ನೂರು ಕನಸು
ಕರ್ನಾಟಕವನ್ನು ಹಸಿವುಮುಕ್ತ ರಾಜ್ಯವಾಗಿ ರೂಪಿಸುವುದು ಕಾಂಗ್ರೆಸ್ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ...
ಬೆಂಗಳೂರು: ಕರ್ನಾಟಕವನ್ನು ಹಸಿವುಮುಕ್ತ ರಾಜ್ಯವಾಗಿ ರೂಪಿಸುವುದು ಕಾಂಗ್ರೆಸ್ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ರೂಪಿಸಿರುವುದರ ಜತೆಗೆ ಅದನ್ನು ಸಮರ್ಪಕವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ನಿಗದಿತ ಪಡಿತರ ವಿತರಿಸಲು ವಿಫಲವಾಗುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ 43 ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ 'ನೂರು ದಿನ ನೂರಾರು ನಿರ್ಣಯ' ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಬಡವರಿಗೆ ಪ್ರತಿ ಕೆ.ಜಿ.ಗೆ 1ರಂತೆ 30 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೋಳ, ರಾಗಿ, ಗೋದಿಯನ್ನೂ ವಿತರಿಸಲಾಗುವುದು. ಇದರ ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಆಹಾರ ಭದ್ರತಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಹಸಿವು ಮುಕ್ತ ರಾಜ್ಯವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಸಬ್ಸಿಡಿಗೆ ವಾರ್ಷಿಕ 4,200 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಹೊರೆಯಾದರೂ ಬಡ ಕುಟುಂಬವೊಂದಕ್ಕೆ ತಿಂಗಳಿಗೆ 800 ಉಳಿತಾಯವಾಗುತ್ತದೆ ಎಂದು ಅವರು ವಿವರಿಸಿದರು. ಕೇವಲ ಹಸಿವು ನೀಗಿಸುವುದು ಮಾತ್ರವಲ್ಲ, ಭವಿಷ್ಯದ ಪ್ರಜೆಗಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಯ ಉದ್ದೇಶ ಎಂದು ಅವರು ವಿವರಿಸಿದರು.
ಪ್ರತಿ ವರ್ಷ ಸರ್ಕಾರಿ ನೇಮಕಾತಿ: ಕೆಪಿಎಸ್ಸಿ ಪುನಾರಚನೆ ಕುರಿತಂತೆ ಯುಪಿಎಸ್ಸಿ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಪ್ರತಿ ವರ್ಷ ನೇಮಕ ಮಾಡಬೇಕು ಎಂದು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದ್ದು, ಇನ್ನು ಮುಂದೆ ಆಯಾ ವರ್ಷ ಖಾಲಿಯಾಗುವ ಹುದ್ದೆಗಳನ್ನು ಆಗಲೇ ಭರ್ತಿ ಮಾಡಲಾಗುವು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದಿರುವ ಕಾರ್ಯಕ್ರಮಗಳು, ಅದರ ಅವಶ್ಯಕತೆಗಳ ಕುರಿತು ವಿವರಿಸಿದ ಅವರು, ಅಧಿಕಾರಕ್ಕೆ ಬಂದ ಕೂಡಲೇ ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಾಗ ಆತುರಾತುರವಾಗಿ ಮಾಡಲಾಗುತ್ತಿದೆ.
ಇದು ಯಶಸ್ಸು ಕಾಣುವುದಿಲ್ಲ ಎಂಬ ಆರೋಪಗಳು ಬಂದವು. ಆದರೆ, ಈ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಮೀನಮೇಷ ಎಣಿಸಬಾರದು ಎಂಬ ಕಾರಣಕ್ಕೆ ಟೀಕೆಗಳನ್ನು ಬದಿಗಿಟ್ಟು ನಮ್ಮ ಸರ್ಕಾರ ಕೆಲಸ ಮಾಡಿತು ಎಂದರು.
ಸಾಲ ಕಡಿಮೆ ಮಾಡಲು ಕ್ರಮ: ಹಿಂದಿನ ಸರ್ಕಾರ ಸಾಲ ಹೆಚ್ಚು ಮಾಡಿದ್ದನ್ನು ಟೀಕಿಸಿ ಈಗ ಕಾಂಗ್ರೆಸ್ ಸರ್ಕಾರವೂ ಸಾಲ ಮಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಲ ಮಾಡಬಾರದು ಎಂಬುದು ತಮ್ಮ ವಾದವಲ್ಲ. ಆದರೆ, ಅದು ಸದುಪಯೋಗವಾಗಬೇಕು. ಜತೆಗೆ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಿ ಸಾಲ ಕಡಿಮೆ ಮಾಡಬೇಕು. ಪ್ರಸಕ್ತ ವರ್ಷ ಹೊಸ ಕಾರ್ಯಕ್ರಮಗಳನ್ನು ಘೋಷಿಸಿದ್ದರಿಂದ ಹೆಚ್ಚು ಸಾಲ ಮಾಡಬೇಕಾಯಿತು. ಆದರೆ, ಮುಂದಿನ ವರ್ಷದಿಂದ ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ ಕಡಿಮೆ ಸಾಲ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೆಲಸಗಳಿಂದಲೇ ಚುನಾವಣೆ ಗೆಲುವು
ಸರ್ಕಾರದ 100 ದಿನಗಳ ಅವಧಿಯಲ್ಲಿ ಯಾವುದೇ ಗೊಂದಲಗಳಿಲ್ಲದೆ 25 ದಿನ ಅಧಿವೇಶನ ನಡೆಸಿದ್ದೇ ದೊಡ್ಡ ಸಾಧನೆ. ಇದರ ಜತೆಗೆ ಉಪ ಚುನಾವಣೆಗಳು ಬಂದವು. ಆದರೂ ಸರ್ಕಾರ ಸಿಕ್ಕಿದ ಕೆಲವೇ ದಿನಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಟೀಕೆ, ಆರೋಪಗಳ ಮಧ್ಯೆಯೂ ತನ್ನ ಕೆಲಸ ಮುಂದುವರಿಸಿದೆ. ಇದರ ಪರಿಣಾಮವಾಗಿಯೇ ಲೋಕಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಸಾಧ್ಯವಾಯಿತು. ಜೆಡಿಎಸ್ಗೆ ಬಿಜೆಪಿ ಬೆಂಬಲದ ನಡುವೆಯೂ ಜೆಡಿಎಸ್ ಭದ್ರ ಕೋಟೆಯಲ್ಲಿ ಪಾರಮ್ಯ ಮೆರೆಯಲು ಸಾಧ್ಯವಾಯಿತು ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.