ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೇವೇಗೌಡರ ಕೈಗೆ ಖೂಬಾ ರಾಜಿನಾಮೆ

ಉಪ ಚುನಾವಣೆ ಸೋಲಿನ ಆತ್ಮಾವಲೋಕನ ನಡೆಸಿ ಹೊಸ ರಾಜ್ಯಾಧ್ಯಕ್ಷನನ್ನು ಆರಿಸುವ ಕಸರತ್ತಿನಲ್ಲಿ ತೊಡಗಿರುವಾಗಲೇ ಶಾಸಕರೊಬ್ಬರ ರಾಜಿನಾಮೆ ಪಕ್ಷವನ್ನು ತಲ್ಲಣಗೊಳಿಸಿದೆ.

Srinivasa Murthy VN
Updated On : 29 Aug 2013, 1:34 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.28-
ಲೋಕಸಭೆ ಉಪ ಚುನಾವಣೆ ಸೋಲಿನಿಂದ ಆಘಾತಗೊಂಡಿರುವ ಜೆಡಿಎಸ್, ಆತ್ಮಾವಲೋಕನ ನಡೆಸಿ ಹೊಸ ರಾಜ್ಯಾಧ್ಯಕ್ಷನನ್ನು ಆರಿಸುವ ಕಸರತ್ತಿನಲ್ಲಿ ತೊಡಗಿರುವಾಗಲೇ ಶಾಸಕರೊಬ್ಬರ ರಾಜಿನಾಮೆ ಪಕ್ಷವನ್ನು ತಲ್ಲಣಗೊಳಿಸಿದೆ.
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಆ ಕೋಟೆ ಲೋಕಸಭೆ ಉಪ ಚುನಾವಣೆಯಲ್ಲಿ ಛಿದ್ರವಾಗಿದೆ. ಹೀಗಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಸಂಘಟನೆಗೆ ಮುಂದಾಗುವ ಪ್ರಕ್ರಿಯೆಗೆ ಪಕ್ಷ ಬುಧವಾರ ಚಾಲನೆ ನೀಡಿತ್ತು. ಆದರೆ, ಆರಂಭದಲ್ಲೇ ವಿಘ್ನ ಎಂಬಂತೆ ಪಕ್ಷದಲ್ಲಿ ನಿಷ್ಠಾವಂತರಿಗೆ ಪ್ರಾತಿನಿಧ್ಯ ಇಲ್ಲ ಎಂದು ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಎಸ್. ಖುಬಾ ರಾಜಿನಾಮೆ ನೀಡಿದ್ದಾರೆ.
ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ರಾಜ್ಯ ಘಟಕದ ಪುನಾರಚನೆ ನಿರ್ಧಾರವನ್ನು ಜೆಡಿಎಸ್ ನಾಯಕರು ಕೈಗೊಂಡಿದ್ದಾರೆ.
ಇದಕ್ಕಿಂತ ಮುಖ್ಯವಾಗಿ, ಪಕ್ಷದಲ್ಲಿ ಒಂದಿಬ್ಬರೇ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ತಡೆ ಹಾಕಬೇಕು. ಯಾವುದೇ ನಿರ್ಧಾರ ಕೋರ್ ಕಮಿಟಿಯಲಿ ಆಗಲೇಬೇಕು ಎಂದು ನಿರ್ಧರಿಸಿ ಕೋರ್ ಕಮಿಟಿ ರಚನೆಗೆ ಜೆಡಿಎಸ್ ಮುಂದಾಗಿದೆ.
ಈ ಸಭೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ಅವರಿಗೆ ಆಹ್ವಾನ ಇರಲಿಲ್ಲ. ಆಹ್ವಾನ ಇದ್ದರೂ ಶಾಸಕ ಜಮೀರ್ ಅಹ್ಮದ್ ಬರಲಿಲ್ಲ. ಕೋರ್ ಕಮಿಟಿಯಲ್ಲಿ ಎಲ್ಲ ಸಮುದಾಯದ ನಾಯಕರು ಇರುವಂತೆಯೂ ನಿರ್ಧರಿಸಲಾಗಿದೆ.
ಇದೆಲ್ಲ ನಿರ್ಧಾರವಾಗುವ ಮುನ್ನವೇ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಎಸ್. ಖೂಬಾ ಅವರು ದೇವೇಗೌಡ ಅವರಿಗೆ ರಾಜಿನಾಮೆ ಸಲ್ಲಿಸಿ ಪಕ್ಷದಲ್ಲಿ ತಳಮಳ ಸೃಷ್ಟಿಸಿದ್ದಾರೆ.

'ಪಕ್ಷದಲ್ಲಿ ನಿಷ್ಠಾವಂತರಿಗೆ ಪ್ರಾಮುಖ್ಯ ಇಲ್ಲ. ಪಕ್ಷ ಸಂಘಟಿಸಲು ಮುಂದಾಗುತ್ತಿಲ್ಲ. ನನಗೆ ಮುಖ್ಯ ಸಚೇತಕ ಹುದ್ದೆ ನೀಡಬೇಕು ಎಂದು ಹಿಂದೆಯೇ ಮನವಿ ಮಾಡಿಕೊಂಡಿದ್ದೆ. ಆದರೆ ಕೊಟ್ಟಿಲ್ಲ. ತಿರಸ್ಕಾರದಿಂದ ಬೇಸರ ಉಂಟಾಗಿದೆ. ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಸ್ವೀಕರಿಸಿ' ಎಂದು ದೇವೇಗೌಡರಿಗೆ ಬರೆದಿರುವ ಪತ್ರದಲ್ಲಿ ಖೂಬ ತಿಳಿಸಿದ್ದಾರೆ.  ಆದರೆ, ಅವರು ರಾಜಿನಾಮೆ ಪತ್ರವನ್ನು ಸ್ಪೀಕರ್ ಅವರಿಗೆ ಸಲ್ಲಿಸಬೇಕು. ಸ್ಪೀಕರ್ ಅವರು ಸ್ವಕ್ಷೇತ್ರವಾದ ಸಾಗರದಲ್ಲಿದ್ದಾರೆ. ಮಲ್ಲಿಕಾರ್ಜುನ ಬೆಂಗಳೂರಿನಲ್ಲಿದ್ದಾರೆ. ಸ್ಪೀಕರ್ ಅವರಿಗೂ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಆಗಿಲ್ಲ. ಹೀಗಾಗಿ, ಖೂಬ 'ಬ್ಲ್ಯಾಕ್‌ಮೇಲ್‌' ಮಾಡುತ್ತಿದ್ದಾರೆ ಎಂದೂ ಜೆಡಿಎಸ್ ನಾಯಕರು ಹೇಳಿದ್ದಾರೆ.

ನಾಯಕರ ಸಭೆ: ಎಚ್.ಡಿ. ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್ ಮುಖಂಡರ ಸಭೆ ಮಾಜಿ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬುಧವಾರ ನಡೆಯಿತು. ಎಚ್.ಡಿ. ಕುಮಾರಸ್ವಾಮಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ಸಭೆಯಲ್ಲಿ ನಾಯಕರು ಒತ್ತಾಯಿಸಿದರೂ, 'ಇದು ಮುಗಿದ ವಿಷಯ. ಅವರ ರಾಜಿನಾಮೆಯನ್ನು ಅಂಗೀಕರಿಸಿಯೂ ಆಗಿದೆ. ಹೊಸ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಆಲೋಚಿಸಿ, ಅಭಿಪ್ರಾಯ ನೀಡಿ' ಎಂದು ದೇವೇಗೌಡರು ಸ್ಪಷ್ಪವಾಗಿ ಸೂಚಿಸಿದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆ ಒಂದೇ ಬಾರಿಗೆ ಸಾಧ್ಯವಾಗುವುದಿಲ್ಲ. ಎಲ್ಲ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಗುರುವಾರ ನಡೆಯಲಿದ್ದು ಅಲ್ಲೂ ಇದರ ಬಗ್ಗೆ ಚರ್ಚೆ ನಡೆಯಲಿದೆ. ನಂತರ ವಾರಾಂತ್ಯದಲ್ಲಿ ಜಿಲ್ಲಾಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರೊಂದಿಗೂ ಸಮಾಲೋಚನೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬಾರದು ಎಂದು ಈಗಾಗಲೇ ನಿರ್ಧರಿಸಿರುವುದರಿಂದ ಲಿಂಗಾಯತ ಸಮುದಾಯ ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಹೊರಟ್ಟಿ, ಹಿಂದುಳಿದ ವರ್ಗದ ಬಂಡೆಪ್ಪ ಕಾಶೆಂಪೂರ್, ಎ. ಕೃಷ್ಣಪ್ಪ, ಪಿಜಿಆರ್ ಸಿಂಧ್ಯ ಹಾಗೂ ಅಲ್ಪ ಸಂಖ್ಯಾತ ವರ್ಗದ ಇಕ್ಬಾಲ್ ಅನ್ಸಾರಿ ಅವರ ಹೆಸರು ಇದೀಗ ಪ್ರಮುಖವಾಗಿ ಕೇಳಿಬರುತ್ತಿವೆ.

ಕುಮಾರಸ್ವಾಮಿಗೆ ಆಹ್ವಾನ ಇಲ್ಲ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ ರೇವಣ್ಣ ಅವರಿಗೆ ಜೆಡಿಎಸ್ ನಾಯಕರ ಸಭೆಗೆ ಆಹ್ವಾನ ಇರಲಿಲ್ಲ. ಅವರದ್ದೇ ವಿಚಾರ ಚರ್ಚೆ ಆಗಬೇಕಾಗಿದ್ದರಿಂದ ಅವರನ್ನು ಸಭೆಯಲ್ಲಿ ಇರುವುದು ಬೇಡ ಎಂದು ಎಚ್.ಡಿ. ದೇವೇಗೌಡ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಶಾಸಕ ಚಲುವರಾಯ ಸ್ವಾಮಿ ಕೂಡ ಹಾಜರಿರಲಿಲ್ಲ. ಜೆಡಿಎಸ್‌ನಿಂದ ಈಗಾಗಲೇ ವಿಮುಖವಾಗಿರುವ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಆಹ್ವಾನ ಇದ್ದರೂ ಸಭೆಗೆ ಅವರು ಹಾಜರಾಗಲಿಲ್ಲ. ಹೀಗಾಗಿ, ಕೆಲವೇ ನಾಯಕರೊಂದಿಗೆ ಎಚ್.ಡಿ. ದೇವೇಗೌಡರು ಮಾತುಕತೆ ನಡೆಸಿದ್ದಾರೆ. ನಾಯಕರಾದ ಎಂ.ಸಿ. ನಾಣಯ್ಯ, ಬಸವರಾಜ ಹೊರಟ್ಟಿ, ವೈ.ಎಸ್.ವಿ. ದತ್ತ, ಎ. ಕೃಷ್ಣಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಬಂಡೆಪ್ಪ ಕಾಶಂಪೂರ್, ಜಿ.ಟಿ. ದೇವೇಗೌಡ, ಮಾನಪ್ಪ ವಜ್ಜಲ್, ಬಿ.ಬಿ. ನಿಂಗಯ್ಯ, ಮಧು ಬಂಗಾರಪ್ಪ ಸೇರಿದಂತೆ ಸುಮಾರು 30 ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕೋರ್ ಕಮಿಟಿ-ಎಚ್.ಡಿ. ದೇವೇಗೌಡ
ರಾಜ್ಯಾದ್ಯಂತ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಸರ್ವ ಸಮುದಾಯದ ನಾಯಕರನ್ನು ಒಳಗೊಂಡಿರುವ ಕೋರ್ ಕಮಿಟಿ ರಚಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷದ ನಾಯಕರ ಸಭೆ ನಡೆಸಲಾಗಿದೆ. ಮತ್ತೊಂದು ಬಾರಿ ನಾಯಕರ ಸಭೆ ನಡೆಯಲಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಾಧ್ಯಕ್ಷರನ್ನು ನೇಮಿಸಲಾಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಮಂಗಳವಾರ ಉತ್ತರ ದೊರೆಯಲಿದೆ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು. ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು, ಬೇಡ ಎಂಬುದರ ಬಗ್ಗೆ ಕಾರ್ಯಕರ್ತರಿಂದ ಸಲಹೆ ಸ್ವೀಕರಿಸಲಾಗುತ್ತದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕೋರ್ ಕಮಿಟಿ ಕೂಡ ಎಲ್ಲ ಭಾಗಗಳಿಗೂ ಭೇಟಿ ಮಾಡಿ ಪಕ್ಷ ಸಂಘಟಿಸಲಿದೆ ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಮಾನ್ಯತೆಗೂ ಕೊಕ್!
ವಿಧಾನಸಭೆಯಲ್ಲಿ ಬಿಜೆಪಿಯೊಂದಿಗೆ ಸಮಾನ ಸ್ಥಾನ ಹೊಂದಿದ್ದರೂ ಮತಗಳಿಕೆ ಆಧಾರದಲ್ಲಿ ಪ್ರತಿಪಕ್ಷದ ಮಾನ್ಯತೆ ಪಡೆದುಕೊಂಡಿದ್ದ ಜೆಡಿಎಸ್‌ಗೆ ಅದೂ ಕಳಚಿಕೊಳ್ಳುವ ಆತಂಕ ಎದುರಾಗಿದೆ. ಮಲ್ಲಿಕಾರ್ಜುನ ಎಸ್. ಖೂಬ ಅವರು ಸ್ಪೀಕರ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದರೆ ಎಚ್.ಡಿ. ಕುಮಾರಸ್ವಾಮಿ ಅವರಿಂದ ಪ್ರತಿಪಕ್ಷ ನಾಯಕ ಹುದ್ದೆ ದೂರವಾಗಲಿದೆ. ಹೀಗಾಗಿ, ಜೆಡಿಎಸ್‌ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನೇ ಮುಂದುವರಿಸಿದರೂ ಪ್ರತಿಪಕ್ಷ ನಾಯಕನ ಮಾನ್ಯತೆ ಹಾಗೂ ಗೂಟದ ಕಾರಿನಿಂದ ವಂಚಿತರಾಗಲಿದ್ದಾರೆ. ಖೂಬ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ರಾಜಿನಾಮೆ ಸಲ್ಲಿಸಿ, ಅದು ಒಪ್ಪಿಗೆ ಆದರೆ ಜೆಡಿಎಸ್‌ನ ಸಂಖ್ಯಾಬಲ 39ಕ್ಕೆ ಕುಸಿಯಲಿದೆ. 40 ಸ್ಥಾನ ಹೊಂದಿರುವ ಬಿಜೆಪಿಗೆ ಪ್ರತಿಪಕ್ಷದ ಮಾನ್ಯತೆ ಲಭ್ಯವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement