ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಈ ಇಲಾಖೆಯಲ್ಲಿ 'ಸಂಸ್ಕೃತಿ' ಹಗರಣ!

ಕನ್ನಡ ರಾಜ್ಯೋತ್ಸವದೊಳಗಾಗಿ 'ಸಾಂಸ್ಕೃತಿಕ ಹಗರಣ'ದ ಬಗ್ಗೆ ಆರೋಪಪಟ್ಟಿ ಸಲ್ಲಿಸಲು ನಿರ್ಧರಿಸಿರುವ ಲೋಕಾಯುಕ್ತ ಪೊಲೀಸರ ಪ್ರಯತ್ನಕ್ಕೆ...

Srinivasa Murthy VN
Updated On : 27 Aug 2013, 11:43 am

ಬೆಂಗಳೂರು: ಕನ್ನಡ ರಾಜ್ಯೋತ್ಸವದೊಳಗಾಗಿ 'ಸಾಂಸ್ಕೃತಿಕ ಹಗರಣ'ದ ಬಗ್ಗೆ ಆರೋಪಪಟ್ಟಿ ಸಲ್ಲಿಸಲು ನಿರ್ಧರಿಸಿರುವ ಲೋಕಾಯುಕ್ತ ಪೊಲೀಸರ ಪ್ರಯತ್ನಕ್ಕೆ ಸರ್ಕಾರದಿಂದಲೇ ಅಡ್ಡಿಯುಂಟಾಗಿದೆ.
ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ 'ಚಿಂತಕರ ಚಾವಡಿ'ಯ ಮಂದಿ ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿ ಅಗತ್ಯ ಎಂದು ಪ್ರತಿಪಾದಿಸುತ್ತಿದೆ. ಆದರೆ ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದ ಹಗರಣದ ತನಿಖೆಗೆ ಅಗತ್ಯ ವಿವರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಲೋಕಾಯುಕ್ತಕ್ಕೆ ಸಲ್ಲಿಸದೇ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಇದರಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ರಾಜ್ಯೋತ್ಸವದ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಿ, ಸರ್ಕಾರಕ್ಕೆ ವರದಿ ನೀಡಬೇಕೆಂಬ ಲೋಕಾಯುಕ್ತ ಪೊಲೀಸರ ಪ್ರಯತ್ನಕ್ಕೆ ಅಡಚಣೆಯುಂಟಾಗುತ್ತಿದೆ.

ಸಾಂದರ್ಭಿಕ ವೆಚ್ಚ: ಲೋಕಾಯುಕ್ತ ಪೊಲೀಸ್ ಮೂಲಗಳ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದು ಬಂದಿರುವ ಅವ್ಯವಹಾರಕ್ಕೆ ಮೂಲಾಧಾರ 'ಸಾಂದರ್ಭಿಕ ವೆಚ್ಚ'! ಸರ್ಕಾರದ ಯಾವುದೇ ಇಲಾಖೆಯ ವ್ಯವಹಾರದಲ್ಲಿ ಈ ಪಾರಿಭಾಷಿಕ ಪದದ ಪ್ರಯೋಗವಾಗಲಿ, ಅನುಸರಣೆಯಾಗಲಿ ಇಲ್ಲ. ಏಕೆಂದರೆ ಈ ಬಳಕೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಮೂದಿಸುವ ಮಿಸಲೇನಿಯಸ್ ಶಬ್ದಕ್ಕೆ ಬದಲಾಗಿ ಪ್ರಿನ್ಸಿಪಲ್ ಅಮೌಂಟ್ ಎಂಬ ಹೆಸರಿನಲ್ಲಿ ಖರ್ಚಾಗಿದೆ.
ಆದರೆ ಸಂಸ್ಕೃತಿ ಇಲಾಖೆಯಲ್ಲಿ ಮಾತ್ರ ಇಂತದೊಂದು ಹೊಸ ಪರಿಕಲ್ಪನೆ ಹಲವು ವರ್ಷಗಳಿಂದ ಗುಟ್ಟಾಗಿ ನಡೆದುಕೊಂಡು ಬಂದಿದೆ. ಸಾಂದರ್ಭಿಕ ವೆಚ್ಚದ ಹೆಸರಿನಲ್ಲಿ ಕೋಟ್ಯಂತರ ರು. ಸರ್ಕಾರಿ ಹಣ ಇಲಾಖೆಯಲ್ಲಿರುವ ಹೆಗ್ಗಣಗಳ ಪಾಲಾಗಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿರುವ ಪ್ರತಿ ಕಡತದಲ್ಲೂ ಈ ಸಾಂದರ್ಭಿಕ ವೆಚ್ಚದ ಪ್ರಸ್ತಾಪವಿದೆ. ಇದನ್ನೇ ಪ್ರಧಾನವಾಗಿರಿಸಿಕೊಂಡು ತನಿಖೆ ನಡೆಸುತ್ತಿರುವ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ.
ಆದರೆ ಆರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲಿ ಸಾಂದರ್ಭಿಕ ವೆಚ್ಚ ಎಂದರೇನು? ಸರ್ಕಾರ ಯಾವ ಮಾನದಂಡದ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಈ ವೆಚ್ಚವನ್ನು ಭರಿಸಿದೆ? ಆಡಳಿತಾತ್ಮಕ ಕಡತ ಹೇಗೆ ವಿಲೇವಾರಿಯಾಗಿದೆ? ಬೇರೆ ಯಾವುದೇ ಇಲಾಖೆ ವ್ಯವಹಾರದಲ್ಲಿ ಇಲ್ಲದ ಈ ಪಾರಿಭಾಷೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನುಸುಳಿದ್ದು ಹೇಗೆ? ಇದಕ್ಕೆ ಸರ್ಕಾರದ ಮಾನ್ಯತೆ ಇದೆಯೇ? ಎಂಬಿತ್ಯಾದಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಇಲಾಖೆಗೆ ಪತ್ರ ಬರೆದು ಕೆಲ ಸಮಯ ಕಳೆದಿದೆ. ಆದರೆ ಡಿಪಿಎಆರ್ ಮಾತ್ರ ಈ ಬಗ್ಗೆ ಜಪ್ಪಯ್ಯ ಎಂದರೂ ಬಗ್ಗುತ್ತಿಲ್ಲ. ಸಾಂದರ್ಭಿಕ ವೆಚ್ಚದ ವ್ಯಾಖ್ಯಾನ ಮಾಡಿ ಲೋಕಾಯುಕ್ತಕ್ಕೆ ಪ್ರತಿಕ್ರಿಯೆ ನೀಡಿದ ತಕ್ಷಣ ಆರೋಪಪಟ್ಟಿ ಸಲ್ಲಿಸುವುದಕ್ಕೆ ಲೋಕಾಯುಕ್ತ ಪೊಲೀಸರು ಸಿದ್ದರಿದ್ದಾರೆ.

80ಕ್ಕೂ ಹೆಚ್ಚು ಪ್ರಕರಣ: ಅಧಿಕಾರಿಯೊಬ್ಬರ ಪ್ರಕಾರ ಈ ಸಾಂದರ್ಭಿಕ ವೆಚ್ಚವನ್ನು ಬೇಕಾಬಿಟ್ಟಿ ಬಳಸಲಾಗಿದೆ. ಸರ್ಕಾರ ನಿಗದಿಗೊಳಿಸಿದ ಹಬ್ಬ, ದಿನಾಚರಣೆಗಳು ಮಾತ್ರವಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಮ್ಮ ಮನಸಿಗೆ ಬಂದಂತೆ ಒಂದಿಷ್ಟು ದಿನಾಚರಣೆಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ತನಿಖೆ ಸಂದರ್ಭದಲ್ಲಿ 2 ಪುಟಗಳಿಗೂ ಮಿಕ್ಕಿ ಇಂಥ ದಿನಾಚರಣೆಗಳ ಪಟ್ಟಿ ಲಭ್ಯವಾಗಿದೆ. ಯಾವುದೇ ದಿನಾಚರಣೆ ಹೆಸರು ಬರೆದು ಅದರ ಕೆಳಗಡೆ ಸಾಂದರ್ಭಿಕ ವೆಚ್ಚ 95 ಲಕ್ಷ ಎಂದು ಬರೆಯುತ್ತಾರೆ. ಇದಕ್ಕೆ ಪೂರಕವಾಗಿ ನಾಲ್ಕಾರು ಜನರನ್ನು ಖರ್ಚಿ ಮೇಲೆ ಕುಳ್ಳಿರಿಸಿದ ವೇದಿಕೆಯ ಚಿತ್ರ ಇಡಲಾಗುತ್ತದೆ. ಆದರೆ ಸಮಾರಂಭಕ್ಕೆ ಬಂದ ಜನರೆಷ್ಟು ಎಂಬ ವಿವರ ಮತ್ತು ಭಾವಚಿತ್ರ ಇರುವುದಿಲ್ಲ. ಇಂಥ 80ಕ್ಕೂ ಹೆಚ್ಚು ಪ್ರಕರಣಗಳ ವಿವರ ಲಭಿಸಿದ್ದು, ಮೊದಲ ಹಂತದಲ್ಲಿ 2 ಪ್ರಕರಣಗಳಿಗೆ ಆರೋಪ ಪಟ್ಟಿ ಸಲ್ಲಿಸಿ ನಂತರ ಉಳಿದವುಗಳಿಗೆ ವಿಸ್ತರಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ.

ಅಬಕಾರಿ ಇಲಾಖೆನಾ ಬಿಡಿ, ಸಂಸ್ಕೃತಿ ಇಲಾಖೆಯಲ್ಲೂ ಹೀಗೇನಾ? ಎಂದು ಪ್ರಶ್ನಿಸುವ ಮಡಿವಂತಿಕೆ ಮೊದಲು ಬದಲಾಗಬೇಕು. ಯಾವ ಇಲಾಖೆಯಲ್ಲಾದರೂ ಜನರ ದುಡ್ಡು ಸಮರ್ಪಕವಾಗಿ ಬಳಕೆಯಾಗಬೇಕು. ಲೋಕಾಯುಕ್ತದವರು ಪತ್ರ ಬರೆದ ಮೇಲೆ ಉತ್ತರಿಸಲೇಬೇಕು. ಸಾಂದರ್ಭಿಕ ವೆಚ್ಚ ಎಂಬ ಹೆಸರಿನಲ್ಲಿ ಹಗರಣ ನಡೆದಿದೆ ಎಂಬುದೇ ಕುತೂಹಲಕಾರಿ. ಲೋಕಾಯುಕ್ತದವರು ಈ ಪ್ರಕರಣದ ಬೆನ್ನು ಬಿಡಬಾರದು.
- ಪ್ರೊ. ಚಂದ್ರಶೇಖರ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ

- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement