ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಫೋಟೋ ಪತ್ರಕರ್ತೆ ಮೇಲೆ ಗ್ಯಾಂಗ್‌ರೇಪ್

ದೆಹಲಿ ಗ್ಯಾಂಗ್ ರೇಪ್ ಕಹಿನೆನಪು ಮರೆಯುವ ಮುನ್ನ ಅದೇ ರೀತಿಯ ಇನ್ನೊಂದು ಘಟನೆ ಮುಂಬೈನಲ್ಲೂ ನಡೆದಿದೆ.

Srinivasa Murthy VN
Updated On : 24 Aug 2013, 12:24 pm

ಮುಂಬೈ/ನವದೆಹಲಿ: ಇಡೀ ದೇಶವನ್ನು ನಡುಗಿಸಿದ್ದ ದೆಹಲಿ ಗ್ಯಾಂಗ್ ರೇಪ್ ಕಹಿನೆನಪು ಮರೆಯುವ ಮುನ್ನ ಅದೇ ರೀತಿಯ ಇನ್ನೊಂದು ಘಟನೆ ಮುಂಬೈನಲ್ಲೂ ನಡೆದಿದೆ.
ಆಂಗ್ಲ ಪತ್ರಿಕೆಯ 22 ವರ್ಷದ ಛಾಯಾಗ್ರಾಹಕಿಯೊಬ್ಬಳ ಮೇಲೆ ಗುರುವಾರ ರಾತ್ರಿ 8 ಗಂಟೆಗೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಸೈನ್‌ಮೆಂಟ್‌ಗಾಗಿ ಸಹೋದ್ಯೋಗಿ ಜತೆ ಶಿಥಿಲಗೊಂಡ ಜವಳಿ ಮಿಲ್‌ವೊಂದಕ್ಕೆ ತೆರಳಿದ್ದಾಗ ಐವರು ದುಷ್ಕರ್ಮಿಗಳು ಈ ದುಷ್ಕೃತ್ಯ ನಡೆಸಿದ್ದಾರೆ. ಈ ಸಂಬಂಧ ಯುವತಿ ನೀಡಿದ ಮಾಹಿತಿಯಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿದೆ. ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಘಟನೆಯನ್ನು ಖಂಡಿಸಿವೆ. ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.

20 ತಂಡ ರಚನೆ
ಅತ್ಯಾಚಾರ ನಡೆದ 24 ಗಂಟೆಯೊಳಗೆ ಮುಂಬೈ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ 20 ತಂಡ ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರೋಪಿ ಮಹಮ್ಮದ್ ಅಬ್ದುಲ್ ಅಲಿಯಾಸ್ ಚಾಂದ್‌ನನ್ನು ಬಂಧಿಸಿರುವ ಪೊಲೀಸರು ಈತ ನೀಡಿದ ಸುಳಿವಿನ ಮೇರೆಗೆ ಉಳಿದ ನಾಲ್ವರ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಾಲ್ವರಲ್ಲಿ ಇಬ್ಬರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಬಾಲಕಿ ಮೇಲೆ ಅತ್ಯಾಚಾರ
ಕನ್ನಡಪ್ರಭ ವಾರ್ತೆ ಮೈಸೂರು ಆ.23
-
ಐದಾರು ತಿಂಗಳಿಂದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭವತಿಯಾಗಲು ಕಾರಣನಾದ ವ್ಯಕ್ತಿಯೊಬ್ಬನನ್ನು ಉದಯಗಿರಿ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಗೌಸಿಯಾನಗರ ನಿವಾಸಿ ಮಕ್ಬುಲ್ ಪಾಷ (53) ಬಂಧಿತ ಆರೋಪಿ. ಸಣ್ಣ ಅಂಗಡಿಯೊಂದನ್ನು ನಡೆಸುತ್ತಿರುವ ಈತನಿಗೆ ವಿವಾಹವಾಗಿ ಮಕ್ಕಳು ಮತ್ತು ಮೊಮ್ಮಕ್ಕಳೂ ಇದ್ದಾರೆ.  ಈತನ ಅಂಗಡಿಗೆ ಅಕ್ಕಿ ತರಲು ಬಂದಿದ್ದ ಪಕ್ಕದ ಮನೆಯ 14 ವರ್ಷದ ಬಾಲಕಿಯನ್ನು ಹೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗುರುವಾರ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪೋಷಕರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ವಿಚಾರ ಗೊತ್ತಾಗಿದೆ.

ಮಾನಸಿಕ ಅಸ್ವಸ್ಥೆ ಮೇಲೂ...
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಆ.23
-
ಮಾನಸಿಕ ಅಸ್ವಸ್ಥ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಲ್ಲಿನ ಪೊಲೀಸರು ಶುಕ್ರವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮುದ್ದೇಬಿಹಾಳ ತಾಲೂಕು ಗೆದ್ದಲಮರಿ ಗ್ರಾಮದ 19 ವರ್ಷದ ಯುವತಿಯನ್ನು ಇಬ್ಬರು ಯುವಕರು ಬಲವಂತವಾಗಿ ಎಳೆದುಕೊಂಡು ಹೋಗಿ ರಾತ್ರಿಯಿಡಿ ಬಲಾತ್ಕರಿಸಿದ್ದಾರೆ ಎಂದು ಯುವತಿಯ ತಾಯಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ಬಸವನಗರ ನಿವಾಸಿ ಕುಮಾರ ಬಸವರಾಜ ಜತ್ತಿ (24) ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಜಾಲ ಬೀಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement