರಿಂದ ಮುಜುಗರ ಅನುಭವಿಸುತ್ತಿರುವವರು ಮಾತ್ರ ಖ್ಯಾತ ಸಾಹಿತಿಗಳು. ಈ ಹಿಂದೆ ಸಾಹಿತಿ ಪ್ರೊ. ಚಂಪಾ ಅವರಿಗೆ ಈ ಪ್ರಶಸ್ತಿ ವಿತರಣೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗಿತ್ತು. ಮತ್ತೆ ಅದೇ ಪರಿಸ್ಥಿತಿ ವಿಮರ್ಶಕ, ಪ್ರಗತಿಪರ ಚಿಂತಕ ಪ್ರೊ. ಜಿ.ಎಚ್. ನಾಯಕ ಅವರಿಗೆ ಎದುರಾಗಿದೆ.
ವಿಶೇಷವೆಂದರೆ 2011ನೇ ಸಾಲಿನ ಪಂಪ ಪ್ರಶಸ್ತಿಗೆ ಭಾಜನರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಈಗಾಗಲೇ ಪ್ರಶಸ್ತಿ ಪ್ರದಾನ ಮಾಡಲಾಗಿದೆ! ನಾಯಕ ಅವರಿಗೆ 2010ರಲ್ಲೇ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಆದರೆ ಈವರೆಗೂ ವಿತರಣೆ ಮಾತ್ರ ಆಗಲಿಲ್ಲ. ಇದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಆಗಿದ್ದೇನು?: 2010ರ ಸಾಲಿನ ಪಂಪ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಪ್ರೊ. ಚಂಪಾ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಈ ಸಮಿತಿಯು 2012ರ ಫೆ.4 ಹಾಗೂ ಮೇ 14ರಂದು ಸಭೆ ನಡೆಸಿ, ಪ್ರೊ. ಜಿ.ಎಚ್. ನಾಯಕ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರದಿಂದ ಪ್ರಶಸ್ತಿಯ ಘೋಷಣೆಯೂ ಆಯ್ತು.
ರಾಜ್ಯಪಾಲರ ಹೆಸರಿನಲ್ಲಿ ಮತ್ತು ಅವರ ಆದೇಶಾನುಸಾರ ಎಂಬ ಒಕ್ಕಣೆಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ 2012ರ ಜೂ.21ರಂದು ಅಧಿಸೂಚನೆ ಹೊರಡಿಸಿದರು. ಈ ಅಧಿಸೂಚನೆಯ ಪ್ರತಿಯ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಅವರ ಪತ್ರವನ್ನು ಸೇರಿಸಿ, ಅವರೇ ಖುದ್ದು ಮೈಸೂರಿನಲ್ಲಿರುವ ಪ್ರೊ. ನಾಯಕರ ಮನೆಗೆ ಬಂದು ತಲುಪಿಸಿ ಹೋದರು.
ಇದಾದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದ ಯಾವುದೇ ಮಾಹಿತಿ ಬರಲಿಲ್ಲ. ಅದೇ ವರ್ಷದ ನ.1ರಂದು ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೊ. ನಾಯಕರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ಇದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರು ಪತ್ರವೊಂದನ್ನು ಬರೆದು, ನ.30 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಮಾಹಿತಿ ನೀಡಿದ್ದರು. ಆದರೆ ಅದೂ ಆಗಲಿಲ್ಲ.
ಸಮರ್ಪಕ ಮಾಹಿತಿ ಇಲ್ಲ: ಮತ್ತೆ 2013ರ ಮಾರ್ಚ್ 19ರಂದು ಟೆಲಿಗ್ರಾಂ ಕಳುಹಿಸಿ ಹಾಗೂ ದೂರವಾಣಿ ಕರೆ ಮಾಡಿ, ಮಾ.21 ರಂದು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದ್ದು, ಬರುವಂತೆ ಕೋರಲಾಗಿತ್ತು. 79 ವರ್ಷದ ಪ್ರೊ. ನಾಯಕರು ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೇ ಯಾವುದೇ ಮುನ್ಸೂಚನೆ ಇಲ್ಲದೇ, ಆಹ್ವಾನ ಪತ್ರಿಕೆ ಇಲ್ಲದೇ, ಕೇವಲ ಒಂದೇ ದಿನ ಇರುವಂತೆ ತಿಳಿಸಲಾಗಿತ್ತು. ಜತೆಗೆ ಯಾರು ಪ್ರಶಸ್ತಿ ಪ್ರದಾನ ಮಾಡುತ್ತಾರೆ ಎಂಬ ಮಾಹಿತಿಯೂ ಇಲ್ಲದಿದ್ದರಿಂದಇವರು ಬರಲು ಸಮ್ಮಿತಿಸಲಿಲ್ಲ.
ಮೇಡಂ ಕೇಳಿ ಹೇಳುತ್ತೇವೆ!: ಇದಾದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಮಾಹಿತಿ ಬರಲಿಲ್ಲ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ನಂತರ ಅಧಿಕಾರಿಗಳಿಗೆ ಮತ್ತೊಮ್ಮೆ ಜ್ಞಾನೋದಯವಾಯಿತು. ಮತ್ತೆ ಪ್ರೊ. ನಾಯಕರನ್ನು ಸಂಪರ್ಕಿಸಿದ ಅವರು, ನಾಳೆ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡುತ್ತಾರೆ ಎಂದು ಹೇಳಿದರು. ಆದರೆ ಆಗ ನಾಯಕರ ಮನೆಗೆ ಸುಣ್ಣ- ಬಣ್ಣ ಕಾರ್ಯ ನಡೆದಿತ್ತು. ಜೊತೆಗೆ ಸಣ್ಣ ಶಸ್ತ್ರಚಿಕಿತ್ಸೆಯೂ ಆಗಿತ್ತು.
ಹೀಗಾಗಿ ಮುಂದಿನ ವಾರದ ವೇಳೆಗಾದರೆ ಮನೆಯಲ್ಲಿಯೇ ಆಗಲಿ, ಮೈಸೂರಿನಲ್ಲಿಯೇ ಆಗಲಿ ಅಥವಾ ಬೆಂಗಳೂರಿನಲ್ಲಿ ಆಗಲಿ ಬರುತ್ತೇನೆ ಎಂದು ಪ್ರೊ. ನಾಯಕರು ತಿಳಿಸಿದ್ದರು. ಮೇಡಂ ಕೇಳಿ ತಿಳಿಸುತ್ತೇವೆ ಎಂದು ಹೋದ ಅಧಿಕಾರಿಗಳು ಇವತ್ತಿನವರೆಗೆ ಪತ್ತೆ ಇಲ್ಲ!
ಈಗ ಜಿಲ್ಲೆಯವರೇ ಸಿಎಂ: ಪ್ರೊ. ನಾಯಕರಿಗೆ ಪಂಪ ಪ್ರಶಸ್ತಿ ಪ್ರಕಟವಾದಾಗ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿ. ನಂತರ ಜಗದೀಶ್ ಶೆಟ್ಟರ್. ಈಗ ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಪ್ರಶಸ್ತಿ ಪ್ರದಾನ ಮಾಡಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಂತೆ ಅವರು ಯುವರಾಜ ಕಾಲೇಜಿನಲ್ಲಿ ಪ್ರೊ. ನಾಯಕರ ವಿದ್ಯಾರ್ಥಿಯಾಗಿದ್ದರು.
ಮುಜುಗರ: ಘೋಷಣೆಯಾಗಿ 14 ತಿಂಗಳು ಉರುಳಿದರೂ ಪ್ರಶಸ್ತಿ ಪ್ರದಾನ ಆಗದಿರುವುದರಿಂದ ಮುಜುಗರ ಅನುಭವಿಸುತ್ತಿರುವವರು ಪ್ರೊ. ನಾಯಕರು. ಏಕೆಂದರೆ ಅವರೆಂದೂ ಯಾವುದೇ ಪ್ರಶಸ್ತಿಯ ಬೆನ್ನು ಹತ್ತಿದವರಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಮೊದಲಾದವು ಅವರನ್ನು ಹುಡುಕಿಕೊಂಡು ಬಂದಿವೆ.
ಸಿಎಂ ಹೇಳಬೇಕು: ಆದರೆ ಪಂಪ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದಿಸಿ, ನೂರಾರು ಗಣ್ಯರು ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರಶಸ್ತಿಯನ್ನೇ ಸ್ವೀಕರಿಸಿದೇ ಅವರಿಗೆ ಉತ್ತರಿಸುವುದೇ ಹೇಗೆ ಎಂಬುದನ್ನು ಅವರ ವಿದ್ಯಾರ್ಥಿಯೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು.

ಏನಿದು ಪ್ರಶಸ್ತಿ?
ಆದಿ ಕವಿ ಪಂಪನ ಹೆಸರಿನಲ್ಲಿ ರಾಜ್ಯ ಸರ್ಕಾರ ಈ ಪ್ರಶಸ್ತಿ ನೀಡುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ ಒಬ್ಬರಿಗೆ ಪ್ರತಿ ವರ್ಷ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 3 ಲಕ್ಷ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿಯ ಆಯ್ಕೆಗಾಗಿ ರಾಜ್ಯ ಸರ್ಕಾರವೇ ಸಮಿತಿಯೊಂದನ್ನು ರಚಿಸುತ್ತಿದೆ. ಈ ಸಮಿತಿಯು ಸಭೆ ಸೇರಿ, ಆಯ್ಕೆ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರು, ಇಲಾಖೆಯ ಕಾರ್ಯದರ್ಶಿಗಳು ಅಥವಾ ಆಯುಕ್ತರು ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸುವುದು ಸಂಪ್ರದಾಯ. ನಂತರ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement