ಇದು ರಮ್ಯಾ, ಸುರೇಶ್ ಕಾಲ...
ಲೋಕಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವಿನ ಸಿಹಿ, ಗೌಡರ ಭದ್ರಕೋಟೆಗೆ ಲಗ್ಗೆ ಹಾಕಿದ ಸಂಭ್ರಮ
ಸಿಎಂ ಸಿದ್ದರಾಮಯ್ಯ ಸೆಂಚುರಿಯಾಟಕ್ಕೆ ಹೊಸ ಮೆರುಗು, ಲೋಕಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವಿನ ಸಿಹಿ, ಗೌಡರ ಭದ್ರಕೋಟೆಗೆ ಲಗ್ಗೆ ಹಾಕಿದ ಸಂಭ್ರಮ, ಜೆಡಿಎಸ್ ಅಂಗಳದಲ್ಲಿ ಎರಡೂ ಸ್ಥಾನ ಕಳೆದುಕೊಂಡ ನಿರಾಸೆ, ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಸ್ಥಾನಗಳಿಗೆ ರಾಜಿನಾಮೆ ನೀಡಲು ಮುಂದಾದ ಎಚ್.ಡಿ. ಕುಮಾರಸ್ವಾಮಿ
ಇದು ನನ್ನ ಗೆಲವಲ್ಲ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಗೆಲವು. ಈ ಜಯವನ್ನು ನಾನು ಸಂಪೂರ್ಣವಾಗಿ ಮಂಡ್ಯದ ನನ್ನ ತಂದೆ, ತಾಯಿ, ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರಿಗೆ ಅರ್ಪಿಸುತ್ತೇನೆ. ನನ್ನ ತಂದೆಯ ಮೂಲವನ್ನೇ ಪ್ರಶ್ನಿಸಿದ್ದವರಿಗೆ ಜನತೆ ಸೂಕ್ತ ಉತ್ತರ ನೀಡಿದ್ದಾರೆ.
ಮಂಡ್ಯದ ಹಳ್ಳಿಯೊಂದರಲ್ಲಿ ತೊಟ್ಟಿ ಮನೆ ಬಾಡಿಗೆ ಪಡೆದು ಆ ಮನೆಯಲ್ಲೇ ವಾಸ ಮಾಡುತ್ತೇನೆ.
-ರಮ್ಯಾ, ಗೆದ್ದ ಕಾಂಗ್ರೆಸ್ ಅಭ್ಯರ್ಥಿ
ಅನೈತಿಕ ಮೈತ್ರಿ ಮತ್ತು ಅನುಕೂಲ ಸಿಂಧು ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಇದು ನನ್ನ ವೈಯಕ್ತಿಕ ಅಥವಾ ಕುಟುಂಬದ ಗೆಲವಲ್ಲ. ಕಾಂಗ್ರೆಸ್ ಗೆಲವು. ಕೋಮುವಾದಿಗಳಿಗೆ ಆಸ್ಪದ ನೀಡಿಲ್ಲ. ಬಿಜೆಪಿ, ಜೆಡಿಎಸ್ ಒಂದಾದರೂ ನಮ್ಮ ಸಮನಾಗಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಇದು ಕಾಂಗ್ರೆಸ್ನ ತಾಕತ್ತು, ಅದೀಗ ಸಾಬೀತಾಗಿದೆ.
-ಡಿ.ಕೆ.ಸುರೇಶ್, ಗೆದ್ದ ಕಾಂಗ್ರೆಸ್ ಅಭ್ಯರ್ಥಿ
ಮಂಡ್ಯ ಸಂಸತ್ ಕ್ಷೇತ್ರ ಉಪ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಸೋಲಿನ ಕುರಿತು ಆತ್ಮಾವಲೋಕನ ಅಗತ್ಯವಿದೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾತ್ರಕ್ಕೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಚುನಾವಣೆ ಎಂದ ಮೇಲೆ ಸೋಲು- ಗೆಲವು ಸಹಜ.
-ಸಿ.ಎಸ್. ಪುಟ್ಟರಾಜು ಸೋತ ಜೆಡಿಎಸ್ ಅಭ್ಯರ್ಥಿ
ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಇವರ ಅವಕಾಶವಾದಿ ರಾಜಕೀಯ ದುರುದ್ದೇಶಗಳು ಜನರಿಗೆ ಅರ್ಥವಾಗಿದೆ. ಬಿಜೆಪಿಗೆ ರಾಜ್ಯದ ಜನರಿಗೆ ಮುಖ ತೋರಿಸಲಾಗದಂತಹ ಅವಮಾನವಾಗಿದೆ. ಈ ಎರಡು ಚುನಾವಣೆಗಳಷ್ಟೇ ಅಲ್ಲ, ಮುಂದೆಯೂ ಕೂಡ ಕಾಂಗ್ರೆಸ್ ಗೆಲ್ಲಲಿದೆ.
- ಸಿದ್ದರಾಮಯ್ಯ ಮುಖ್ಯಮಂತ್ರಿ
ಭಿನ್ನಮತ ಬದಿಗೊತ್ತಿ ಹೋರಾಡಿದರೆ ಕಾಂಗ್ರೆಸ್ಗೆ ಯಾರೂ ಸಮಾನರಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ನನ್ನ ಹೋರಾಟದ ಗೆಲವು ಕುಚುಕು ಗೆಳೆಯ ವಿಷ್ಣುವರ್ಧನ ನೋಡಿದ್ದರೆ ಇನ್ನೂ ಸಂತಸವಾಗುತ್ತಿತ್ತು. ಮಂಡ್ಯದ ಜನತೆ ಕಾಂಗ್ರೆಸ್ ಕೈಬಿಡುವುದಿಲ್ಲ ಎಂಬುದು ಸಾಬೀತಾಗಿದೆ.
-ಅಂಬರೀಷ್ ವಸತಿ ಸಚಿವ
ಒಂದು ಪಕ್ಷ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಆ ಪಕ್ಷ ಗೆಲ್ಲುವುದು ಸಹಜ. ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತಂತೆ ಜನರಲ್ಲಿ ಇದ್ದ ಗೊಂದಲದಿಂದಾಗಿ ಸೋಲಾಗಿದೆ. ಮೈತ್ರಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಹೇಳಿಕೆಗಳು ಈ ಗೊಂದಲಕ್ಕೆ ಕಾರಣ.
-ಡಿ.ವಿ. ಸದಾನಂದಗೌಡ ಮಾಜಿ ಮುಖ್ಯಮಂತ್ರಿ
ಇಷ್ಟೊಂದು ಅಂತರದ ಸೋಲನ್ನು ಕನಸು, ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಜನ ಬಲದ ಎದುರು ಹಣ ಬಲದ ಕೈ ಮೇಲಾಗಿದೆ. ನಮ್ಮ ಕುಟುಂಬಕ್ಕೆ ಸೋಲು, ಗೆಲುವು ಹೊಸದೇನಲ್ಲ. ಸೋಲಿಗೆ ಬೆನ್ನುತೋರಿಸಿ ಹೋಗುವುದಿಲ್ಲ. ಜನರ ಮಧ್ಯೆಯೇ ಇದ್ದು ಕೆಲಸ ಮಾಡಿ ತೋರಿಸುತ್ತೇನೆ.
-ಅನಿತಾ ಕುಮಾರಸ್ವಾಮಿ ಸೋತ ಜೆಡಿಎಸ್ ಅಭ್ಯರ್ಥಿ
ಇದು ಸೆಮಿಫೈನಲ್ ಅಷ್ಟೇ, ಫೈನಲ್ ಮುಂದಿದೆ. 2014ರ ಫೈನಲ್ನಲ್ಲಿ ಜನರು ತೋರುವ ಭಾವನೆಯ ಸ್ಯಾಂಪಲ್ ಮಾತ್ರ ಇದು. ಕಾದು ನೋಡಿ, ಕಾಂಗ್ರೆಸ್ ಎಂತಹ ಮೋಡಿ ಮಾಡಲಿದೆ. ಬಿಜೆಪಿ-ಜೆಡಿಎಸ್ ಒಂದಾದರೂ ನಮ್ಮನ್ನು ಏನೂ ಮಾಡಲಾಗಲಿಲ್ಲ.
-ಡಿ.ಕೆ.ಶಿವಕುಮಾರ್ ಶಾಸಕ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರು ತಿಂಗಳಲ್ಲಿ ಮಾಡಿದ ಸಾಧನೆಯನ್ನು ಜನ ಗುರುತಿಸಿ ಕಾಂಗ್ರೆಸ್ ಪರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಜನಾಭಿಪ್ರಾಯ ನೀಡಿದ ಮತದಾರರಿಗೆ ಅಭಿನಂದನೆಗಳು.
-ಎಸ್.ಎಂ. ಕೃಷ್ಣ ಕೇಂದ್ರದ ಮಾಜಿ ಸಚಿವ
ಎರಡು ಲೋಕಸಭೆ ಚುನಾವಣೆಗಳ ಸೋಲಿಗೆ ಬೇಸರವಾಗಿದೆ. ಇದರ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ನನಗೆ ವಿಶ್ರಾಂತಿ ನೀಡಬೇಕು ಎಂದು ಜನ ಬಯಸಿರಬಹುದು. ಅದಕ್ಕೇ ವಿಶ್ರಾಂತಿಯಲ್ಲಿರುತ್ತೇನೆ.
-ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ