ಚಿನ್ನ ಲೇಪಿತ ಅಂಬಾರಿ ಚೆನ್ನ!
ಮೈಸೂರು ದಸರಾ ಉತ್ಸವದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಿಸಿ ಆನೆಗೆ ಹಿಂಸೆ ನೀಡುವ ಅಗತ್ಯವಿದೆಯೇ?ಇದು ಹೈಕೋರ್ಟ್ ಮುಂದಿಟ್ಟಿರುವ ಪ್ರಶ್ನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಆ.26
ಮೈಸೂರು ದಸರಾ ಉತ್ಸವದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಿಸಿ ಆನೆಗೆ ಹಿಂಸೆ ನೀಡುವ ಅಗತ್ಯವಿದೆಯೇ? ಇದರ ಬದಲಿಗೆ ಕಡಿಮೆ ತೂಕದ ಚಿನ್ನ ಲೇಪಿತ ಅಂಬಾರಿಯನ್ನೇಕೆ ಬಳಸಬಾರದು..?
-ಇದು ಹೈಕೋರ್ಟ್ ಸರ್ಕಾರದ ಮುಂದಿಟ್ಟಿರುವ ಪ್ರಶ್ನೆ. ಅಂಬಾರಿ ಹೊರುವುದರಿಂದ ಆನೆಗೆ ತೊಂದರೆಯಾಗುತ್ತಿದ್ದರೆ, ಅದನ್ನೇಕೆ ಮುಂದುವರಿಸಬೇಕು. ಗಾಡಿಯಲ್ಲಿ ಅಂಬಾರಿಯನ್ನು ಮೆರವಣಿಗೆ ಮಾಡುವ ವ್ಯವಸ್ಥೆಯನ್ನೇಕೆ ಅಳವಡಿಸಿಕೊಳ್ಳಬಾರದು. ಇಂದಿನ ವೈಜ್ಞಾನಿಕ ಪದ್ಧತಿಗಳನ್ನೇಕೆ ಜಾರಿಗೆ ತರಬಾರದು ಎಂದು ನ್ಯಾಯಾಲಯ ಕೇಳಿದೆ.
ಇದೊಂದು ಸಾಂಸ್ಕೃತಿಕ ಸಂಗತಿಯಾಗಿದ್ದು, ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ನಾವು ಯಾವುದೇ ಆದೇಶ ನೀಡಲಾಗದು. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ನಾವು ಸಲಹೆ ನೀಡ ಬಯಸುತ್ತೇವೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ದಸರೆಗೆ ನೂರಾರು ವರ್ಷಗಳ ಇತಿಹಾಸವಿದೆ ಎಂದ ಮಾತ್ರಕ್ಕೆ ಆ ಪರಂಪರೆಯನ್ನು ಮುಂದುವರಿಸಬೇಕೆಂದಿಲ್ಲ. ಹಿಂದೆ ರಾಜರು ಹಾಗೂ ಬ್ರಿಟಿಷರು ತಮ್ಮದೇ ಆದ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ರಾಜರ ಕಾಲದಲ್ಲಿ ವೈಭವವನ್ನು ಪ್ರದರ್ಶಿಸುವ ಸಲುವಾಗಿ ಅಂಬಾರಿಯನ್ನು ಹೊರಿಸಲಾಗುತ್ತಿತ್ತು.
ಆ ರಾಜರು ಜನರಿಗಾಗಿ ಕೆಲಸ ಮಾಡಿಲ್ಲ. ಬ್ರಿಟಿಷರು ತಮ್ಮದೇ ಆದ ರೀತಿಯಲ್ಲಿ ನಮ್ಮನ್ನಾಳಿದರು. ಆದರೆ, ಇದೀಗ ನಾವು ಸ್ವತಂತ್ರಭಾರತದಲ್ಲಿದ್ದೇವೆ. ನಮ್ಮ ಜನರಿಗೆ ಎಲ್ಲದರಲ್ಲೂ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸ್ವತಂತ್ರವಾಗಿ ಚಿಂತಿಸುವುದನ್ನು ಮಾತ್ರ ಕಲಿತಿಲ್ಲ ಎಂದು ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ಆನೆಯ ಮೇಲೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಿಸುವುದರಿಂದ ಅದಕ್ಕೆ ಹಿಂಸೆಯಾಗುತ್ತದೆ. ಆದ್ದರಿಂದ ರದ್ದುಗೊಳಿಸಬೇಕು ಎಂದು ಆನೆಗಳ ಸಂರಕ್ಷಣಾ ವರದಿ ಶಿಫಾರಸನ್ನು ಅಂಗೀಕರಿಸಲಾಗದು ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದಾಗ, ಪೀಠ ಈ ಸಲಹೆ ನೀಡಿದೆ.
ಈ ಸಂದರ್ಭದಲ್ಲಿ ಹಾಜರಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ವಿಜ್ಞಾನಿ ಹಾಗೂ ಗಜಪಡೆ ಅಧ್ಯಕ್ಷ ರಾಮನ್ ಸುಕುಮಾರನ್, ಆನೆಗಳಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಅಂಬಾರಿ ಹೊರಿಸುವ ಪದ್ಧತಿ ರದ್ದುಗೊಳಿಸುವ ಸಲಹೆ ನೀಡಲಾಗಿದೆ. ಆದರೆ, ಅದನ್ನು ಅಂಗೀಕರಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಕಾರ್ಯಪಡೆಯ ಪರ ವಕೀಲರಾದ ರವೀಂದ್ರನಾಥ್ ಕಾಮತ್ ಅವರು, ಆನೆಗಳ ಮೇಲೆ ಅಂಬಾರಿ ಹೊರಿಸುವುದು ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರತೀಥಿ. ಇದನ್ನು ಹಠಾತ್ತಾಗಿ ಸ್ಥಗಿತಗೊಳಿಸುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಇಲ್ಲಿಯವರೆಗೆ ಅಂಬಾರಿ ಹೊತ್ತ ಯಾವ ಆನೆಗೂ ಕೂಡ ತೊಂದರೆಯಾಗಿಲ್ಲ . ಕಳೆದ 20 ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ದ್ರೋಣ ಎಂಬ ಆನೆ ಕಾಡಿನಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ ಎಂದು ವಿವರಿಸಿದರು. ಈ ಕುರಿತು ಸರ್ಕಾರಿ ವಕೀಲರ ವಾದ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ತಜ್ಞರ ಸಮಿತಿ ಬೇಡ; ಆನೆಗಳ ಸಂರಕ್ಷಣೆ ಕುರಿತು ಕ್ರಮ ತೆಗೆದುಕೊಳ್ಳಲು ಕರ್ನಾಟಕ ಆನೆಗಳ ತಜ್ಞರ ತಂಡ (ಕೆಇಇಜಿ) ರಚಿಸಬೇಕು. ಈ ತಂಡ ಕೇಂದ್ರ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯವನ್ನು ನಿಯಂತ್ರಿಸಲಿದೆ ಎಂಬ ಶಿಫಾರಸನ್ನು ಅಂಗೀಕರಿಸಲು ಸರ್ಕಾರ ನಿರಾಕರಿಸಿದೆ. ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅವರದ್ದೇ ಆದ ಸಂವಿಧಾನಾತ್ಮಕ ಅಧಿಕಾರವಿದೆ. ಅದನ್ನು ಮೀರಲಾಗದು. ತಜ್ಞರ ಸಮಿತಿ ಅವರ ಮೇಲೆ ನಿಯಂತ್ರಣ ಹೇರಲು ಅವಕಾಶ ಕಲ್ಪಿಸಲಾಗದು ಎಂದು ಸರ್ಕಾರಿ ವಕೀಲರಾದ ರವೀಂದ್ರ ಕೊಲ್ಲೆ ಸ್ಪಷ್ಟಪಡಿಸಿದರು.